ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾರಾಷ್ಟ್ರದ ಮಳೆ ಅಬ್ಬರದಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ದೂಧಗಂಗಾ,ವೇದಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ ನದಿಗಳು ಉಕ್ಕಿ ಹರಿಯುತ್ತಿವೆ. ಈ ಭಾಗದ 23 ಸೇತುವೆ ಮುಳುಗಡೆಯಾಗಿವೆ. 44 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದ್ದು, ಬಸವನ ಕುಡಚಿ ಗ್ರಾಮದ 10ಕ್ಕೂ ಹೆಚ್ಚು ಮನೆಗಳಿಗೆ ಹಾಗೂ ಕೆಎಲ್‌ಇ ವೆಲ್‌ನೆಸ್ ಸೆಂಟರ್‌ಗೆ ನೀರು ನುಗ್ಗಿದೆ. ಮಳೆಯಿಂದಾಗಿ ನಾನಾ ಅವಾಂತರ ಸೃಷ್ಟಿಯಾಗಿವೆ. ಕೃಷ್ಣಾನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ಹಲವು ಗ್ರಾಮಗಳಿಗೆ ಕೃಷ್ಣಾ, ದೂಧಗಂಗಾ ನದಿ ನೀರು ನುಗ್ಗುವ ಸಾಧ್ಯತೆ ಇದೆ. ಮಳೆಗೆ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದ ಲಕ್ಷ್ಮೀನಾರಾಯಣ ಮಂದಿರ ಜಲಾವೃತಗೊಂಡಿದೆ.ವಂಟಮೂರಿ ಬಳಿ ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆ ಮುಳುಗಡೆಯಾಗಿದೆ. ಇಪ್ಪತ್ತಕ್ಕೂ ಅಧಿಕ ವಿದ್ಯುತ್ ಕಂಬಗಳು ಜಲಾವೃತಗೊಂಡಿವೆ. ನದಿಗೆ ಅಡ್ಡಲಾಗಿ ಕಟ್ಟಿದ ನೀರು ಶುದ್ಧೀಕರಣ ಘಟಕ ಕೂಡ ಮುಳುಗಡೆಯಾಗಿದೆ. ಬೆಳಗಾವಿ ತಾಲೂಕಿನ ಬಿಜಗರ್ಣಿ ಗ್ರಾಮದ ರೈತ ಏಕನಾಥ ಕಾಂಬಳೆ ಎಂಬುವರ ಶೆಡ್ ಕುಸಿದು ಬಿದ್ದಿದ್ದು, ಶೆಡ್‌ನಲ್ಲಿದ್ದ ಟ್ರ್ಯಾಕ್ಟರ್ ಸೇರಿದಂತೆ ಇತರೆ ವಸ್ತುಗಳು ಖಜಂಗೊಂಡಿವೆ. ಬಳ್ಳಾರಿ ನಾಲಾ ಮತ್ತು ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿರುವ ಹೊಲಗದ್ದೆಗಳಿಗೆ ನೀರು ನುಗ್ಗಿರುವುದರಿಂದ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ಜಲಾವೃತಗೊಂಡಿದೆ. ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ 10 ಕ್ರೇಸ್ಟ್ ಗೇಟ್‌ಗಳ ಮೂಲಕ 10 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗಿದೆ.ಇಂದು, ನಾಳೆ ಶಾಲಾ, ಕಾಲೇಜ್ ರಜೆ
ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ, ಬೈಲಹೊಂಗಲ, ಖಾನಾಪುರ, ಕಿತ್ತೂರು, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕಿನ ಶಾಲೆಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ಜುಲೈ 25 ಹಾಗೂ ಜುಲೈ 26 ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.