ಬಾಳೆಹೊನ್ನೂರುಬಾಳೆಹೊನ್ನೂರು ಹಾಗೂ ಖಾಂಡ್ಯ ಹೋಬಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪುನರ್ವಸು ಮಳೆ 2ನೇ ದಿನ ಮಂಗಳವಾರವೂ ಅಬ್ಬರ ಮುಂದುವರೆಸಿದ್ದು, ಜನಜೀವನ ತತ್ತರಗೊಂಡಿದೆ.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಬಾಳೆಹೊನ್ನೂರು ಹಾಗೂ ಖಾಂಡ್ಯ ಹೋಬಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪುನರ್ವಸು ಮಳೆ 2ನೇ ದಿನ ಮಂಗಳವಾರವೂ ಅಬ್ಬರ ಮುಂದುವರೆಸಿದ್ದು, ಜನಜೀವನ ತತ್ತರಗೊಂಡಿದೆ. ಮಳೆಯೊಂದಿಗೆ ಗಾಳಿ ಜೋರಾಗಿ ಬೀಸುತ್ತಿದೆ. ಪಟ್ಟಣದಲ್ಲಿ ಹರಿಯುವ ಭದ್ರಾನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಮಳೆ ಹೆಚ್ಚಾದ ಪರಿಣಾಮ ಭದ್ರಾನದಿ ದಡದ ಕೆಲವು ತೋಟ, ಗದ್ದೆಗಳಿಗೆ ಪ್ರವಾಹದ ನೀರು ಸ್ವಲ್ಪ ಮಟ್ಟದಲ್ಲಿ ನುಗ್ಗಿದೆ. ಖಾಂಡ್ಯದ ಇತಿಹಾಸ ಪ್ರಸಿದ್ಧ ಮಾರ್ಕಾಂಡೇಶ್ವರ ದೇವಸ್ಥಾನ ಬಳಿ ಭದ್ರಾನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಮಳೆ ಬಿರುಸಾಗಿ ಸಣ್ಣಪುಟ್ಟ ಹಳ್ಳಗಳಲ್ಲಿ ನೀರಿನ ಹರಿವು ಏರಿದೆ.ಗಾಳಿಯಿಂದ ಸಣ್ಣಪುಟ್ಟ ಮರಗಳು ತೋಟಗಳು, ಮುಖ್ಯರಸ್ತೆಗಳ ಬದಿಗಳಲ್ಲಿ ಬೀಳುತ್ತಿವೆ. ಹಲವು ಕಡೆಗಳಲ್ಲಿ ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕಕ್ಕೆ ಶ್ರಮಿಸುತ್ತಿದ್ದು, ಗಾಳಿಯಿಂದ ಪದೇ ಪದೇ ಸಂಪರ್ಕ ಕಡಿತಗೊಳ್ಳುತ್ತಿದೆ. ಹಲವು ಕಾಫಿ ತೋಟಗಳಲ್ಲಿ ಕಾರ್ಮಿಕರಿಗೆ ರಜೆ ಘೋಷಿಸಲಾಗಿದೆ. ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿದೆ.
ಸಣ್ಣಪುಟ್ಟ ಹಳ್ಳಕೊಳ್ಳಗಳಲ್ಲಿ ನೀರಿನ ಹರಿವು ಏರಿ ಮಲೆನಾಡು ಭಾಗದಲ್ಲಿ ಮೀನು ಶಿಕಾರಿ ಜೋರಾಗಿದೆ. ರಾತ್ರಿ ವೇಳೆ ಟಾರ್ಚ್ ಬೆಳಕಿನಲ್ಲಿ ಮೀನು ಹಿಡಿಯುವವರ ಸಂಖ್ಯೆ ಹೆಚ್ಚಿದೆ. ಹಲವು ಕಡೆ ಮೀನು ಹಿಡಿಯುವ ಸಾಧನ ಕೂಳೆಯನ್ನು ಹಳ್ಳಗಳಿಗೆ ಹಾಕಿದ್ದು, ಏಡಿ, ಮೀನಿನ ಶಿಕಾರಿ ಭರ್ಜರಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ನದಿಪಾತ್ರದ ಜನರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗರೂಕ ಕ್ರಮಗಳನ್ನು ಕೈಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ವರೆಗೂ ಬಾಳೆಹೊನ್ನೂರು ವ್ಯಾಪ್ತಿಯ ದೇವಗೋಡಿನಲ್ಲಿ 1.25, ಜೇನುಗದ್ದೆ 1.50, ಬಿಕ್ಕರಣೆ 1.50, ಕುಂಬರಗೋಡು 0.85, ಹುಯಿಗೆರೆ 1.19, ಅರಳೀಕೊಪ್ಪ 2.27, ಕಾರ್ಕಿ 1.35, ಮಣಬೂರು 1.30, ಮಾಗುಂಡಿ 1.35, ಬೆಳಸೆ 0.88, ಹುಯಿಗೆರೆ 1.55, ಉಜ್ಜಿನಿ 1.22, ಮೇಲ್ಪಾಲ್ 3.40, ಸಿದ್ದಾಪುರ 2.00, ನೇಮನಹಳ್ಳಿ 1.40, ಮೇಗರಮಕ್ಕಿ 1.60, ಇಂಚು ಮಳೆ ಸುರಿದಿದೆ.೦೭ಬಿಹೆಚ್‌ಆರ್ ೧: ಬಾಳೆಹೊನ್ನೂರು ಪಟ್ಟಣದಲ್ಲಿ ಹರಿಯುವ ನದಿಯು ಪುನರ್ವಸು ಮಳೆಯ ಅಬ್ಬರಕ್ಕೆ ಮೈದುಂಬಿ ಅಪಾಯದಮಟ್ಟದಲ್ಲಿ ಹರಿಯುತ್ತಿದೆ.೦೭ಬಿಹೆಚ್‌ಆರ್ ೨: ಬಾಳೆಹೊನ್ನೂರು ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿದಾಗ ಕಂಡುಬಂದ ದೃಶ್ಯ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.