ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾನಗರ ಪಾಲಿಕೆಯ ಸೂಚನೆಗಳಿದ್ದರೂ ಅತಿಕ್ರಮಣ ತೆರವುಗೊಳಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ರಸ್ತೆ ಮೇಲೆ ಇಡಲಾಗಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತೆರವುಗೊಳಿಸಿದರು. ಬಳಿಕ, ಆ ವಸ್ತುಗಳನ್ನು ಗಿರಿಯಾಸ್ ಮಳಿಗೆ ಅಂಗಳಕ್ಕೆ ಜೆಸಿಬಿ ಯಂತ್ರದ ಮೂಲಕ ಹಾಕಲಾಯಿತು.
ಸ್ಥಳೀಯರ ದೂರುಗಳ ಮೇರೆಗೆ ಕೈಗೊಳ್ಳಲಾದ ಈ ಕ್ರಮದಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಸಂಚಾರ ಅಡಚಣೆ ನಿವಾರಣೆಯಾಗಿದೆ. ರಸ್ತೆಗಳನ್ನು ಅತಿಕ್ರಮಿಸಿ ವ್ಯಾಪಾರ ನಡೆಸುವುದು ಅಥವಾ ವಸ್ತುಗಳನ್ನು ಸಂಗ್ರಹಿಸುವುದು ಕಾನೂನು ಬಾಹಿರವಾಗಿದ್ದು, ಇದನ್ನು ಸಹಿಸಲಾಗುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.ಇದೇ ವೇಳೆ ಹಿಂಡಲಗಾ ರಸ್ತೆಯಲ್ಲಿನ ಅನಧಿಕೃತ ಗೂಡಂಗಡಿಗಳನ್ನೂ ತೆರವುಗೊಳಿಸಲಾಯಿತು. ರಸ್ತೆ ಬದಿಗೆ ಹೊಂದಿಕೊಂಡು ಹಾಕಲಾಗಿದ್ದ ಬಾರ್‌ವೊಂದರ ಫಲಕವನ್ನು ತೆರವುಗೊಳಿಸಲಾಯಿತು. ಮುಂದಿನ ದಿನಗಳಲ್ಲಿ ಇಂತಹ ಅತಿಕ್ರಮಣಗಳ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.