ಖಾಕಿ ಸರ್ಪಗಾವಲಿನಲ್ಲಿ ಮುಂದುವರೆದ ಪರೀಕ್ಷೆ

KannadaprabhaNewsNetwork |  
Published : Oct 30, 2023, 12:30 AM IST
ಯಾದಗಿರಿಯ ಸ್ವಪ್ನಾ ಟಾಕೀಸ್‌ ಸಮೀಪದ ಸರ್ಕಾರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ಪರೀಕ್ಷೆಗೆ ಮುನ್ನ ಅಭ್ಯರ್ಥಿಗಳನ್ನು ಮೆಟಲ್ ಡಿಟೆಕ್ಟರ್‌ ಮೂಲಕ ತಪಾಸಿಸಿ ಒಳಬಿಡಲಾಗುತ್ತಿತ್ತು.  | Kannada Prabha

ಸಾರಾಂಶ

ಮೆಟಲ್‌ ಡಿಟೆಕ್ಟರ್‌ ಮೂಲಕ ಪ್ರತಿಯೊಬ್ಬರ ತಪಾಸಣೆ

ಕನ್ನಡಪ್ರಭ ವಾರ್ತೆ ಯಾದಗಿರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ನಡೆಸುತ್ತಿದ್ದ ಪರೀಕ್ಷೆಯಲ್ಲಿ ಬ್ಲೂಟೂತ್‌ ಅಕ್ರಮ ನಡೆದ ಹಿನ್ನೆಲೆಯಲ್ಲಿ, ಎಚ್ಚೆತ್ತ ಆಡಳಿತ ಭಾನುವಾರ 2ನೇ ದಿನದ ಪರೀಕ್ಷೆಯನ್ನು ಪೊಲೀಸ್‌ ಸರ್ಪಗಾವಲಿನಲ್ಲಿ ನಡೆಸಿದೆ. ಜಿಲ್ಲೆಯ 17 ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳನ್ನು ಮೆಟಲ್ ಡಿಟೆಕ್ಟರ್‌ ಮೂಲಕ ತಪಾಸಣೆ ನಡೆಸಿ ಒಳಗೆ ಬಿಡಲಾಗುತ್ತಿತ್ತು. ಕೈಗಡಿಯಾರ, ಬಳೆ, ಕಿವಿಯೋಲೆ, ಮೂಗುತಿ, ತಾಳಿ, ಫುಲ್ ಶರ್ಟ್, ಶೂಸ್ ನಿಷೇಧ ಸೇರಿದಂತೆ ಲೋಹ ವಸ್ತುಗಳನ್ನು ಒಳಗೆ ಕೊಂಡೊಯ್ಯದಂತೆ ಅಲ್ಲಿ ತಡೆಯಲಾಗುತ್ತಿತ್ತು. ಬೆಳಗ್ಗೆ 10.30 ಗಂಟೆಗೆ ಪರೀಕ್ಷೆ ಇದ್ದರೆ, 2 ಗಂಟೆಗೂ ಮುನ್ನವೇ ಇಂತಹ ತಪಾಸಣೆ ಆರಂಭವಾಗಿತ್ತು. ಹೀಗಾಗಿ ಪರೀಕ್ಷಾ ಕೇಂದ್ರಗಳ ಹೊರಗೆ ನೂರಾರು ಜನ ಪರೀಕ್ಷಾರ್ಥಿಗಳ ಸಾಲು ಸಾಲು ಕಂಡುಬರುತ್ತಿತ್ತು. ಪ್ರತಿ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಂದ ದೂರು : ಶನಿವಾರ ಬೆಳಗ್ಗಿನ ಅವಧಿಯಲ್ಲಿ ನಡೆದ ಮೊದಲ ಪರೀಕ್ಷೆಯಲ್ಲಿ, ಯಾದಗಿರಿಯ ನ್ಯೂ ಕನ್ನಡ ಪಿಯು ಕಾಲೇಜು, ಸಬಾ ಪಿಯು ಕಾಲೇಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಎಲ್‌ಕೆಇಟಿ ಬಾಲಕಿಯರ ಪಿಯು ಕಾಲೇಜು ಹಾಗೂ ಮಹಾತ್ಮಾ ಗಾಂಧಿ ಪಿಯು ಕಾಲೇಜು ಕೇಂದ್ರಗಳಲ್ಲಿ ನಿಯೋಜಿಸಲಾಗಿದ್ದ ಕೆಲ ಅಭ್ಯರ್ಥಿಗಳು ಬ್ಲೂಟೂತ್‌ ಅಕ್ರಮದಲ್ಲಿ ತೊಡಗಿದ್ದುದು ಪತ್ತೆಯಾಗಿತ್ತು. ಭಾನುವಾರದ ಪರೀಕ್ಷೆಯ ವೇಳೆ ಇವೂ ಸೇರಿದಂತೆ ಉಳಿದೆಲ್ಲ ಕೇಂದ್ರಗಳಲ್ಲಿ ಭಾರಿ ಪೊಲೀಸ್‌ ಪಹರೆ ಹಾಕಲಾಗಿತ್ತು. ಹೀಗಾಗಿ, ಈ ಬಗ್ಗೆ ಆಯಾ ಕೇಂದ್ರಗಳ ಮುಖ್ಯಸ್ಥರು ನೀಡಿರುವ ದೂರಿನ ಮೇರೆಗೆ, ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ. 109, 114, 120(ಬಿ), 420 ಸಂಗಡ 149 ಐಪಿಸಿ ಅಡಿಯಲ್ಲಿ 5 ಪ್ರತ್ಯೇಕ ದೂರುಗಳು ದಾಖಲಾಗಿವೆ. 9 ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಂತರ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ