ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಜು.17 ಮತ್ತು 18 ರಂದು ಕರಾವಳಿಯಲ್ಲಿ ರೆಡ್ ಅಲರ್ಟ್ ಮುಂದುವರಿದಿರುವುದಾಗಿ ಹೇಳಿದೆ.ದ.ಕ.ಜಿಲ್ಲೆಯಲ್ಲಿ ಮಂಗಳವಾರ ದಿನಪೂರ್ತಿ ಎಡೆಬಿಡದೆ ಮಳೆ ಸುರಿದಿದೆ. ನಸುಕಿನಿಂದಲೇ ಮಳೆ ಸುರಿದಿದ್ದು, ಹಗಲು ಹೊತ್ತು ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ಜೀವನದಿ ನೇತ್ರಾವತಿ ಹಾಗೂ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಇದರಿಂದಾಗಿ ನೇತ್ರಾವತಿ ನದಿ ತೀರದಲ್ಲಿ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಮಂಗಳೂರಿನ ಕಲ್ಲಾಪು, ಜೆಪ್ಪಿನಮೊಗರು ಪ್ರದೇಶದ ನದಿ ತೀರಗಳಲ್ಲಿ ಪ್ರವಾಹ ಭೀತಿ ತಲೆದೋರಿದೆ. ಮಳೆಗಾಲದಲ್ಲಿ ಮೀನುಗಾರಿಕೆ ನಿಷೇಧ ಇದ್ದರೂ ಉಳ್ಳಾಲದ ಕಲ್ಲಾಪಿನಲ್ಲಿ ಸ್ಥಳೀಯ ಮೀನುಗಾರರು ನಾಡದೋಣಿಯಲ್ಲಿ ನದಿಗೆ ಇಳಿದು ಜೀವ ಪಣಕ್ಕಿಟ್ಟು ಮೀನುಗಾರಿಕೆ ನಡೆಸುತ್ತಿದ್ದಾರೆ.
ಬಂಟ್ವಾಳದಲ್ಲಿ ನೆರೆಗೆ 3.576 ಎಕರೆ ಹಾಗೂ ಉಳ್ಳಾದಲ್ಲಿ 0.060 ಎಕರೆ ಕೃಷಿ ಭೂಮಿ ಹಾನಿಗೀಡಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.ಕಡಲ ತೀರದಲ್ಲಿ ಅಲೆಯ ಅಬ್ಬರ:
ಕರಾವಳಿಯ ಸಮುದ್ರ ತೀರದಲ್ಲಿ ಗಾಳಿ ಮಳೆ ಜೊತೆ ಅಲೆಗಳ ಅಬ್ಬರ ಜೋರಾಗಿದೆ. ಉಚ್ಚಿಲದ ಬಟ್ಟಪಾಡಿ ಕಡಲ ತೀರದಲ್ಲಿ ರಕ್ಕಸ ಗಾತ್ರದ ಅಲೆಗಳ ಅಬ್ಬರ ಕಂಡುಬಂದಿದೆ. ಸಮುದ್ರ ಬದಿಯ ಮನೆಗಳಿಗೆ ಅಲೆ ಅಪ್ಪಳಿಸುತ್ತಿದ್ದು, ಕಡಲ ತೀರದ ಉದ್ದಕ್ಕೂ ಅಲೆಗಳ ರೌದ್ರ ನರ್ತನ ಕಂಡಿದೆ. ಭಾರೀ ಗಾಳಿ ಮಳೆಯಿಂದ ಕಡಲ ತೀರದ ನಿವಾಸಿಗಳಲ್ಲಿ ಆತಂಕ ಮೂಡಿದೆ. ಭಾಗಶಃ ಬಿದ್ದ ಮನೆ, ರೆಸಾರ್ಟ್‌ಗಳು ಅಲೆಗಳ ಹೊಡೆತಕ್ಕೆ ಸಿಲುಕಿ ನಾಶವಾಗುತ್ತಿವೆ. ಸಮುದ್ರದ ಅಂಚಿನ ಹಲವು ಪಾಳುಬಿದ್ದ ಮನೆಗಳು ಕಡಲು ಪಾಲಾಗಿದ್ದು, ನೂರಾರು ತೆಂಗಿನ ಮರಗಳು ಬುಡ ಸಮೇತ ಕಿತ್ತು ಸಮುದ್ರಪಾಲಾಗಿವೆ. ಕಡಲ ತೀರದಲ್ಲಿ ಭಾರಿ ಗಾಳಿ ಬೀಸುತ್ತಿದ್ದು, ಮನೆಗಳು ಆತಂಕದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ.ಪ್ರವಾಹದಲ್ಲಿ ಆನೆ ಮೃತದೇಹ:
ಸುಬ್ರಹ್ಮಣ್ಯದಲ್ಲಿ ಕುಮಾರಾಧಾರ ನದಿ ಪ್ರವಾಹದಲ್ಲಿ ಆನೆಯ ಮೃತ ದೇಹ ಪತ್ತೆಯಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದರ್ಪಣ ತೀರ್ಥ ತುಂಬಿ ಹರಿಯುತ್ತಿದ್ದು, ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಮೇಲೆ ನೀರು ಬಂದು ಸಂಚಾರ ಅಸ್ತವ್ಯಸ್ತಗೊಂಡಿದೆ.ಕಡಬದಲ್ಲಿ ಗರಿಷ್ಠ ಮಳೆ:
ದ.ಕ.ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನ ವರೆಗೆ ಕಡಬದಲ್ಲಿ ಗರಿಷ್ಠ 87.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ದಿನದ ಸರಾಸರಿ ಮಳೆ 73.7 ಮಿ.ಮೀ. ಸುರಿದಿದೆ.ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ ಗರಿಷ್ಠ 5.50 ಮೀಟರ್(ಅಪಾಯ ಮಟ್ಟ 6 ಮೀಟರ್) ತಲುಪಿದೆ. ಬಟ್ವಾಳದಲ್ಲಿ ನೇತ್ರಾವತಿ ನದಿ 6.1(ಅಪಾಯ ಮಟ್ಟ 8.5 ಮೀಟರ್) ಮೀಟರ್‌ನಲ್ಲಿ ಹರಿಯುತ್ತಿದೆ.