ಮುಂದುವರಿದ ನೀರು ಪೋಲು, ರೈತರಲ್ಲಿ ಹೆಚ್ಚಿದ ಆತಂಕ

KannadaprabhaNewsNetwork |  
Published : Aug 16, 2024, 12:48 AM IST
15ಕೆಪಿಎಲ್21 ರಿಂದ 27 ತುಂಗಭದ್ರಾ ಜಲಾಶಯದ ಮುರಿದ 19 ನೇ ಕ್ರಸ್ಟ್ ಗೇಟ್ ಗೆ ಎಲಿಮೆಂಟ್ ಗೇಟ್ ಅಳವಡಿಸುವ ಕಸರತ್ತು  | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದಲ್ಲಿನ ನೀರನ್ನು ಉಳಿಸಿಕೊಂಡು ಗೇಟ್ ಅಳವಡಿಸುವ ಪ್ರಯತ್ನ ಐದನೇ ದಿನವೂ ಪೂರ್ತಿಯಾಗಿಲ್ಲ. ಪರಿಣಾಮ ಜಲಾಶಯದಿಂದ ನೀರು ಹರಿದು ಹೋಗಿ ಸಮುದ್ರ ಪಾಲಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ದಿನೇ ದಿನೇ ಹೆಚ್ಚಳವಾಗುತ್ತಿದೆ.

- ಒಂದು ಬೆಳೆಗೂ ನೀರು ಉಳಿಯುತ್ತೋ ಇಲ್ಲವೋ?

- ಇದು ಉಳಿಯುವ ಭರವಸೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ತುಂಗಭದ್ರಾ ಜಲಾಶಯದಲ್ಲಿನ ನೀರನ್ನು ಉಳಿಸಿಕೊಂಡು ಗೇಟ್ ಅಳವಡಿಸುವ ಪ್ರಯತ್ನ ಐದನೇ ದಿನವೂ ಪೂರ್ತಿಯಾಗಿಲ್ಲ. ಪರಿಣಾಮ ಜಲಾಶಯದಿಂದ ನೀರು ಹರಿದು ಹೋಗಿ ಸಮುದ್ರ ಪಾಲಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ದಿನೇ ದಿನೇ ಹೆಚ್ಚಳವಾಗುತ್ತಿದೆ.

ಒಂದು ಬೆಳೆಗಾದರೂ ನೀರು ಉಳಿಸಿಕೊಂಡು ಗೇಟ್ ಅಳವಡಿಸುವ ಕಸರತ್ತು ಕೈಗೂಡುವ ಆಶಾಭಾವನೆ ಕ್ಷೀಣಿಸುತ್ತಿದೆ. ನೀರು ಪೋಲಾಗುವ ಭಯವೇ ಹೆಚ್ಚಾಗುತ್ತಿದೆ. ಹೀಗಾಗಿ, ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶದ ರೈತರಲ್ಲಿ ಆತಂಕ ಹೆಚ್ಚಾಗತೊಡಗಿದೆ.

30 ಟಿಎಂಸಿ ಪೋಲು:ತುಂಗಭದ್ರಾ ಜಲಾಶಯದಲ್ಲಿನ 105 ಟಿಎಂಸಿ ಪೈಕಿ ಗುರುವಾರ ಸಂಜೆಯವರೆಗೂ ಬರೋಬ್ಬರಿ 30 ಟಿಎಂಸಿ ನೀರು ನದಿಯ ಮೂಲಕ ಆಂಧ್ರವನ್ನು ದಾಟಿ, ಈಗ ಸಮುದ್ರ ಸೇರಿದ್ದು, ಉಳಿದಿದ್ದು ಜಲಾಶಯದಲ್ಲಿ 70-75 ಟಿಎಂಸಿ ಮಾತ್ರ.

ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿನ 16 ಲಕ್ಷ (ಆಂಧ್ರ, ತೆಲಂಗಾಣ ಸೇರಿ) ಎಕರೆಯಲ್ಲಿ ಈಗಾಗಲೇ ನಾಟಿ ಮಾಡಿರುವ ಒಂದು ಬೆಳೆ ಉಳಿಸಿಕೊಳ್ಳಲು 90 ಟಿಎಂಸಿ ನೀರು ಬೇಕು. ಆದರೆ, ಈಗ ಜಲಾಶಯದಲ್ಲಿರುವ ಗುರುವಾರ ಸಂಜೆ ವೇಳೆಗೆ ಇರುವುದೇ 75 ಟಿಎಂಸಿ ಮಾತ್ರ. ಗೇಟ್ ಅಳವಡಿಸುವ ಪ್ರಯತ್ನ ಹೀಗೆ ವಿಫಲವಾಗುತ್ತಲೇ ಸಾಗಿದರೆ ಜಲಾಶಯದಲ್ಲಿ ಎಷ್ಟು ನೀರು ಉಳಿದುಕೊಳ್ಳುತ್ತದೆಯೋ ದೇವರೇ ಬಲ್ಲ. ಆಗ ಒಂದು ಬೆಳೆಯೂ ಕಷ್ಟವಾಗುತ್ತದೆ ಎನ್ನುತ್ತಾರೆ ರೈತರು.

ಜಲಾಶಯದಲ್ಲಿರುವ ನೀರನ್ನಾದರೂ ಹಿಡಿದಿಟ್ಟುಕೊಂಡರೆ ಹಾಕಿರುವ ಬೆಳೆ ಕಾಪಾಡಿಕೊಳ್ಳಬಹುದಿತ್ತು, ಆದರೆ, ಸದ್ಯ ಗೇಟ್ ಅಳವಡಿಸುವ ಯತ್ನ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ಹೀಗಾಗಿ, ಜಲಾಶಯದಲ್ಲಿರುವ ನೀರನ್ನು ಉಳಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ನಮ್ಮ ಒಂದು ಬೆಳೆಯಾದರೂ ಉಳಿಸಿಕೊಳ್ಳುವುದು ಹೇಗೆ ಎಂದು ರೈತರು ಚಿಂತೆಗೀಡಾಗಿದ್ದಾರೆ.ಜಲಾಶಯದತ್ತ ರೈತರು:

ತುಂಗಭದ್ರಾ ಜಲಾಶಯದಲ್ಲಿನ ನೀರನ್ನು ಉಳಿಸಿಕೊಂಡೇ ಗೇಟ್ ಅಳಡಿಸಲಾಗುತ್ತದೆ ಎನ್ನುವ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ಹೇಳಿಕೆಯಿಂದ ನೀರಾಳವಾಗಿದ್ದ ರೈತರು ಗೇಟ್ ಅಳವಡಿಸಲು ವಿಳಂಬವಾಗುತ್ತಿರುವುದನ್ನು ಕಂಡು ನಿಧಾನಕ್ಕೆ ಜಲಾಶಯದತ್ತ ಧಾವಿಸುತ್ತಿದ್ದಾರೆ.

ಗುರುವಾರ ನಿಷೇಧಾಜ್ಞೆಯ ನಡುವೆಯೂ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಯಲ್ಲಿ ಅಲ್ಲಲ್ಲಿ ತಂಡೋಪತಂಡವಾಗಿ ಆಗಮಿಸಿ, ದೂರದಿಂದಲೇ ಜಲಾಶಯದಲ್ಲಿ ಗೇಟ್ ಅಳವಡಿಸುತ್ತಿರುವ ಮಾಹಿತಿ, ಜಲಾಶಯದಲ್ಲಿ ಉಳಿಯುತ್ತಿರುವ ನೀರಿನ ಮಾಹಿತಿ ಕಲೆಹಾಕಿ, ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಆಗಿದೆ. ನಾಟಿ ಮಾಡಿದ್ದು ಹೇಗೆ ಕಾಪಾಡಿಕೊಳ್ಳುವುದು ಎನ್ನುವುದು ಎಂಬ ಚಿಂತೆ ಒಂದು ಕಡೆಯಾದರೆ, ನಾಟಿ ಮಾಡುವ ಕಾರ್ಯ ಮುಂದುವರಿಸಬೇಕೋ ಬೇಡವೋ ಎಂಬ ಆತಂಕ

ಉಂಟಾಗಿದೆ. ಹಿಂದೆಂದು ಇಂತಹ ಆತಂಕದ ಪರಿಸ್ಥಿತಿ ಎದುರಿಸಿದ ಉದಾಹರಣೆ ಇಲ್ಲ. ಜಲಾಶಯ ಭರ್ತಿಯಾದರೆ ಸಾಕು, ನಾವು ಖುಷಿಯಿಂದಲೇ ನಾಟಿ ಮಾಡಿಕೊಂಡು, ಬೆಳೆ ಸಂಭ್ರಮಿಸುತ್ತಿದ್ದೆವು. ಈ ವರ್ಷ ನೋಡಿ ಜಲಾಶಯ ತುಂಬಿದರೂ ಗೇಟ್ ಮುರಿದು, ರಂಪಾಟವಾಗಿದೆ. ನಮ್ಮನ್ನು ದೇವರೇ ಕಾಪಾಡಬೇಕು ಎನ್ನುತ್ತಾರೆ ಸಿಂಧನೂರಿನಿಂದ ಬಂದಿದ್ದ ರೈತ ಮರಿಬಸಪ್ಪ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ