ಮತದಾನದ ಮಹತ್ವ ಕುರಿತು ನಿರಂತರ ಜಾಗೃತಿ: ಸಿಇಒ ಜಿ ಪ್ರಭು

KannadaprabhaNewsNetwork | Published : Mar 18, 2024 1:47 AM

ಸಾರಾಂಶ

ಭಾರತ ಚುನಾವಣಾ ಆಯೋಗದ ಸದಾಶಯದಂತೆ ಮತದಾನ ಪ್ರಕ್ರಿಯೆಯಲ್ಲಿ ಎಲ್ಲ ಹಂತದ ಮತದಾರರು ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ಸೂಕ್ತ ಕ್ರಿಯಾ ಯೋಜನೆ ರೂಪಿಸಿ ಜಿಲ್ಲೆಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸ್ವೀಪ್ ಕಾರ್ಯಕ್ರಮದಡಿ ಹಮ್ಮಿಕೊಳ್ಳಲು ಅಧಿಕಾರಿಗಳು ಸೂಕ್ತ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ತುಮಕೂರು

ಮತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಲಾಗಿದೆ. ಇದೀಗ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ಜಿಲ್ಲೆಯಾದ್ಯಂತ ಸ್ವೀಪ್ ಚಟುವಟಿಕೆ ಮತ್ತಷ್ಟು ಚುರುಕುಗೊಳಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಕಚೇರಿಯ ವಿಡೀಯೋ ಕಾನ್ಪರನ್ಸ್ ಸಭಾಂಗಣದಲ್ಲಿ ನಡೆದ ‘ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಪಾಲ್ಗೊಳ್ಳುವಿಕೆ’ (ಸ್ವೀಪ್) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಚುನಾವಣಾ ಆಯೋಗದ ಸದಾಶಯದಂತೆ ಮತದಾನ ಪ್ರಕ್ರಿಯೆಯಲ್ಲಿ ಎಲ್ಲ ಹಂತದ ಮತದಾರರು ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ಸೂಕ್ತ ಕ್ರಿಯಾ ಯೋಜನೆ ರೂಪಿಸಿ ಜಿಲ್ಲೆಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸ್ವೀಪ್ ಕಾರ್ಯಕ್ರಮದಡಿ ಹಮ್ಮಿಕೊಳ್ಳಲು ಅಧಿಕಾರಿಗಳು ಸೂಕ್ತ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

2019ರ ತುಮಕೂರು ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಶೇ. 77.21 ರಷ್ಟು ಮತದಾನವಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಕಡಿಮೆಯಾಗಿರುವಂತಹ ಮತಗಟ್ಟೆಗಳನ್ನು ಗುರಿಯಾಗಿರಿಸಿಕೊಂಡು, ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು.

ಕಳೆದ ಬಾರಿ ಪ್ರತಿ ತಾಲೂಕುವಾರು ಒಟ್ಟಾರೆ ಮತದಾನ ಪ್ರಮಾಣಕ್ಕಿಂತ ಶೇ.10 ರಷ್ಟು ಕಡಿಮೆ ಇರುವ 118, ಶೇ.15ರಷ್ಟು ಕಡಿಮೆ ಇರುವ 36 ಹಾಗೂ ಶೇ.20ರಷ್ಟು ಕಡಿಮೆ ಇರುವ 13 ಮತಗಟ್ಟೆಗಳನ್ನು ಗುರುತಿಸಿದ್ದು, ಒಟ್ಟು 167 ಮತಗಟ್ಟೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಸ್ವೀಪ್ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಸ್ವೀಪ್ ಕಾರ್ಯಕ್ರಮಗಳಿಗಾಗಿ ಪ್ರತಿ ತಾಲೂಕಿಗೆ 1 ಲಕ್ಷ ಅನುದಾನ ನೀಡಲಾಗಿದೆ, ಮತದಾನ ಜಾಗೃತಿ ಅಭಿಯಾನದ (ಸ್ವೀಪ್) ಮೂಲ ಉದ್ದೇಶ ಮತದಾನದ ಬಗ್ಗೆ ಅರಿವು ಮೂಡಿಸಿ ಮತದಾರರನ್ನು ಜಾಗೃತಗೊಳಿಸುವುದಾಗಿದೆ. ತಾಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ ಸೈಕಲ್ ಜಾಥಾ,ಮಾನವ ಸರಪಳಿ, ಮತದಾನ ಪ್ರತಿಜ್ಞಾವಿಧಿ, ರಂಗೋಲಿ ಸ್ಪರ್ಧೆ, ಬೈಕ್‌ ರ್‍ಯಾಲಿ, ಬೃಹತ್ ಮತದಾರರ ಜಾಥಾ, ಕ್ಯಾಂಡಲ್ ಮಾರ್ಚ್ ಹಾಗೂ ಮ್ಯಾರಾಥಾನ್ ಗಳಂತಹ ಹಲವು ಕಲೆ, ಸಂಗೀತ, ಕ್ರೀಡೆ ಒಳಗೊಂಡಂತೆ ಜಾಗೃತಿ ಅಭಿಯಾನ ನಡೆಸಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾರ್ಚ 19ಕ್ಕೆ ಜಿಲ್ಲಾಮಟ್ಟದ ಸ್ವೀಪ್ ಕಾರ್ಯಕ್ರಮ: ತುಮಕೂರು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರತಿಶತ ಮತದಾನವಾಗಬೇಕು ಇದಕ್ಕಾಗಿ ಸ್ವೀಪ್ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಾ.19 ರಂದು ನಡೆಯುವ ಜಿಲ್ಲಾಮಟ್ಟದ ಸ್ವೀಪ್ ಕಾರ್ಯಕ್ರಮದಲ್ಲಿ ಕೃಷಿ, ಸಾಹಿತ್ಯ, ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಪ್ರತಿ ತಾಲೂಕಿಗೆ ಚುನಾವಣಾ ರಾಯಭಾರಿಗಳನ್ನು ಗುರುತಿಸಿ, ಅವರ ಮೂಲಕ ಮತದಾನದ ಮಹತ್ವ ಕುರಿತಂತೆ ಪ್ರಚಾರ ಕೈಗೊಳ್ಳಲಾಗುವುದು. ಅಂದು ನಡೆಯುವ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು , ಮತದಾರರು ಪಾಲ್ಗೊಳ್ಳಲಿದ್ದಾರೆ ಎಂದರು.

ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 20932 ವಿಕಲಚೇತನ ಮತದಾರರು ಹಾಗೂ 85 ವಯಸ್ಸಿನ ಮತ್ತು 85 ವಯಸ್ಸು ದಾಟಿರುವ 21856 ಮತದಾರರು ನಮ್ಮ ಚುನಾವಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದಾರೆ, ಅಂಗವಿಕಲರು ಮತ್ತು 85 ವರ್ಷ ಮೇಲ್ಪಟ್ಟ ವೃದ್ಧರು ನಮೂನೆ-12ಡಿ ಸಲ್ಲಿಸುವ ಮೂಲಕ ಮತದಾನ ಮಾಡಬಹುದಾಗಿದೆ. ಸ್ವೀಪ್ ಚುಟುವಟಿಕೆಯಲ್ಲಿ ಮನೆ ಮನೆಗೆ ತೆರಳಿ ಮತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರ ರಂಗಧಾಮ್ಯ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಸಹಾಯಕ ನಿರ್ದೇಶಕರು ಹಾಗೂ ಸ್ವೀಪ್ ವಿಭಾಗದ ಬಡೆಖಾನ್ ಸೇರಿ ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರು ಭಾಗವಹಿಸಿದ್ದರು.

Share this article