- ಲಕ್ಕವಳ್ಳಿಯಲ್ಲಿ ಅಡಕೆ ರೋಗ, ಪೋಷಕಾಂಶ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ
ಕನ್ನಡಪ್ರಭ ವಾರ್ತೆ, ತರೀಕೆರೆಸರಿಯಾದ ಪ್ರಮಾಣದಲ್ಲಿ ಹಾಗೂ ರೋಗ ಲಕ್ಷಣಗಳು ಕಂಡಾಗ ಮಾತ್ರ ರಾಸಾಯನಿಕಗಳನ್ನು ಬಳಸುವುದು ಸೂಕ್ತ ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಸ್ಯ ರೋಗ ಶಾಸ್ತ್ರಜ್ಞ ಡಾ. ಶ್ರೀಶೈಲ್ ಸೋನಿಯಾಲ್ ಹೇಳಿದ್ದಾರೆ.
ತಾಲೂಕಿನ ಲಕ್ಕವಳ್ಳಿಯಲ್ಲಿ ಅಡಕೆಯಲ್ಲಿ ರೋಗಗಳ ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಈ ಭಾಗದ ಪ್ರಮುಖ ರೋಗಗಳಾದ ಹಿಡಿಮುಂಡಿಗೆ, ಸುಳಿರೋಗ, ಅಣಬೆ ರೋಗ, ತಲೆಬಾಗುವಿಕೆ, ಎಳೆ ಕಾಯಿ ಸೀಳುವಿಕೆ, ಹಾಗೂ ಎಳೆ ಕಾಯಿ ಉದುರುವಿಕೆ ಮತ್ತು ಪ್ರಮುಖ ಕೀಟಗಳಾದ ಸುಳಿ ತಿಗಣೆ, ಕೆಂಪು ನುಸಿ, ಮತ್ತು ಬೇರು ಹುಳು ಇವುಗಳಿಂದ ಆಗುವ ಹಾನಿಯ ಲಕ್ಷಣಗಳು ಹಾಗೂ ಅದರ ನಿರ್ವಹಣೆ ಬಗ್ಗೆ ರೈತರಿಗೆ ಮನಮುಟ್ಟುವಂತೆ ಹೇಳಿದರು.ರೈತರಿಗೆ ಮುಖ್ಯವಾಗಿ ರಸಗೊಬ್ಬರಗಳನ್ನು ಮಿತವಾಗಿ ಬಳಸುವುದರಿಂದ ಆಗುವ ಲಾಭಗಳನ್ನು ಮತ್ತು ಹೆಚ್ಚಿನ ಪ್ರಮಾಣದ ರಸಗೊಬ್ಬರಗಳಿಂದಾಗುವ ಪರಿಣಾಮಗಳನ್ನು ರೈತರಿಗೆ ತಿಳಿಸಿ ಹಾಗೂ ಅಡಿಕೆ ಕೃಷಿಯಲ್ಲಿ ಬೇವಿನ ಹಿಂಡಿ ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಇದರೊಂದಿಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮ ಹಾಗೂ ಸುಡೋಮೋನಾಸನ ಬಳಕೆ ಮತ್ತು ಮಣ್ಣಿನ ಆರೋಗ್ಯ ಸುಧಾರಿಸುವಲ್ಲಿ ಇದರ ಮಹತ್ವದ ಬಗ್ಗೆ ಕೂಡ ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಸೀನೋಜಿರಾವ್, ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಗ್ರಾಮದ ರೈತರು ಭಾಗವಹಿಸಿದ್ದರು.10ಕೆಟಿಆರ್.ಕೆ15ಃ
ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಅಡಿಕೆಯಲ್ಲಿ ರೋಗಗಳ ಹಾಗೂ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಸ್ಯ ರೋಗ ಶಾಸ್ತ್ರಜ್ಞ ಡಾ. ಶ್ರೀಶೈಲ್ ಸೋನಿಯಾಲ್ , ಮುಖಂಡರಾದ ಸೀನೋಜಿರಾವ್ ಮತ್ತಿತರರು ಇದ್ದರು.