ದೊಡ್ಡಬಳ್ಳಾಪುರ: ರೈತರ ಅಭಿವೃದ್ಧಿಗೆ ವಿಶ್ವವಿದ್ಯಾಲಯ ಕೈಗೊಂಡಿರುವ ಕ್ರಮಗಳ ಬಗ್ಗೆ ಹೊಸಹಳ್ಳಿ ಗ್ರಾಮದ ಪ್ರಗತಿಪರ ರೈತ ಲಕ್ಷ್ಮೀನಾರಾಯಣಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ. ಕೆ. ವಿಶ್ವನಾಥ್, ಈ ಯೋಜನೆಯ ಸಮಗ್ರ ವಿವರಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ದತ್ತು ಕಾರ್ಯಕ್ರಮದ ಮಹತ್ವವನ್ನು ವಿವರಿಸಿ, ಗುಣಮಟ್ಟದ ಬೀಜಗಳು ಮತ್ತು ಕೃಷಿ ಪರಿಕರಗಳ ವಿತರಣೆ, ತಾಂತ್ರಿಕ ಮಾರ್ಗದರ್ಶನ ಮತ್ತು ನಿರಂತರ ಸಂಪರ್ಕದ ಮೂಲಕ ರೈತರ ಜೀವನಮಟ್ಟವನ್ನು ಸುಧಾರಿಸಲು ಸಾಧ್ಯವೆಂದು ಹೇಳಿದರು.
ಬೇಸಾಯ ಶಾಸ್ತ್ರದ ವಿಜ್ಞಾನಿ ಡಾ. ಜಿ. ಕೆ. ನಿಂಗರಾಜು, ರಾಗಿ, ತೊಗರಿ, ಮುಸುಕಿನ ಜೋಳ ಇತರೆ ಬೆಳೆಗಳ ವೈಜ್ಞಾನಿಕ ಬೆಳೆ ಬೆಳೆಯುವ ವಿಧಾನಗಳು, ಸಾರಜನಕ ಸ್ಥಿರೀಕರಿಸುವ ಅಜೋಸ್ಪೆರಿಲ್ಲಂ ಸೂಕ್ಷಾಣು ಜೀವಿಯಿಂದ ರಾಗಿ ಬೀಜೋಪಚಾರ ಮತ್ತು ತೊಗರಿಯನ್ನು ರೈಜೋಬಿಯಂ ನಿಂದ ಬೀಜೋಪಚಾರ, ಸೂಕ್ತ ಅಂತರ, ಪೋಷಕಾಂಶ ನಿರ್ವಹಣೆ, ಮಳೆ ಕೊರತೆಯ ಸಮಯದಲ್ಲಿ ತೇವಾಂಶ ನಿರ್ವಹಣೆಗಾಗಿ ದೋಣಿ ಸಾಲು, ಪೊಟ್ಯಾಷ್ ಸಿಂಪರಣೆ ಇತ್ಯಾದಿ ಕ್ರಮಗಳು ಮತ್ತು ಬೆಳೆ ಸಂರಕ್ಷಣೆ ಕುರಿತು ವಿವರವಾಗಿ ತಿಳಿಸಿದರು.ಮಣ್ಣು ವಿಜ್ಞಾನ ವಿಭಾಗದ ಡಾ. ಬಾಲಾಜಿ ನಾಯಕ್ ಮಾತನಾಡಿ, ಮಣ್ಣಿನ ಆರೋಗ್ಯ ನಿರ್ವಹಣೆಯ ಮಹತ್ವವನ್ನು ವಿವರಿಸಿ, ಸಮತೋಲನ ಪೋಷಕಾಂಶ ಬಳಕೆ, ಜೈವಿಕ ಪದಾರ್ಥಗಳ ಬಳಕೆ ಹಾಗೂ ಮಣ್ಣಿನ ದೀರ್ಘಕಾಲಿಕ ಉತ್ಪಾದಕತೆ ಹೆಚ್ಚಿಸುವ ಕ್ರಮಗಳನ್ನು ತಿಳಿಸಿದರು.
ಡಾ.ಎ.ಬಿ.ನಾರಾಯಣರೆಡ್ಡಿ ಮಾತನಾಡಿ, ಕೊಯ್ಲು ಮತ್ತು ಕೊಯ್ಲಿನೋತ್ತರದ ನಂತರ ನಿರ್ವಹಣೆ ಮತ್ತು ಬೀಜ ಶೇಖರಣೆ ಕುರಿತು ತಾಂತ್ರಿಕ ಮಾಹಿತಿಯನ್ನು ವಿವರವಾಗಿ ನೀಡಿದರು.
21ಕೆಡಿಬಿಪಿ3-