31ರಿಂದ ಕೇಂದ್ರ ಸಚಿವ ಜೋಶಿ ಕಚೇರಿ ಎದುರು ನಿರಂತರ ಹೋರಾಟ

KannadaprabhaNewsNetwork |  
Published : Jul 27, 2025, 01:54 AM IST

ಸಾರಾಂಶ

ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣ ತೀರ್ಪು ನೀಡಿದ ಬಳಿಕವೂ ಗೋವಾ ಸರ್ಕಾರ ತನ್ನ ಕ್ಯಾತೆ ಮುಂದುವರಿಸಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ.

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ಕೇಂದ್ರದ ಪರಿಸರ ಇಲಾಖೆಯಿಂದ ಜು.೩೧ರೊಳಗೆ ಅನುಮತಿ ಕೊಡಿಸಬೇಕು ಇಲ್ಲದಿದ್ದರೆ ಅನುಮತಿ ಕೊಡಿಸುವ ವರೆಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿ ಎದುರು ನಿರಂತರ ಹೋರಾಟ ಮಾಡಲಾಗುವುದು ಎಂದು ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದು ತೇಜಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ನಡೆದ ವಿವಿಧ ರೈತ ಸಂಘಟನೆಗಳ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣ ತೀರ್ಪು ನೀಡಿದ ಬಳಿಕವೂ ಗೋವಾ ಸರ್ಕಾರ ತನ್ನ ಕ್ಯಾತೆ ಮುಂದುವರಿಸಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪ ಮಾಡಿದರು.

ಹೋರಾಟದ ಮೊದಲ ಹಂತದಲ್ಲಿ ಜೋಶಿ ಅವರ ನಿವಾಸದೆದುರು ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು. ನಂತರ ಅವರ ದೆಹಲಿಯ ಕಚೇರಿ ಮುಂದೆ ಹಾಗೂ ರಾಷ್ಟ್ರಪತಿಗಳ ಕಚೇರಿಯ ಎದುರಿಗೂ ಪ್ರತಿಭಟನೆ ನಡೆಸುವ ಯೋಜನೆ ಇದೆ. ಇಷ್ಟಕ್ಕೂ ಸರ್ಕಾರ ಮಣಿಯದಿದ್ದರೆ ಕಳಸಾ ಬಂಡೂರಿ ನಾಲೆ ಒಡೆಯುವ ಮೂಲಕ ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟ್ರಿಬುನಲ್‌ನಲ್ಲಿ ಆದೇಶ ಮಾಡಿದಾಗ ಗೃಹ ಸಚಿವ ಅಮಿತ್‌ ಶಾ ಉತ್ತರಕರ್ನಾಟಕಕ್ಕೆ ಬಂದು ಸಮಾವೇಶ ಮಾಡಿ ಇನ್ನೇನು ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ಜುಲೈ 31ರೊಳಗೆ ಪರಿಸರ ಇಲಾಖೆ ಅನುಮತಿ ಕೊಡಿಸಿದರೆ ವಿಜಯೋತ್ಸವ ಮಾಡುತ್ತೇವೆ. ಇಲ್ಲದಿದ್ದರೆ ಕೇಂದ್ರ ಸಚಿವರ ಕಚೇರಿ ಎದುರು ಟೆಂಟ್‌ ಹಾಕಿ ನಿರಂತರ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟ ಪಡಿಸಿದರು.

ಕಳಸಾ ಬಂಡೂರಿ ರೈತ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಎಐಟಿಯುಸಿ, ಕಟ್ಟಡ ಕಾರ್ಮಿಕರ ಸಂಘಟನೆ, ಆಟೋ ಚಾಲಕರ, ನಿವೃತ್ತ ಶಿಕ್ಷಕರ ಕೃಷಿಕ ಸಮಾಜ, ಪಕ್ಷಾತೀತ ಹೋರಾಟ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ಹೋರಾಟಕ್ಕೆ ಬೆಂಬಲ ನೀಡಿವೆ ಎಂದು ತಿಳಿಸಿದರು.

ಸಂಘಟನೆ ಉಪಾಧ್ಯಕ್ಷ, ಬಾಬಾಜಾನ್‌ ಮುಧೋಳ, ರೈತ ಸಂಘಟನೆ ಜಿಲ್ಲಾಧ್ಯಕ್ಷ ರವಿ ಕಂಬಳಿ, ಬಿ.ಎಂ. ಹಣಸಿ, ರಾಜು ನಾಯಕವಾಡಿ, ಮಹಿಳಾ ಸಂಘಟನೆಯ ಮಾಣಿಕ್ಯ ಚಿಲ್ಲೂರ, ಬಿ.ಎ. ಮುಧೋಳ, ಆಟೋ ಚಾಲಕರ ಸಂಘದ ಹನುಮಂತಪ್ಪ ಪವಾಡಿ, ರಮೇಶ ಭೋಸ್ಲೆ, ಸರ್ಕಾರಿ ನಿವೃತ್ತ ನೌಕರರ ಸಂಘದ ಎಸ್‌.ಬಿ. ಪಾಟೀಲ ಮತ್ತಿತರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ