ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕೆ.ಆರ್.ಪೇಟೆ- ಚನ್ನರಾಯಪಟ್ಟಣದ ಮುಖ್ಯರಸ್ತೆಯ ಚಿಕ್ಕಳಲೆ ಗೇಟ್ ಬಳಿಯಿಂದ ಗ್ರಾಪಂ ಕೇಂದ್ರ ಚೌಡೇನಹಳ್ಳಿಗೆ ಬರುವ ರಸ್ತೆಯಿದೆ. ಈ ರಸ್ತೆಯಲ್ಲಿ ಹಳ್ಳವೊಂದು ಹರಿಯುತ್ತಿದೆ.
ಚೌಡೇನಹಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಈ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿದೆ. ಸತತ ಮಳೆಯಿಂದ ಕಿಕ್ಕೇರಿಯ ಅಮಾನಿಕೆರೆ ಭರ್ತಿಯಾಗಿ ಕೆರೆ ಕೋಡಿ ಮೂಲಕ ಹೆಚ್ಚುವರಿ ನೀರು ಈ ಹಳ್ಳದ ಮೂಲಕ ಹರಿದು ಹೋಗುತ್ತಿದೆ. ಇದೀಗ ಹಳ್ಳದ ಸೇತುವೆ ಕೊಚ್ಚಿ ಹೋಗಿರುವ ಕಾರಣ ಗ್ರಾಮದ ಸಂಪರ್ಕ ಬಂದ್ ಆಗಿದೆ. ರೈತಾಪಿ ಜನ ಪರದಾಡುತ್ತಿದ್ದಾರೆ.ಕೆ.ಆರ್.ಪೇಟೆ, ಕಿಕ್ಕೇರಿ ಮುಂತಾದ ಕಡೆಗೆ ತಮ್ಮ ದೈನಂದಿನ ವ್ಯವಹಾರಗಳಿಗೆ ಬರಬೇಕಾದ ಜನ ಹತ್ತಾರು ಕಿ.ಮೀ ಬಳಸಿ ಬರಬೇಕಾಗಿದೆ. ಗ್ರಾಮದಿಂದ ಪೂರೈಕೆಯಾಗುವ ಹಾಲು ತೆಗೆದುಕೊಂಡು ಹೋಗುವ ಹಾಲಿನ ವ್ಯಾನ್ ಕೂಡ ನಿತ್ಯ ಹತ್ತಾರು ಕಿ.ಮೀ ಬಳಸಿ ಗ್ರಾಮಕ್ಕೆ ಬರುತ್ತಿದೆ.
ರಸ್ತೆ ಸಂಚಾರ ಕಡಿತಗೊಂಡಿರುವ ಕಾರಣ ಗ್ರಾಮ ಪಂಚಾಯ್ತಿಗೆ ಪಿಡಿಒ ಸೇರಿದಂತೆ ಯಾವುದೇ ಸಿಬ್ಬಂದಿ ಬರುತ್ತಿಲ್ಲ. ಇದರ ಪರಿಣಾಮ ಗ್ರಾಮ ಪಂಚಾಯ್ತಿ ಬಂದ್ ಆಗಿದೆ. ಕಳೆದ ಕೆಲ ದಿನಗಳಿಂದ ಗ್ರಾಪಂ ಆಡಳಿತ ಸಮರ್ಪಕವಾಗಿ ನಡೆಯುತ್ತಿಲ್ಲ.
ಮಂಗಳವಾರ ಪ್ರತಿಭಟನೆ:
ಇದರ ಪರಿಣಾಮ ಈಗ ಹಳ್ಳದ ನೀರಿನಿಂದ ಸೇತುವೆ ಸಂಪೂರ್ಣ ನಾಶವಾಗಿದೆ. ಜನ ಸಂಚಾರಕ್ಕೆ ಅಡ್ಡಿಯಾಗಿದೆ. ಜನರ ಸಮಸ್ಯೆಗೆ ನೀರಾವರಿ ಇಲಾಖೆಯೇ ಸಂಪೂರ್ಣ ಜವಾಬ್ದಾರಿ ಎಂದು ಆರೋಪಿಸಿರುವ ಚೌಡೇನಹಳ್ಳಿ ಗ್ರಾಮದ ರೈತ ಮುಖಂಡ ನಾರಾಯಣಸ್ವಾಮಿ ಕಳೆದ ಹತ್ತಾರು ದಿನಗಳಿಂದ ಗ್ರಾಪಂ ಬಾಗಿಲು ಹಾಕಿದ್ದರೂ ತಾಪಂ ಇಒ ಇದರ ಬಗ್ಗೆ ಕ್ರಮವಹಿಸಿಲ್ಲ. ರಸ್ತೆ ಸಂಪರ್ಕ ಕಡಿತಗೊಂಡು ಜನಸಂಚಾರಕ್ಕೆ ಅಡಚಣೆಯಾಗಿದ್ದರೂ ತಾಲೂಕು ಆಡಳಿತ ಅಥವಾ ಜನ ಪ್ರತಿನಿಧಿಗಳಾಗಲೀ ಸಮಸ್ಯೆಯ ಪರಿಹಾರಕ್ಕೆ ಕ್ರಮ ವಹಿಸಿಲ್ಲ.