ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ಬೆಳೆಹಾನಿ, ಹಲವೆಡೆ ಮನೆಗಳು ಧರೆಗೆ

KannadaprabhaNewsNetwork |  
Published : Aug 20, 2025, 01:30 AM IST
19ಎಚ್‌ವಿಆರ್2- | Kannada Prabha

ಸಾರಾಂಶ

ಜಿಲ್ಲಾದ್ಯಂತ ಕಳೆದ ಮೋಡ ಕವಿದು ಆಗಾಗ್ಗೆ ಮಳೆ ಸುರಿಯುತ್ತಿದ್ದರಿಂದ ವಾತಾವರಣ ತಂಪಾಗಿದೆ. ಮಂಗಳವಾರ ದಿನವಿಡಿ ಜಿಟಿ ಜಿಟಿ ಮಳೆಯಾಗಿದ್ದರಿಂದ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆ ಉಂಟಾಯಿತು.

ಹಾವೇರಿ: ಕಳೆದ ನಾಲ್ಕೈದು ದಿನಗಳಿಂದ ಜಿಲ್ಲಾದ್ಯಂತ ನಿರಂತರವಾಗಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಮಂಗಳವಾರವೂ ಮುಂದುವರಿದಿದೆ. ನಿರಂತರ ಮಳೆಯಿಂದ ಬೆಳೆಹಾನಿಯಾಗಿದ್ದು, ಹಲವೆಡೆ ಮನೆಗಳು ಧರೆಗುರುಳಿವೆ. ಕೆಲವೆಡೆ ಬ್ರಿಡ್ಜ್‌ ಕಂ ಬ್ಯಾರೇಜುಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಜಿಲ್ಲಾದ್ಯಂತ ಕಳೆದ ಮೋಡ ಕವಿದು ಆಗಾಗ್ಗೆ ಮಳೆ ಸುರಿಯುತ್ತಿದ್ದರಿಂದ ವಾತಾವರಣ ತಂಪಾಗಿದೆ. ಮಂಗಳವಾರ ದಿನವಿಡಿ ಜಿಟಿ ಜಿಟಿ ಮಳೆಯಾಗಿದ್ದರಿಂದ ನಗರದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆ ಉಂಟಾಯಿತು. ಜಿಲ್ಲೆಯ ಹಾವೇರಿ, ಹಾನಗಲ್ಲ, ರಾಣಿಬೆನ್ನೂರು, ಶಿಗ್ಗಾಂವಿ, ಸವಣೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ಭಾಗದಲ್ಲಿ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರಿಂದ ಜಿಲ್ಲೆಯ ವರದಾ ನದಿ ಮೈದುಂಬಿ ಹರಿಯುತ್ತಿದೆ. ತುಂಗಭದ್ರಾ, ಧರ್ಮಾ, ಕುಮದ್ವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಅಕ್ಕಪಕ್ಕದ ಜಮೀನುಗಳ ರೈತರಲ್ಲಿ ಆತಂಕ ಮೂಡಿಸಿದೆ. ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಹಾನಗಲ್ಲ ತಾಲೂಕಿನ ಕೂಡಲ- ನಾಗನೂರು, ಲಕಮಾಪುರ- ಬಾಳಂಬಿಡ, ಸವಣೂರು ತಾಲೂಕಿನ ಚಿಕ್ಕಮುಗದೂರ- ಕರ್ಜಗಿ, ಕಳಸೂರ- ಕೋಳೂರ, ಹಿರೇಮರಳಿಹಳ್ಳಿ- ಕೋಣನತಂಬಗಿ ಗ್ರಾಮಗಳ ಬ್ರಿಡ್ಜ್‌ ಕಂ ಬ್ಯಾರೇಜ್ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಈ ಗ್ರಾಮಗಳಿಗೆ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆಗೆ ಈವರೆಗೆ 102.80 ಹೆಕ್ಟೇರ್ ಕೃಷಿ ಬೆಳೆ ಹಾಗೂ 45.47 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 148.57 ಹೆಕ್ಟೇರ್ ಬೆಳೆಹಾನಿಯಾಗಿದೆ. ಮಳೆಯಿಂದ ಜಿಲ್ಲಾದ್ಯಂತ 178 ಮನೆಗಳು, 5 ದನದ ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ.

ಮಳೆ ಮಾಹಿತಿ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 4.70 ಮಿಮೀ ಮಳೆಯಾಗಿದ್ದು, ಬ್ಯಾಡಗಿ ತಾಲೂಕಿನಲ್ಲಿ 4.10 ಮಿಮೀ, ಹಾನಗಲ್ಲ 6.10 ಮಿಮೀ, ಹಾವೇರಿ 2.90 ಮಿಮೀ, ಹಿರೇಕೆರೂರು 6.20 ಮಿಮೀ, ರಾಣಿಬೆನ್ನೂರು 2.30 ಮಿಮೀ, ಸವಣೂರು 7.10 ಮಿಮೀ, ಶಿಗ್ಗಾಂವಿ 7.30 ಮಿಮೀ, ರಟ್ಟೀಹಳ್ಳಿ ತಾಲೂಕಿನಲ್ಲಿ 3.90 ಮಿಮೀ ಮಳೆಯಾಗಿದೆ.

ಮನೆಗೋಡೆ ಕುಸಿತಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಮಂಗಳವಾರ ಹಾನಗಲ್ಲ ತಾಲೂಕಿನ ಶಾಡಗುಪ್ಪಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದೆ.

ಗ್ರಾಮದ ಗೌರಮ್ಮ ಆನವಟ್ಟಿ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಿರಂತರ ಮಳೆಯಾಗುತ್ತಿದ್ದರಿಂದ ಮನೆಯ ಒಂದುಭಾಗದ ಗೋಡೆ ತೇವಾಂಶಗೊಂಡು ಕುಸಿದು ಬಿದ್ದು, ಮನೆಯಲ್ಲಿನ ವಸ್ತುಗಳಿಗೆ ಹಾನಿ ಸಂಭವಿಸಿದೆ. ಈ ಬಗ್ಗೆ ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಹವಾಮಾನ ಇಲಾಖೆ ವರದಿ ಆಧರಿಸಿ ಆ. 20ರಂದು ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ, ಪದವಿಪೂರ್ವ ಕಾಲೇಜು, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ