ಶಿಗ್ಗಾಂವಿ: ದುಷ್ಕರ್ಮಿಗಳ ಗುಂಪೊಂದು ಕಬ್ಬಿಣದ ರಾಡು, ಲಾಂಗು- ಮಚ್ಚುಗಳಿಂದ ಗುತ್ತಿಗೆದಾರರೊಬ್ಬರನ್ನು ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ಮಧ್ಯಾಹ್ನ ಪಟ್ಟಣದ ಗಂಗೇಬಾವಿ ಕ್ರಾಸ್ ಹತ್ತಿರದ ಮಹೇಶ ಡಾಬಾ ಪಕ್ಕದಲ್ಲಿ ನಡೆದಿದೆ.ಪಟ್ಟಣದ ಗುತ್ತಿಗೆದಾರ ಹಾಗೂ ಯುವ ಮುಖಂಡ ಶಿವಾನಂದ ಕುನ್ನೂರ (೪೫) ಎಂಬವರೇ ಕೊಲೆಯಾದ ವ್ಯಕ್ತಿ.
ಘಟನಾ ಸ್ಥಳಕ್ಕೆ ಎಸ್ಪಿ ಅಂಶುಕುಮಾರ, ಡಿವೈಎಸ್ಪಿ ಎಂ.ಎಸ್. ಪಾಟೀಲ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪಟ್ಟಣದಲ್ಲಿ ಕೆಲವು ದಿನಗಳ ಹಿಂದೆ ಸಿಆರ್‌ಪಿಎಫ್ ಪೊಲೀಸರೊಬ್ಬರ ಶವ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಭಯಾನಕ ಹತ್ಯೆ ಹಾಡಹಗಲೇ ನಡೆದಿರುವುದು ಸಾರ್ವಜನಿಕರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.ಪೌರಕಾರ್ಮಿಕ ಸಾವು, ಕ್ರಮಕ್ಕೆ ಆಗ್ರಹಹಾವೇರಿ: ಜನ್ಮದಿನದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ನಡೆದ ಗಲಾಟೆಯಲ್ಲಿ ಆರೋಪಿಗಳಿಂದ ನಿಂದನೆಗೊಳಗಾಗಿ ಬೇಸರಗೊಂಡು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪೌರಕಾರ್ಮಿಕ ಚಿಕಿತ್ಸೆ ಫಲಿಸದೇ ಸೋಮವಾರ ರಾತ್ರಿ ಸಾವಿಗೀಡಾಗಿದ್ದು, ಇದಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಕುಟುಂಬದವರು ಆಗ್ರಹಿಸಿದ್ದಾರೆ.ರಂಗಪ್ಪ ಹೆರಕಲ್ಲ(53) ಮೃತಪಟ್ಟವರು.ಇತ್ತೀಚೆಗೆ ಅನುಮತಿಯಿಲ್ಲದೇ ಅಳವಡಿಸಿದ್ದ ಜನ್ಮದಿನದ ಶುಭಾಶಯ ಕೋರುವ ಬ್ಯಾನರ್ ತೆರವು ಮಾಡಿದ ಹಿನ್ನೆಲೆಯಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಅಕ್ಷತಾ ಕೆ.ಸಿ. ಎನ್ನುವವರು ಪೌರಕಾರ್ಮಿಕ ರಂಗಪ್ಪ ಹೆರಕಲ್ಲ ಅವರಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದರು. ಈ ಘಟನೆ ನಂತರ ಖಿನ್ನತೆಗೆ ಒಳಗಾಗಿದ್ದ ರಂಗಪ್ಪ, ಜೂ. 19ರಂದು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ರಂಗಪ್ಪನನ್ನು ಕುಟುಂಬಸ್ಥರು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಘಟನೆ ಹಿನ್ನೆಲೆ ಏನು?ಕೆಲ ದಿನಗಳ ಹಿಂದೆ ಕೊರವರ ಓಣಿಯ ನಿವಾಸಿಯೊಬ್ಬರ ಜನ್ಮದಿನದ ನಿಮಿತ್ತ ಅವರು ತಮ್ಮ ಏರಿಯಾದಲ್ಲಿ ದೊಡ್ಡದಾಗಿ ಬ್ಯಾನರ್ ಹಾಕಿಸಿದ್ದರು. ನಗರಸಭೆ ಅನುಮತಿ ಇಲ್ಲದೇ ಬ್ಯಾನರ್ ಹಾಕಿದ್ದರು ಎಂಬ ಕಾರಣಕ್ಕೆ ನಗರಸಭೆ ಅಧಿಕಾರಿಗಳು ಬ್ಯಾನರ್ ತೆರವಿಗೆ ಮುಂದಾಗಿದ್ದರು. ಈ ವೇಳೆ ಬ್ಯಾನರ್ ತೆರವುಗೊಳಿಸದಂತೆ ಅಕ್ಷತಾ ಕೆ.ಸಿ. ಎನ್ನುವವರು ಫೋನ್‌ನಲ್ಲಿ ಅವಾಜ್ ಹಾಕಿದ್ದರು.ಅಕ್ಷತಾ ಅವರ ನಿಂದನೆಯನ್ನು ಮನಸ್ಸಿಗೆ ಹಚ್ಚಿಕೊಂಡು ರಂಗಪ್ಪ ಬೇಸತ್ತು ವಿಷ ಸೇವಿಸಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಕುರಿತು ಹಾವೇರಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.