ಗುತ್ತಿಗೆದಾರರು ಎಲ್ಲಿ ಬೇಕಾದರೂ ಖರೀದಿಸಲಿ: ಸಂಸದ ರಾಜಶೇಖರ ಹಿಟ್ನಾಳ

KannadaprabhaNewsNetwork |  
Published : Nov 11, 2025, 02:15 AM IST
ರಾಜಶೇಖರ ಹಿಟ್ನಾಳ | Kannada Prabha

ಸಾರಾಂಶ

ಗುತ್ತಿಗೆದಾರರು ಎಲ್ಲಿ ಬೇಕಾದರೂ ಖರೀದಿಸಬಹುದು. ಅವರನ್ನು ನಾವು ಪ್ರೇರಣಾ ಎಜೆನ್ಸಿಯಲ್ಲಿಯೇ ಖರೀದಿಸುವಂತೆ ಹೇಳಿಯೇ ಇಲ್ಲ. ದುಡ್ಡು ಕೊಟ್ಟು ಯಾವ ಕ್ರಷರ್ ಮಾಲೀಕರ ಬಳಿಯಾದರೂ ಖರೀದಿಸಬಹುದು ಎಂದು ಸಂಸದ ರಾಜಶೇಖರ ಹೇಳಿದ್ದಾರೆ.

ಕೊಪ್ಪಳ: ಗುತ್ತಿಗೆದಾರರು ಎಲ್ಲಿ ಬೇಕಾದರೂ ಖರೀದಿಸಬಹುದು. ಅವರನ್ನು ನಾವು ಪ್ರೇರಣಾ ಎಜೆನ್ಸಿಯಲ್ಲಿಯೇ ಖರೀದಿಸುವಂತೆ ಹೇಳಿಯೇ ಇಲ್ಲ. ದುಡ್ಡು ಕೊಟ್ಟು ಯಾವ ಕ್ರಷರ್ ಮಾಲೀಕರ ಬಳಿಯಾದರೂ ಖರೀದಿಸಬಹುದು ಎಂದು ಸಂಸದ ರಾಜಶೇಖರ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರು ವಿನಾಕಾರಣ ಗೊಂದಲ ಮಾಡುತ್ತಿದ್ದಾರೆ. ನಾವು ಸ್ಪಷ್ಟವಾಗಿದ್ದೇವೆ. ಎಜೆನ್ಸಿ ಮಾಡಿರುವುದು ಕ್ರಷರ್ ಮಾಲೀಕರ ಹಿತಕ್ಕಾಗಿಯೇ ಹೊರತು ನನ್ನ ವೈಯಕ್ತಿಕ ಹಿತಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರೇರಣಾ ಸಂಸ್ಥೆ ಎನ್ನುವುದು ಕೇವಲ ಕ್ರಷರ್ ಮಟಿರಿಯಲ್ ಪೂರೈಕೆ ಮಾಡುವುದಕ್ಕಾಗಿ ಹುಟ್ಟಿಕೊಂಡಿಲ್ಲ. ಅದು ಇತರೆ ಪೂರೈಕೆಯನ್ನೂ ಮಾಡುತ್ತದೆ. ಇದನ್ನು ಮಾಡಿರುವ ಉದ್ದೇಶವೇ ಎಲ್ಲರಿಗೂ ಅನುಕೂಲವಾಗಲಿ ಎಂದು ಹೇಳಿದರು.

ಇಂಥ ಎಜೆನ್ಸಿಯನ್ನು ನಾವಷ್ಚೇ ಮಾಡಬೇಕು ಎಂದೇನೂ ಇಲ್ಲ, ಯಾರು ಬೇಕಾದರೂ ಮಾಡಬಹುದು. ಬೇಕಾದರೆ ಗುತ್ತಿಗೆದಾರರು ಯಾರಾದರೂ ಪಾಲುದಾರರು ಆಗುತ್ತಾರೆ ಎನ್ನುವುದಾದರೆ ನಾನೇ ಬಿಟ್ಟುಕೊಡಲು ಸಿದ್ಧನಿದ್ದೇನೆ. ಅವರು ಸಹ ಬಂದು ಪಾಲುದಾರಿಕೆ ಪಡೆದುಕೊಳ್ಳಲಿ ಎಂದು ಸವಾಲು ಹಾಕಿದರು.

ಸಾಲ ಕೊಡಬೇಕು ಎಂದು ಹೋರಾಟ ಮಾಡುವುದನ್ನು ನಾವು ಎಲ್ಲಿಯೂ ಕೇಳಿಲ್ಲ. ಇದು ಜಗತ್ತಿನಲ್ಲಿಯೇ ಮೊದಲ ಹೋರಾಟ ಇರಬೇಕು ಎಂದು ವ್ಯಂಗ್ಯವಾಡಿದರು.

ಅನೇಕರು ನಷ್ಟ ಎದುರಿಸಿ, ಈಗಾಗಲೇ 17 ಕ್ರಷರ್ ಮುಚ್ಚಲಾಗಿದೆ. ಈಗ ಉಳಿದಿರುವ 43 ಕ್ರಷರ್‌ಗಳೂ ಸಂಕಷ್ಟದಲ್ಲಿವೆ. ಗುತ್ತಿಗೆದಾರರು ಸರಿಯಾಗಿ ಪೇಮೆಂಟ್ ಮಾಡಿದರೆ ನಮಗೇನೂ ಸಮಸ್ಯೆ ಇಲ್ಲ. ಸಾಲ ಹೇಳುವುದರಿಂದ ಅವುಗಳನ್ನು ನಡೆಸಲು ಆಗುತ್ತಿಲ್ಲ. ಹೀಗಾಗಿಯೇ ಈಗ ಪ್ರೇರಣಾ ಎಜೆನ್ಸಿ ನೂರಕ್ಕೆ ನೂರು ಹಣ ಪಾವತಿ ಮಾಡಿ ಕ್ರಷರ್ ಮಾಲೀಕರಿಂದ ಖರೀದಿಸಿಯೇ ಇತರರಿಗೆ ಮಾರಾಟ ಮಾಡುತ್ತದೆ. ಕಳೆದೊಂದು ತಿಂಗಳಲ್ಲಿಯೇ ಬರೋಬ್ಬರಿ ₹5 ಕೋಟಿ ಮೌಲ್ಯದ ಜಲ್ಲಿಕಲ್ಲು ಪೂರೈಕೆ ಮಾಡಿದ್ದು, ಅಷ್ಟನ್ನು ನಾವು ಕ್ರಷರ್ ಮಾಲೀಕರಿಗೆ ಪಾವತಿ ಮಾಡಿದ್ದೇವೆ. ಗುತ್ತಿಗೆದಾರರು ಎಲ್ಲಿ ಬೇಕಾದರೂ ಖರೀದಿ ಮಾಡಲಿ ಮತ್ತು ಅದನ್ನು ತಕ್ಷಣ ಪಾವತಿ ಮಾಡಲಿ, ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಸಾರ್ವಜನಿಕರಿಗೆ ಇದರಿಂದ ಯಾವುದೇ ತೊಂದರೆ ಇಲ್ಲ. ಸಾರ್ವಜನಿಕರು ಮನೆಯಿಂದಲೇ ಕರೆ ಮಾಡಿದರೆ ಸಾಕು, ಅವರಿಗೆ ಪೂರೈಕೆ ಮಾಡುತ್ತೇವೆ ಎಂದರು.

ಕ್ರಷರ್ ಮಾಲೀಕರು ಮತ್ತು ಗುತ್ತಿಗೆದಾರರ ನಡುವೆ ನಡೆದಿರುವುದು ವ್ಯವಹಾರಿಕ ವಿವಾದವೇ ಹೊರತು ಇದರಲ್ಲಿ ರಾಜಕೀಯ ಇಲ್ಲ. ಗುತ್ತಿಗೆದಾರರು ಮತ್ತು ಕ್ರಷರ್‌ ಮಾಲೀಕರು ಎರಡು ಪಕ್ಷದವರಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಸರ್ಕಾರದ ನಿಯಮದಂತೆಯೇ ನಾವು ಗುತ್ತಿಗೆದಾರರಿಗೆ ಪೂರೈಕೆ ಮಾಡಲು ಸಿದ್ಧರಿದ್ದೇವೆ, ಆದರೆ, ಹಣಪಾವತಿ ಮಾಡಬೇಕು ಎನ್ನುವುದು ನಮ್ಮ ಕಠಿಣ ನಿರ್ಧಾರ ಎಂದರು.

PREV

Recommended Stories

ಪ್ರತಿಯೊಂದು ಕಾರ್ಯವನ್ನು ಭಗವಂತನ ಪ್ರೀತಿಗಾಗಿ ಮಾಡಿ
ಹಿಂದುಳಿದ ವರ್ಗಕ್ಕೆ ಕಾನೂನು ನೆರವು