ಮಾ.5 ರಂದು ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ । ಸಾಂಕೇತಿಕ ಪ್ರತಿಭಟನೆ: ಆರ್.ಮಂಜುನಾಥ್
ಲೋಕೋಪಯೋಗಿ, ಜಲಸಂಪನ್ಮೂಲ, ಆರ್‌ಡಿಪಿಆರ್ ಸೇರಿದಂತೆ ಎಂಟು ಇಲಾಖೆಗಳಿಗೆ ಒಟ್ಟು ₹37 ಸಾವಿರ ಕೋಟಿ ಬಾಕಿ ಇದ್ದು, ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಆಯಾ ಇಲಾಖೆ ಸಚಿವರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ, ಅನಿವಾರ್ಯವಾಗಿ ಮಾ.5 ರಂದು ರಾಜ್ಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಿ ಸಾಂಕೇತಿಕವಾಗಿ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ತಿಳಿಸಿದರು.
ಚಿಕ್ಕಮಗಳೂರಿನ ಜಿಲ್ಲಾ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಪ್ರತಿಭಟನೆ ನಡಸುವ ಬಗ್ಗೆ ಚರ್ಚಿಸಿ, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಾಕಿ ಬಿಲ್ಲು ಪಾವತಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ, ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಲಾಗಿದೆ. ಈ ನಿಟ್ಟಿನಲ್ಲಿ ಒಂದು ದಿನ ರಾಜ್ಯಾದ್ಯಂತ ಕಾಮಗಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು. ಆಗಲೂ ಸರ್ಕಾರ ಸ್ಪಂದಿಸದಿದ್ದರೆ, ನಿರಂತರ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದಾಗ ಹಳೇ ಸರ್ಕಾರದ ಅವಧಿ ಬಿಲ್ಲುಗಳು ಎಂದು ತಾತ್ಸಾರ ತೋರುತ್ತಾರೆ. ಕನಿಷ್ಠ ಸೌಜನ್ಯಕ್ಕೂ ಬಾಕಿ ಬಿಲ್ಲು ಇರುವ ಇಲಾಖೆ ಸಚಿವರು, ಕಾರ್ಯಾದರ್ಶಿಗಳು ಹಾಗೂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಸಭೆ ಕರೆದಿಲ್ಲ. ಮುಖ್ಯಮಂತ್ರಿ ಸಭೆ ನಡೆಸಿದರೆ, ಬಾಕಿ ಬಿಲ್ಲು ಪಾವತಿ ಸೇರಿದಂತೆ ಗುತ್ತಿಗೆದಾರರ ಶೇ.75 ರಷ್ಟು ಸಮಸ್ಯೆ ಪರಿಹಾರವಾಗಲಿವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಶಾಂತೇಗೌಡ, ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಬಿ.ಸಿ. ದಿನೇಶ್, ಉಪಾಧ್ಯಕ್ಷರಾದ ಬಿ.ಎಸ್.ಗುರುಸಿದ್ದಪ್ಪ, ಮಂಜುನಾಥ್, ಜಂಟಿ ಕಾರ್ಯದರ್ಶಿಗಳಾದ ಬಿ.ಎಲ್ .ಮುನಿರಾಜು, ಲಕ್ಷ್ಮೀಪತಿ, ಸುರೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ರವಿ ಚಂಗಪ್ಪ, ಹೇಮಂ ತ್‌ಕುಮಾರ್, ನಿರ್ದೇಶಕರಾದ ವಿ.ಎಚ್.ರಂಗಸ್ವಾಮಿ, ಸುಬ್ರಮಣಿ, ಜಿಲ್ಲಾ ಉಪಾಧ್ಯಕ್ಷ ಬಿ.ಎ.ನಾಗರಾಜ್, ಕಾರ್ಯದರ್ಶಿ ಬಿ.ಎಂ. ಪುಟ್ಟಸ್ವಾಮಿ, ಸಹ ಕಾರ್ಯದರ್ಶಿ ಕೆ.ವಿ.ಮಂಜುನಾಥ್, ಖಜಾಂಚಿ ಸಿ.ಎಸ್.ಖಲಂಧರ್, ಸದಸ್ಯರಾದ ಎಂ.ಮಂಜೇಗೌಡ, ವೆಲ್ಸಿಪಿಂಟೋ, ಕೆ.ಎನ್.ದೊಡ್ಡೇಗೌಡ, ಎಂ.ಎ.ರವಿಕುಮಾರ್, ಜಿ.ಎಂ.ಪ್ರಕಾಶ್, ಅನುಪ್‌ಕುಮಾರ್, ಬಿ.ಎನ್.ಮಂಜುನಾಥ್, ಟಿ.ಎಂ.ನಾಸೀರ್ ಮತ್ತಿತರರಿದ್ದರು.
ಹಿಂದಿನ ಸರ್ಕಾರಕ್ಕಿಂತ ಅಧಿಕ ಕಮಿಷನ್ ಸತ್ಯ
ಕಮಿಷನ್ ಬಗ್ಗೆ ಹೆಚ್ಚಾಗಿ ಮಾತನಾಡಿದರೆ, ರಾಜ್ಯದ 1.5 ಲಕ್ಷ ಮಂದಿ ಗುತ್ತಿಗೆದಾರರಿಗೆ ಸಮಸ್ಯೆ ಉಂಟಾಗಲಿದೆ. ಸಂಕಷ್ಟ ಅನುಭವಿಸಬೇಕೆ ಹೊರತು. ಬಾಯಿ ಬಿಟ್ಟು ಹೇಳುವ ಪರಿಸ್ಥಿತಿ ಗುತ್ತಿಗೆದಾರರಿಗೆ ಇಲ್ಲ.ಸರ್ಕಾರದಲ್ಲಿ ಎಲ್ಲರೂ ಕೆಟ್ಟವರಿದ್ದಾರೆ, ಎಲ್ಲರೂ ಒಳ್ಳೆಯರಿದ್ದಾರೆ ಎಂದು ಹೇಳಲಾಗದು.. ಬಂಡವಾಳ ಹಾಕಿದ್ದೇವೆ. ಇನ್ನೂ 2.5 ವರ್ಷ ಪ್ರಸ್ತುತ ಸರ್ಕಾರದೊಂದಿಗೆ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಇರುವಾಗ ಪ್ಯಾಕೇಜ್ ಸಿಸ್ಟಂ ವಿರೋಧಿಸಿದ್ದರು. ಜತೆಗೆ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ಯಾಕೇಜ್ ಸಿಸ್ಟಂ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೂ ಸಿದ್ದರಾಮಯ್ಯ ಸರ್ಕಾರದಲ್ಲಿಯೇ ಪ್ಯಾಕೇಜ್ ಸಿಸ್ಟಂ ಅನುಸರಿಸಲಾಗುತ್ತಿದೆ. ಕೂಡಲೇ ಪ್ಯಾಕೇಜ್ ಸಿಸ್ಟಂ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
---ಬಾಕ್ಸ್---
ಇಲಾಖೆಬಾಕಿ ಬಿಲ್ಲು ಮೊತ್ತಲೋಕೋಪಯೋಗಿ ಇಲಾಖೆ8,370ಜಲಸಂಪನ್ಮೂಲ ಇಲಾಖೆ13,000ಆರ್ ಡಿಪಿಆರ್3,800ಸಣ್ಣ ನೀರಾವರಿ ಇಲಾಖೆ3,000ನಗರಾಭಿವೃದ್ಧಿ ಇಲಾಖೆ2,000ವಸತಿ ಮತ್ತು ವಕ್ಫ್2,600ಕಾರ್ಮಿಕ ಇಲಾಖೆ2,000ಬಿಬಿಎಂಪಿ(ಜಿಬಿಎ)2,600ಒಟ್ಟು37,370