ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಗುತ್ತಿಗೆದಾರರಿಂದ ಪ್ರತಿಭಟನೆ

KannadaprabhaNewsNetwork |  
Published : Aug 25, 2026, 02:30 AM IST
ಸವಣೂರು ಪಟ್ಟಣದ ಪುರಸಭೆ ಕಾರ್ಯಾಲಯದ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ನಿರತರು. | Kannada Prabha

ಸಾರಾಂಶ

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಡಿ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಬಿಲ್ ಮೊತ್ತವನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಗುತ್ತಿಗೆದಾರರ ಸಂಘದ ಸಹಭಾಗಿತ್ವದೊಂದಿಗೆ ಸೋಮವಾರದಿಂದ ಪುರಸಭೆ ಆವರಣದಲ್ಲಿ ತಮಟೆ ಬಾರಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಾಲನೆ ನೀಡಲಾಯಿತು.

ಸವಣೂರು: ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನದಡಿ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಬಿಲ್ ಮೊತ್ತವನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಗುತ್ತಿಗೆದಾರರ ಸಂಘದ ಸಹಭಾಗಿತ್ವದೊಂದಿಗೆ ಸೋಮವಾರದಿಂದ ಪುರಸಭೆ ಆವರಣದಲ್ಲಿ ತಮಟೆ ಬಾರಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಚಾಲನೆ ನೀಡಲಾಯಿತು.ಪ್ರತಿಭಟನೆ ನೇತೃತ್ವವಹಿಸಿದ್ದ ಮಾದಿಗ ಗುತ್ತಿಗೆದಾರರ ಮಹಾಸಭಾದ ಅಧ್ಯಕ್ಷ ಲಕ್ಷ್ಮಣ ಕನವಳ್ಳಿ ಮಾತನಾಡಿ, ಪಟ್ಟಣ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡಗಳಲ್ಲಿ 2024-25ನೇ ಸಾಲಿನಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿ ರು. 97 ಲಕ್ಷಕ್ಕೂ ಹೆಚ್ಚಿನ ಬಿಲ್ ಮೊತ್ತ ಇನ್ನೂ ಬಾಕಿ ಉಳಿದಿದೆ. 2025-26ನೇ ಸಾಲಿನ ಕಾಮಗಾರಿಗಳಿಗೆ ಸಂಬಂಧಿಸಿ ರು. 181.40 ಲಕ್ಷ ಮೊತ್ತದ ಅನುದಾನವೂ ಬಾಕಿ ಇರುವುದಾಗಿ ಹೇಳಿದರು.ಕಾಮಗಾರಿಗಳಿಗೆ ಅಗತ್ಯವಿರುವ ಎಂ-ಬುಕ್, ಬಿಲ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಈಗಾಗಲೇ ಸಲ್ಲಿಸಲಾಗಿದ್ದು, ಇಲಾಖೆಯ ಒಪ್ಪಿಗೆ ದೊರೆತ ನಂತರವೂ ಹಣ ಬಿಡುಗಡೆಯಾಗಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಲ್ಲ ಎಂದು ದೂರಿದ ಅವರು, ಪುರಸಭೆ ಮುಖ್ಯಾಧಿಕಾರಿಗಳಿಗೂ ಪದೇಪದೇ ಮನವಿ ನೀಡಿ ಗುತ್ತಿಗೆದಾರರ ಆರ್ಥಿಕ ಸಂಕಷ್ಟದ ಗಂಭೀರತೆಯನ್ನು ಈ ಹಿಂದೆಯೇ ಮನವರಿಕೆ ಮಾಡಿಕೊಡಲಾಗಿತ್ತು. ಈವರೆಗೆ ಯಾವುದೇ ಮೊತ್ತ ಬಿಡುಗಡೆಯಾಗದ ಕಾರಣ, ಹೋರಾಟದ ಮೊದಲ ಹಂತವಾಗಿ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.ಮುಷ್ಕರ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಬಾಕಿ ಬಿಲ್‌ಗಳ ಕುರಿತು ಜುಲೈ 17ರಂದೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಆಗಸ್ಟ್ 1ರಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಬಾಕಿ ಅನುದಾನ ಬಿಡುಗಡೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡುವಂತೆ ಅವರು ಗುತ್ತಿಗೆದಾರರಲ್ಲಿ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮಣ ಕನವಳ್ಳಿ, ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಬರೀ ಸಮಜಾಯಿಷಿಯಿಂದ ಗುತ್ತಿಗೆದಾರರ ಸಂಕಷ್ಟ ಪರಿಹಾರವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ ಅವರು, ಬಾಕಿ ಅನುದಾನ ಬಿಡುಗಡೆಯಾಗುವವರೆಗೆ ಮುಷ್ಕರ ಮುಂದುವರಿಸುವುದಾಗಿ ಪಟ್ಟುಹಿಡಿದರು. ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟಕ್ಕೆ ಸಿದ್ಧ. ಸವಣೂರು ಪುರಸಭೆ ಎದುರು ಮತ್ತೊಂದು ಪ್ರತಿಭಟನೆಯ ಸನ್ನಿವೇಶ ಎದುರಾಗಬಹುದೆಂದೂ ಎಚ್ಚರಿಕೆ ನೀಡಿ ಮುಷ್ಕರ ಮುಂದುವರಿಸಿದರು.ಈ ಸಂದರ್ಭದಲ್ಲಿ ಎಸ್ಸಿ, ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯ ಕಾರ್ಯದರ್ಶಿ ಶಿವಾನಂದ ಹುಲ್ಲಮ್ಮನವರ, ಗುತ್ತಿಗೆದಾರರಾದ ವಿನಯ ಈಳಿಗೇರ, ವಿನಾಯಕ ಭೋವಿ, ರಾಜೇಶ ವಡ್ಡರ, ಸಿದ್ದಪ್ಪ ಗೌಳನಾಯ್ಕರ, ರಾಘವೇಂದ್ರ ಬಾಲೆಹೊಸುರ, ಪ್ರವೀಣ ಬಾಲೆಹೊಸುರ, ರಾಘವೇಂದ್ರ ದೊಡ್ಡಮನಿ, ಗೌಸ್ ಪೀರ್ಜಾದೆ, ಶಫಿ ಅಹ್ಮದ ಬಾಡ, ನೌಷದ ಲೋಹಾರ, ಜಗದೀಶ ಪೂಜಾರ, ಮುಕ್ತಾರ ಹಂಸಾಗರ, ಶಂಕರಪ್ಪ ಮರಗಪ್ಪನವರ, ಗುಡ್ಡಪ್ಪ ಅತ್ತಿಗೇರಿ, ಮಂಜುನಾಥ ಕೈರನವರ, ಖಾಜಾ ಮೋದಿನ ಕನವಳ್ಳಿ ಹಾಗೂ ಸಾರ್ಫರಾಜ ರಮಣೇದ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ ಪ್ರಾರಂಭಿಸಲು ಆಗ್ರಹಿಸಿ ಪ್ರತಿಭಟನೆ
ಹಗಲು ೭ ತಾಸು ತ್ರಿಫೇಸ್ ವಿದ್ಯುತ್‌ಗೆ ಆಗ್ರಹಿಸಿ ಪ್ರತಿಭಟನೆ