ಕಾರವಾರ: ಪ್ರತಿ ಗ್ರಾಮದ ಕೊಂಡಿಯಾಗಿ ಕೆಲಸ ಮಾಡುವ ಪತ್ರಕರ್ತರು ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಾರೆ. ಒತ್ತಡದಲ್ಲಿ ಕೆಲಸ ಮಾಡುವ ಮಾಧ್ಯಮದವರ ಶ್ರಮ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ಅಧಿಕಾರಿಗಳಿಗೆ ಸಮಯದ ಒತ್ತಡ ಇರಲ್ಲ. ಆದರೆ ಮಾಧ್ಯಮದವರಿಗೆ ಹಾಗಲ್ಲ. ಅಂದಿನ ಕೆಲಸವನ್ನು ಅಂದೇ ಮುಗಿಸಬೇಕು. ಈ ಕೆಲಸಕ್ಕೆ ಕುಟುಂಬದ ಸಹಕಾರವೂ ಅಗತ್ಯ, ಅದಕ್ಕಾಗಿ ಅವರ ಕುಟುಂಬಕ್ಕೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕೆಗಳನ್ನು ನಿಯಮಿತವಾಗಿ ಓದುವುದರಿಂದ ಜಿಲ್ಲೆಯ ಸ್ಥಿತಿಗತಿಗಳು ತಿಳಿಯುತ್ತವೆ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದರು.ಜಿಪಂ ಸಿಇಒ ಡಾ.ದಿಲೀಶ್ ಶಶಿ ಮಾತನಾಡಿ, ಮಾಧ್ಯಮವು ಜನರು ಮತ್ತು ಸರ್ಕಾರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅಧಿಕಾರಿಗಳ ಕಣ್ಣು ಹಾಗೂ ಕಿವಿಯಾಗಿರುತ್ತದೆ ಎಂದು ತಿಳಿಸಿದರು.
ಎಸ್ಪಿ ದೀಪನ್ ಎಂ.ಎನ್. ಮಾತನಾಡಿ, ಮಾಧ್ಯಮದ ಬೆಂಬಲವಿಲ್ಲದೇ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸುವುದು ಕಷ್ಟ. ಸ್ವಾತಂತ್ರ್ಯ ಹೋರಾಟದಲ್ಲಿ ಮಾಧ್ಯಮದ ಕೊಡುಗೆ ಬಹಳಷ್ಟಿದೆ ಎಂದು ಸ್ಮರಿಸಿದರು. ಆಡಳಿತಾತ್ಮಕ ವಿಷಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಮಾಧ್ಯಮ ಅತ್ಯಗತ್ಯ ಎಂದು ಅವರು ಹೇಳಿದರು.ಹಿರಿಯ ಪತ್ರಕರ್ತ ನಾಗರಾಜ್ ಹರಪನಹಳ್ಳಿ ಅವರಿಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುವರ್ಣ ನ್ಯೂಸ್ ವರದಿಗಾರ ಭರತ್ ರಾಜ್ ಕಲ್ಲಡ್ಕ, ಛಾಯಾಗ್ರಾಹಕ ದಿಲೀಪ್ ರೇವಣಕರ್, ನುಡಿಜೇನು ಉಪಸಂಪಾದಕ ಎಸ್.ಎಸ್. ಸಂದೀಪ್ ಸಾಗರ್ ಅವರಿಗೆ ಟ್ಯಾಗೋರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಜ್ಜಿಬಳ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ದೀಪಕಕುಮಾರ್ ಶೇಣ್ವಿ, ಪತ್ರಕರ್ತ ಶೇಷಗಿರಿ ಮುಂಡಳ್ಳಿ ಅವರನ್ನು ಸನ್ಮಾನಿಸಲಾಯಿತು. ಕಾರವಾರ ನಗರಸಭೆಯ ಪೌರ ಕಾರ್ಮಿಕರನ್ನು ಕೂಡ ವಿಶೇಷವಾಗಿ ಸನ್ಮಾನಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಪತ್ರಿಕಾಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ. ಹರಿಕಾಂತ್ ಸ್ವಾಗತಿಸಿದರು. ವಾರ್ತಾಧಿಕಾರಿ ಶಿವಕುಮಾರ್ ಬಿ ಉಪಸ್ಥಿತರಿದ್ದರು. ಉದಯ ಬರ್ಗಿ ವಂದಿಸಿದರು.
ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ, ವಾರ್ತಾ ಇಲಾಖೆ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ನಡೆಯಿತು.ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ, ವಾರ್ತಾ ಇಲಾಖೆ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ನಡೆಯಿತು.