ಕನ್ನಡಪ್ರಭ ವಾರ್ತೆ ವಿಜಯಪುರ
ಸಸ್ಯಗಳು ಮಾನವನ ಅವಿಭಾಜ್ಯ ಅಂಗವಾಗಿದ್ದು. ಪ್ರಾಕೃತಿಕ ಸಮತೋಲನ ಕಾಪಾಡುವುದರ ಜೊತೆಗೆ ಜೀವರಾಶಿಗಳಿಗೆ ಆಹಾರವನ್ನು ಪೂರೈಕೆ ಮಾಡುತ್ತವೆ. ಹಾಗಾಗೀ ಜೈವಿಕ ಅಧ್ಯಯನ ಅತಿಮುಖ್ಯ ಎಂದು ಹಿಟ್ನಳ್ಳಿ ಕೃಷಿ ವಿವಿ ಡೀನ್ ಡಾ.ಅಶೋಕ ಸಜ್ಜನ ಹೇಳಿದರು.ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ.ಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಜೈವಿಕ ವಿಜ್ಞಾನದ ಗಡಿಗಳು: ಸಂಶೋಧನೆ, ನಾವೀನ್ಯತೆ ಮತ್ತು ಸಹಯೋಗ ಎಂಬ ವಿಷಯದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬೆಳೆಗಳ ಇಳುವರಿ ಹೆಚ್ಚಿಸಿ ಆರ್ಥಿಕ ಬೆಳವಣಿಗೆ ಕಾಣಬೇಕಾದರೆ ಸುಧಾರಿತ ಕೃಷಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಹಾಗಾಗೀ ಸಸ್ಯಶಾಸ್ತ್ರವು ಆರ್ಥಿಕ ಉತ್ಪಾದನಾ ಕ್ಷೇತ್ರದಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಭಾರತ ಹಸಿರು ಕ್ರಾಂತಿಯ ಪರಿಣಾಮವಾಗಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಅದಕ್ಕೆ ಮೂಲ ಕಾರಣ ಕೃಷಿ ವಿಜ್ಞಾನಿ ಡಾ.ಎಂ.ಎಸ್.ಸ್ವಾಮಿನಾಥನ ೧೯೬೫-೬೮ ರಲ್ಲಿ ಸ್ವಾಮಿನಾಥನ ರವರು ಅಧಿಕ ಇಳುವರಿ ಬರುವಂತಹ ಗೋಧಿ ಹಾಗೂ ಅಕ್ಕಿ ತಳಿಗಳನ್ನು ಸಂಶೋಧಿಸಿದ ಪರಿಣಾಮ ಅದೇ ತಳಿಗಳನ್ನು ರೈತರು ವ್ಯಾಪಕವಾಗಿ ಬೆಳೆಯಲು ಪ್ರಾರಂಭಿಸಿದಾಗ ಭಾರತದಲ್ಲಿ ಹಸಿವಿನ ಪ್ರಮಾಣ ಕಡಿಮೆಯಾಗ ತೊಡಗಿತು. ಹಾಗಾಗಿ ಅವರನ್ನು ಭಾರತದ ಹಸಿರು ಕ್ರಾಂತಿಯ ಪಿತಾಮಹಾ ಎನಿಸಿಕೊಂಡಿದ್ದಾರೆ ಎಂದರು.
ಸಸ್ಯ ವಿಜ್ಞಾನವು ನಾವೀನ್ಯತೆಯಲ್ಲಿ ಮುಂಚೂಣಿಯಲ್ಲಿದೆ. ಪ್ರಪಂಚದ ಕೆಲವು ಸವಾಲುಗಳಿಗೆ ಪರಿಹಾರವನ್ನು ಒದಗಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನಗಳಿಂದ ಸುಸ್ಥಿರ ಕೃಷಿ ತಂತ್ರಗಳವರೆಗೆ, ಕೃಷಿಯನ್ನು ಮರುರೂಪಿಸುತ್ತಿವೆ. ಅಲ್ಲದೇ ಹೆಚ್ಚು ಸುಸ್ಥಿರ ಭವಿಷ್ಯವನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಪ್ರಕೃತಿಯಲ್ಲಿ ಮಣ್ಣು ಸಹಿತ ಅತೀ ಮುಖ್ಯವಾಗಿದ್ದು ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ನಾವು ಸಾಂಪ್ರದಾಯಿಕ ಕೃಷಿ ಬದಲಾಗಿ ಸುಧಾರಿತ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಂಡು ನಿರಂತರವಾಗಿ ಬೆಳೆಗಳನ್ನು ಬದಲಾಯಿಸುವುದರಿಂದ. ಮಣ್ಣಿನಲ್ಲಿನ ಬ್ಯಾಕ್ಟಿರೀಯಾಗಳು ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುವುದರ ಮೂಲಕ ಇಳುವರಿ ಪ್ರಮಾಣ ಹೆಚ್ಚಾಗುವಂತೆ ಮಾಡಿ ಉತ್ಪಾದನಾ ಶಕ್ತಿ ಹೆಚ್ಚಿಸುತ್ತದೆ ಎಂದು ಹೇಳಿದರು.ಪ್ರೊ.ವೈ.ಎಂ.ಜೈರಾಜ್ ಮಾತನಾಡಿ, ಡಾ.ಎಂ.ಬಿ.ಪಾಟೀಲ ಅವರು ಒಣ ಭೂಮಿಯನ್ನು ನೀರಾವರಿಗೆ ಒಳಪಡಿಸಿದ್ದರಿಂದ ಬಹಳಷ್ಟು ರೈತರ ಬದುಕು ಬದಲಾಗಿದೆ. ಕೃಷಿ ಪದ್ಧತಿಗಳು ಸುಧಾರಿತಗೊಂಡಿವೆ ಹಾಗಾಗಿಯೇ ಅವರನ್ನು ಆಧುನಿಕ ಭಗೀರಥ ಎಂದು ಕರೆಯಲಾಗುತ್ತಿದೆ ಎಂದರು.
ಕೃಷಿ ಪುರುಷರಿಂದ ಪ್ರಾರಂಭವಾಗಿಲ್ಲ ಅದು ಮಹಿಳೆಯರಿಂದ ಪ್ರಾರಂಭವಾಗಿದೆ. ನಗರಗಳಲ್ಲಿ ವಾತಾವರಣ ಕಲುಷಿತವಾಗುತ್ತಿದೆ. ದೆಹಲಿಯಲ್ಲಿ ಶುದ್ಧ ಗಾಳಿ ಇಲ್ಲ, ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಹಾಗಾಗಿ ನಾವು ನಮ್ಮ ವಾತಾವರಣವನ್ನು ಕಾಪಾಡಿಕೊಳ್ಳಲು ಪ್ರಯತ್ನ ಮಾಡಬೇಕು. ಕೊರೋನಾದಿಂದ ಜಗತ್ತು ತತ್ತರಿಸಿ ಎಲ್ಲ ವಲಯಗಳು ಕೆಲಸ ಮಾಡುವುದನ್ನು ನಿಲ್ಲಿಸಿದವು ಆದರೆ ಕೃಷಿ ಮಾತ್ರ ನಿರಂತರವಾಗಿ ಕಾರ್ಯ ನಿರ್ವಹಿಸಿತು. ಸರ್ಕಾರ ಎಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಿಲ್ಲ. ಕೃಷಿಯಲ್ಲಿ ಸಾಕಷ್ಟು ಉದ್ಯೋಗಗಳಿವೆ ಆದರೆ ನಾವು ಕೃಷಿಯಿಂದ ವಿಮುಖರಾಗುತ್ತಿದ್ದೇವೆ ಎಂದರು.ಕಲಬುರಗಿ ಖಾಜಾ ಬಂದೇನವಾಜ ವಿವಿಯ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸೈಯ್ಯದ ಅಬ್ರಾರ್, ಬಿ.ಎಲ್.ಡಿ.ಇ ಸಂಸ್ಥೆ ಆಡಳಿತಾಧಿಕಾರಿ ವ್ಹಿ.ಎಸ್.ಬಗಲಿ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ನಾಯಕ, ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಂ.ಮಿರ್ದೆ, ಉಪಪ್ರಾಚಾರ್ಯ ಅನಿಲ ನಾಯಕ್, ಪ್ರೊ.ಕೃಷ್ಣಾ ಮಂಡ್ಲಾ, ಪ್ರೊ.ಆರ್.ಡಿ.ಜ್ಯೋಶಿ, ಪ್ರೊ.ಗೀರಿಜಾ ನಿಂಬಾಳ, ಪ್ರೊ.ಪವನಕುಮಾರ ಮಹೀಂದ್ರಕರ್, ಪ್ರೊ.ಸಂತೋಷ ವಂಭಾಸೆ, ಪ್ರೊ.ಶ್ವೇತಾ ಸವನೂರ, ಡಾ.ಶ್ರೀನಿವಾಸ ದೊಡ್ಡಮನಿ, ಪ್ರೊ.ಶ್ರೀಧರ್ ಜೋಶಿ, ಹೇರಲಗಿ ಮಹೇಶ ಬೆಲ್ಲದ ಮುಂತಾದವರು ಇದ್ದರು. ನಿರ್ದೇಶಕ ಡಾ.ಪಿ ಎಸ್ ಪಾಟೀಲ ವಂದಿಸಿದರು. ಡಾ.ಸ್ವಾತಿ ಪಾಟೀಲ, ಪ್ರೊ.ಸೌಮ್ಯ ಸಜ್ಜನ ಕಾರ್ಯಕ್ರಮ ನಿರೂಪಿಸಿದರು.