ಸಮಾಜಕ್ಕೆ ಹಿರಿಯ ನಾಗರಿಕರ ಕೊಡುಗೆ ಅಪಾರ: ಮಲ್ಲಿಕಾರ್ಜುನ ತೊದಲಬಾಗಿ

KannadaprabhaNewsNetwork |  
Published : Oct 03, 2024, 01:28 AM IST
5ಕೆಪಿಎಲ್26 ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2024 ಕಾರ್ಯಕ್ರಮ | Kannada Prabha

ಸಾರಾಂಶ

ಹಿರಿಯ ನಾಗರಿಕರು ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಿಸಿ ಅವರನ್ನು ಗೌರವಿಸಬೇಕು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಉಪ ಕಾರ್ಯದರ್ಶಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹಿರಿಯ ನಾಗರಿಕರು ಸಮಾಜಕ್ಕೆ ನೀಡಿದ ಕೊಡುಗೆ ಸ್ಮರಿಸಿ ಅವರನ್ನು ಗೌರವಿಸಬೇಕು. ಸಮಾಜದ ಸಮತೋಲನದಲ್ಲಿ ಹಿರಿಯ ನಾಗರಿಕರ ಸಹಭಾಗಿತ್ವ ಅತೀ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕೆ ಹಿರಿಯ ನಾಗರಿಕರ ಕೊಡುಗೆ ಅಪಾರವಾಗಿದೆ. ಸಮಾಜದ ಒಳಿತಿಗಾಗಿ ಹಿರಿಯ ನಾಗರಿಕರ ಸೇವೆ ಶ್ಲಾಘನೀಯವಾದದ್ದು. ಹಿರಿಯರನ್ನು ಗೌರವಿಸುವ, ತಂದೆ-ತಾಯಿಯರನ್ನು ಪ್ರೀತಿಸಿ ಮತ್ತು ಅವರ ಕಾಳಜಿ ವಹಿಸುವ ನಿಟ್ಟಿನಲ್ಲಿ ಇಂದಿನ ಯುವ ಜನಾಂಗಕ್ಕೆ ಸಂಸ್ಕಾರ, ಸಂಸ್ಕೃತಿಗಳ ಮೌಲ್ಯಗಳನ್ನು ತಿಳಿಸುವುದರ ಜೊತೆಗೆ ಅವುಗಳನ್ನು ಪಾಲಿಸುವಂತೆ ತಿಳಿಸಬೇಕು ಎಂದರು.

ಹಿರಿಯ ನ್ಯಾಯವಾದಿ ವ್ಹಿ.ಎಂ. ಭೂಸನೂರಮಠ ವಿಶೇಷ ಉಪನ್ಯಾಸ ನೀಡಿ, ಎಲ್ಲ ನಾಗರಿಕರಿಗೆ ಅದರಲ್ಲೂ ರೋಗಗ್ರಸ್ಥರು, ನಿರುದ್ಯೋಗಿಗಳು, ಅಂಗವಿಕಲರು ಹಾಗೂ ವೃದ್ಧರ ಜೀವನ ಗೌರವಯುತವಾಗಿರಲು ಮತ್ತು ಅವರಿಗೆ ಆರ್ಥಿಕ, ಸಾಮಾಜಿಕ ಸುರಕ್ಷತೆ ಅತ್ಯಗತ್ಯವಾಗಿದೆ. ನಮ್ಮ ದೇಶದಲ್ಲಿ ಇತ್ತೀಚೆಗೆ ವೃದ್ಧರ, ಅತಿವೃದ್ಧರ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ಸಣ್ಣ ಕುಟುಂಬಗಳಾಗಿ ಪರಿವರ್ತಿತವಾಗಿರುವುದು ಎದ್ದು ಕಾಣುತ್ತಿದೆ. ವೃದ್ಧರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇವರಿಗೆ ರಕ್ಷಣೆ ಇಲ್ಲದೆ ಅನಾಥಾಶ್ರಮ, ವೃದ್ಧಾಶ್ರಮ ಸೇರುವಂತಾಗಿದ್ದು, ಗಗನಕ್ಕೇರಿದ ನಿತ್ಯ ವಸ್ತುಗಳ ಬೆಲೆ ಹಾಗೂ ಆರೋಗ್ಯ ವೆಚ್ಚ ಇವೆಲ್ಲವು ಹಿರಿಯರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು. ಈ ಎಲ್ಲ ಉದ್ದೇಶಗಳಿಂದ ಹಿರಿಯ ನಾಗರಿಕರ ರಕ್ಷಣೆಗೆ ಕಾನೂನನ್ನು ಜಾರಿಗೊಳಿಸಲಾಗಿದೆ. ಈ ಕಾಯ್ದೆ ಜಾರಿಯಿಂದಾಗಿ ಹಿರಿಯರ ಯೋಗ ಕ್ಷೇಮ ಸಾಧ್ಯವಾಗಿದೆ ಎಂದರು.

ಹಿರಿಯ ನಾಗರಿಕರ ಜಿಲ್ಲಾ ನೋಡಲ್ ಅಧಿಕಾರಿ ಡಾ. ನಂದಕುಮಾರ್ ಮಾತನಾಡಿ, ಹಿರಿಯ ಜೀವಿಗಳಲ್ಲಿ ವಯಸ್ಸಾದ ಮೇಲೆ ಹಲವಾರು ಬದಲಾವಣೆಗಳಾಗುವುದು ಸಾಮಾನ್ಯ. ಆದರೆ ಆರೋಗ್ಯದ ಬಗೆಗೆ ಹೆಚ್ಚಿನ ಕಾಳಜಿ ವಹಿಸಿ. ಒತ್ತಡದಿಂದಲೇ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ವಯೋವೃದ್ದರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೇವಲ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ವಯಸ್ಕರು ಸಂಬಂಧಗಳಿಗೆ ಬೆಲೆಕೊಟ್ಟು ಬದುಕು ನಡೆಸಿಕೊಂಡು ಹೋಗಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ತಿಪ್ಪಣ್ಣ ಸರಸಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಕೊಟ್ರಪ್ಪ ತೋಟದ ಮಾತನಾಡಿದರು.ಸಾಧಕರಿಗೆ ಸನ್ಮಾನ:

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಾದ ಶಾಂತಯ್ಯ ಹಿರೇಮಠ, ವೀರಪ್ಪ, ಸಿದ್ದಪ್ಪ ದುರುಗಪ್ಪ, ವಾಸಣ್ಣ ಬಿಳೇಗುಡ್ಡ, ಕಾಶಿಪತಿ ಕಮ್ಮಾರ, ಪಾಲಾಕ್ಷಪ್ಪ ಷಣ್ಮುಕಪ್ಪ, ಡಾ. ಕಲಿಗಣಿನಾಥ, ರವೀಂದ್ರ, ಶೇಖರಯ್ಯ, ನಾಗಪ್ಪ, ಸಿದ್ದಪ್ಪ, ಜಿ.ವಿ. ಜಹಾಗೀರದಾರ, ಚಂದ್ರಾರೆಡ್ಡಿ, ಸುಶೀಲಮ್ಮ ಇರಕಲ್‌ಗಡ, ತಿರುಮಲರಾವ್ ದೇಶಪಾಂಡೆ ಸೇರಿ ಇತರರನ್ನು ಸನ್ಮಾನಿಸಲಾಯಿತು.ಪುಸ್ತಕ ಬಿಡುಗಡೆ:

ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ಹೊರತಂದ ಹಿರಿಯ ನಾಗರಿಕರ ದೈಹಿಕ ಆರೋಗ್ಯಕ್ಕಾಗಿ ಮಾರ್ಗದರ್ಶಿ ಎಂಬ ಪುಸ್ತಕವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.ಆರೋಗ್ಯ ತಪಾಸಣೆ: ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶಾಂತಯ್ಯ ಅಂಗಡಿ, ಬಿರನಾಯಕ ಸೇರಿದಂತೆ ಹಲವು ಗಣ್ಯರು, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸುರೇಶ್ ಸ್ವಾಗತಿಸಿದರು. ಮುದಿಯಪ್ಪ ಮೇಟಿ ನಿರೂಪಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ