ಕನ್ನಡಪ್ರಭ ವಾರ್ತೆ ಮೈಸೂರು
ಕೃತಕ ಬುದ್ಧಿಮತ್ತೆ (ಎಐ), ಮೇಷಿನ್ ಲರ್ನಿಂಗ್ ಅಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಸ್ಯಗಳಲ್ಲಿ ಕಂಡು ಬರುವ ರೋಗ ನಿಯಂತ್ರಣ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ತಿಳಿಸಿದರು.ಮೈಸೂರು ವಿವಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗವು ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಉದಯೋನ್ಮುಖ ಸಸ್ಯ ರೋಗಕಾರಕಗಳ ಜಾಗತಿಕ ಅಪಾಯ, ರೋಗನಿರ್ಣಯವನ್ನು ಬಲಪಡಿಸುವುದು ಮತ್ತು ಪರಿಸರ ಸ್ನೇಹಿ ನಿರ್ವಹಣೆ ಕುರಿತು 2 ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಭಾರತೀಯ ಸಸ್ಯ ರೋಗಶಾಸ್ತ್ರಜ್ಞರ ಸಂಘದ ವಾರ್ಷಿಕ ಸಭೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿ ಸಾಕಷ್ಟು ಮಂದಿ ಸಸ್ಯ ರೋಗಶಾಸ್ತ್ರಜ್ಞರು ಇದ್ದರೂ ಬೆಳೆಗಳಲ್ಲಿ ಕಾಣಿಸಿಕೊಳ್ಳುವಂತಹ ರೋಗ ನಿಯಂತ್ರಣ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರಿಂದ ರೈತರಿಗೆ ಬೆಳೆ ನಷ್ಟ ಆಗುತ್ತಿದೆ. ಎಐ, ಮೇಷಿನ್ ಲರ್ನಿಂಗ್, ಡೀಪ್ ಸೀಕ್ ಅಂತಹ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು. ಎಐ ಪರಿಸರ ಸ್ನೇಹಿಯಾಗಿದೆ. ಸಾಮಾಜಿಕ ವಿಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಎಐ ತಂತ್ರಜ್ಞಾನದಿಂದ ಮಹತ್ವದ ಬದಲಾವಣೆಗಳು ಆಗಲಿದೆ ಎಂದು ಅವರು ಹೇಳಿದರು.ಜಾಗತಿಕ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಭಾರತೀಯ ವಿವಿಗಳು ಇಲ್ಲದಿರುವುದು ಬೇಸರ ಸಂಗತಿ. ನಮ್ಮಲ್ಲಿ ಶಿಕ್ಷಣ ವ್ಯವಸ್ಥೆ ಚೆನ್ನಾಗಿದೆ. ಆದರೆ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಜಾಗತಿಕ ಮಾನ್ಯತೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಆದ್ಯತೆ ಆಗಬೇಕಿದೆ ಎಂದು ಅವರು ತಿಳಿಸಿದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಕುಲಪತಿ ಪ್ರೊ.ಎಸ್.ಎಸ್. ಚಹಲ್, ಭಾರತೀಯ ಸಸ್ಯ ರೋಗಶಾಸ್ತ್ರಜ್ಞರ ಸಂಘದ ಅಧ್ಯಕ್ಷ ಡಾ.ಪಿ.ಕೆ. ಚಕ್ರಬರ್ತಿ, ಸಸ್ಯಶಾಸ್ತ್ರಜ್ಞ ಪ್ರೊ.ಎಚ್. ಶೇಖರ್ ಶೆಟ್ಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಡೀನ್ ಪ್ರೊ.ಜಿ.ಆರ್. ಜನಾರ್ಧನ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರಾಜ್ ಕುಮಾರ್ ಎಚ್. ಗರಂಪಲ್ಲಿ, ಡಾ.ಕೆ.ಎನ್. ಅಮೃತೇಶ್ ಇದ್ದರು. ಡಾ.ಜೆ. ಲೋಹಿತ್ ನಿರೂಪಿಸಿದರು.