ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಅಗತ್ಯ: ಪರಮೇಶ್ವರ್‌

KannadaprabhaNewsNetwork |  
Published : Sep 03, 2024, 01:34 AM IST
ಐಎಫ್ ಡಬ್ಲ್ಯೂಜೆ | Kannada Prabha

ಸಾರಾಂಶ

ತಿಪಟೂರಿನ ಎಸ್‌ಎಸ್‌ಎಸ್‌ ಕನ್ವೆನ್ಷನ್ ಹಾಲ್‌ನಲ್ಲಿ ಭಾರತೀಯ ಕಾರ್ಯನಿರತ ಪರ್ತಕರ್ತರ ಒಕ್ಕೂಟದ ವತಿಯಿಂದ ವಿಶ್ವ ತೆಂಗು ದಿನದ ಅಂಗವಾಗಿ ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಅತ್ಯಗತ್ಯ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅಭಿಪ್ರಾಯಪಟ್ಟರು. ತಿಪಟೂರಿನ ಎಸ್‌ಎಸ್‌ಎಸ್‌ ಕನ್ವೆನ್ಷನ್ ಹಾಲ್‌ನಲ್ಲಿ ಭಾರತೀಯ ಕಾರ್ಯನಿರತ ಪರ್ತಕರ್ತರ ಒಕ್ಕೂಟದ ವತಿಯಿಂದ 78ನೇ ರಾಷ್ಟ್ರೀಯ ಮಂಡಳಿ ಸಮಾವೇಶ ಅಂಗವಾಗಿ ಕಾರ್ಯನಿರತ ಪರ್ತಕರ್ತರ 1 ದಿನದ ವಿಚಾರ ಸಂಕಿರಣ ಹಾಗೂ ವಿಶ್ವ ತೆಂಗು ದಿನದ ಅಂಗವಾಗಿ ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಮೇಲ್ವಿಚಾರಣೆ ನಡೆಸಿ, ನಿಯಂತ್ರಣ ಮಾಡಲು, ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸರಿಯಾದ ಕಾನೂನುಗಳು ಇಲ್ಲದ ಕಾರಣ ಮನಃಬಂದಂತಹ ವಿಚಾರಗಳನ್ನು ಹರಿಬಿಡಲಾಗುತ್ತಿದೆ. ಇಂತಹ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಹೇರುವ ಅಗತ್ಯವಿದೆ.

ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯ ನಾಲ್ಕನೇಯ ಅಂಗವಾಗಿ ಮಾಧ್ಯಮ ಕ್ಷೇತ್ರವನ್ನು ಗುರುತಿಸಲಾಗಿದೆ. ಸಂವಿಧಾನದ ಆಶಯಗಳನ್ನುಅನುಷ್ಠಾನಗೊಳಿಸುವುದು, ಜೊತೆಗೆ ಜನರ ಪರ ಆಡಳಿತಕ್ಕೆ ಚುರುಕು ಮುಟ್ಟಿಸುವ, ತಪ್ಪುಗಳಾದರೆ ತಿದ್ದು ಸರಿದಾರಿಗೆ ತರುವ ಕಾರ್ಯವನ್ನು ಮಾಧ್ಯಮ ಕ್ಷೇತ್ರ ಮಾಡಬೇಕು. ಆದರೆ ಸಾಮಾಜಿಕ ಜಾಲತಾಣಗಳ ಪ್ರಮಾಣ ಹೆಚ್ಚಿದಾಗಿನಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಹಲವು ಸವಾಲುಗಳು ಎದುರಾಗಿವೆ ಎಂದರು.

ಸಾಮಾಜಿಕ ಜಾಲತಾಣಗಳಿಂದ ವ್ಯಕ್ತಿಯ ವೈಯಕ್ತಿಕ ವಿಚಾರಗಳಿಗೆ ಧಕ್ಕೆ ತರುವ ರೀತಿಯಲ್ಲಿ ವಿಚಾರಗಳನ್ನು ಹರಿಬಿಡಲಾಗುತ್ತಿದೆ. ಇದರಿಂದಾಗಿ ಹಲವರಿಗೆ ತೊಂದರೆಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ವ್ಯಕ್ತಿಯಿಂದ ಬಿತ್ತರವಾಗುವ ಒಂದು ವಿಚಾರದಿಂದ ದೇಶ, ಸಮಾಜ, ವ್ಯಕ್ತಿಯ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತಿವೆ ಎಂದರು.

ಕರ್ನಾಟಕದಲ್ಲಿ ಬಹಳ ಉತ್ತಮ ಕಾರ್ಯಗಳನ್ನು ಮಾಧ್ಯಮದವರು ಮಾಡುತ್ತಿದ್ದಾರೆ. ಇಂದಿನ ಮಾಧ್ಯಮ ಕ್ಷೇತ್ರ ಕೆಲವು ಸತ್ಯಕ್ಕೆ ದೂರವಾದ ವಿಚಾರಗಳನ್ನು ಪ್ರಕಟಣೆ ಮಾಡುತ್ತಿದ್ದು, ರಾಜಕೀಯವಾಗಿ ತಮ್ಮ ತೀರ್ಪು ನೀಡುವ ರೀತಿಯಲ್ಲಿ ಕೂತು ಚರ್ಚಿಸುತ್ತಾರೆ. ಟಿವಿ ಮಾಧ್ಯಮಗಳಲ್ಲಿ ವಿಶೇಷ ಸಂವಾದವನ್ನು ಏರ್ಪಡಿಸಿ ವೈಯಕ್ತಿಕವಾಗಿ ತೀರ್ಪು ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಮಾಧ್ಯಮಗಳು ಸತ್ಯ ಏನು ಎಂಬುದನ್ನು ಜನರಿಗೆ ತಿಳಿಸಬೇಕೇ ಹೊರತು ಜನರ ಮುಂದೆ ತೀರ್ಪು ನೀಡಲು ಮುಂದಾಗಬಾರದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ