ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಮಾಡಿ

KannadaprabhaNewsNetwork |  
Published : Jan 01, 2026, 02:15 AM IST
್ಿಿ್‌ಿ | Kannada Prabha

ಸಾರಾಂಶ

ಜಾಗೃತಿ ಉಸ್ತುವಾರಿ ಸಮಿತಿ ಸಭೆಗಳನ್ನು ನಡೆಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಉಪವಿಭಾಗ ಮತ್ತು ತಾಲೂಕು ಮಟ್ಟದಲ್ಲಿ ನಿಯಮಿತವಾಗಿ ಜಾಗೃತಿ ಉಸ್ತುವಾರಿ ಸಮಿತಿ ಸಭೆಗಳನ್ನು ನಡೆಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು, ಜಿಲ್ಲೆಯ ಮಧುಗಿರಿ ಹಾಗೂ ತಿಪಟೂರು ಉಪವಿಭಾಗ ಮಟ್ಟದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕುಂದುಕೊರತೆಗಳ ಕುರಿತು ಜಾಗೃತಿ ಉಸ್ತುವಾರಿ ಸಮಿತಿ ಸಭೆಗಳನ್ನು ಕಡ್ಡಾಯವಾಗಿ ನಡೆಸಿ ಸಭೆಗಳಲ್ಲಿ ಸಲ್ಲಿಕೆಯಾಗುವ ದೂರುಗಳನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.ಕುಂದು ಕೊರತೆಗಳ ಸಭೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕೆಂದು ತಿಳಿಸಿದರಲ್ಲದೆ, ಪ್ರತಿ ತಾಲೂಕು ಮಟ್ಟದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಿ ಶಿಬಿರ ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಸರ್ಕಾರದಿಂದ ಸಿಗಬೇಕಾದ ಪರಿಹಾರ ಧನವನ್ನು ನಿಗದಿತ ಕಾಲಮಿತಿಯೊಳಗೆ ಮಂಜೂರು ಮಾಡಬೇಕು. ಜಿಲ್ಲೆಯಲ್ಲಿ ಎಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಮತ್ತು ಎಷ್ಟು ಪ್ರಕರಣಗಳು ವಿಲೇವಾರಿಯಾಗಿವೆ ಎಂಬ ಪೂರ್ಣ ಮಾಹಿತಿಯನ್ನು ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.ಜಿಲ್ಲೆಯ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಭವನಗಳ ನಿರ್ಮಾಣಕ್ಕಾಗಿ ಜಾಗವನ್ನು ಗುರುತಿಸಿ ಮಾಹಿತಿ ನೀಡುವಂತೆ ಎಲ್ಲ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದರು.ತುಮಕೂರು ವಿಶ್ವವಿದ್ಯಾಲಯದಲ್ಲಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಂತೆ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ದೂರಿನ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಅಲ್ಲದೆ, ಪಾವಗಡದ ಸೋಲಾರ್ ಕಂಪನಿಯಲ್ಲಿ ಹೊರಗುತ್ತಿಗೆ ನೌಕರರಿಗೆ ಸರ್ಕಾರ ನಿಗದಿಪಡಿಸಿದ ವೇತನ ನೀಡದ ಕಂಪನಿಗಳ ವಿರುದ್ಧವೂ ತನಿಖೆ ನಡೆಸಲು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ದೌರ್ಜನ್ಯ ಪ್ರಕರಣ ದಾಖಲಾದ ತಕ್ಷಣ ಎಫ್‌ಐಆರ್ ದಾಖಲಿಸಿ, ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲಾಗುತ್ತಿದೆ. ಪ್ರತಿ ತಿಂಗಳ ೨ನೇ ಭಾನುವಾರ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ದಲಿತ ಮುಖಂಡರ ಸಭೆ ನಡೆಸಿ ಕುಂದುಕೊರತೆ ಆಲಿಸಲಾಗುತ್ತಿದೆ ಎಂದರು.ಗುಬ್ಬಿ, ತುರುವೇಕೆರೆ ಹಾಗೂ ಕುಣಿಗಲ್ ತಾಲ್ಲೂಕುಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು ಈ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಜಿಲ್ಲೆಯ ಎಲ್ಲಾ ೩೩೦ ಗ್ರಾಮ ಪಂಚಾಯಿತಿಗಳಲ್ಲಿ ನಡೆಯುವ ಗ್ರಾಮ ಸಭೆಗಳ ಫೋಟೋ ಮತ್ತು ವೀಡಿಯೋ ಚಿತ್ರೀಕರಣವನ್ನು ಕಡ್ಡಾಯವಾಗಿ ಗ್ರಾಮ ಸ್ವರಾಜ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಪಿಡಿಒ ಮತ್ತು ಇಒಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ೨೦೨೫ ಜನವರಿಯಿಂದ ಡಿಸೆಂಬರ್‌ವರೆಗೆ ದೌರ್ಜನ್ಯ ಪ್ರಕರಣದಲ್ಲಿ ನೊಂದ ಪರಿಶಿಷ್ಟ ಜಾತಿಯ 91 ಪ್ರಕರಣಗಳಲ್ಲಿ 169 ಸಂತ್ರಸ್ತರಿಗೆ 96,91,935 ರೂ. ಹಾಗೂ ಪರಿಶಿಷ್ಟ ವರ್ಗದ 36 ಪ್ರಕರಣಗಳಲ್ಲಿ 37 ಸಂತ್ರಸ್ತರಿಗೆ 22,75,000 ರೂ.ಗಳ ಪರಿಹಾರವನ್ನು ಮಂಜೂರು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ಮಧುಗಿರಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಿಪಟೂರು ಉಪ ವಿಭಾಗಾಧಿಕಾರಿ ಅಪೂರ್ವ ಬಿದರಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಕ್ರಾಂತಿಯಂದು ಪಂಚಮಸಾಲಿ ಪೀಠದಲ್ಲಿ ಹರ ಜಾತ್ರೆ
12ರಿಂದ ಕೆಂಗಲ್ ಆಂಜನೇಯಸ್ವಾಮಿ ಬ್ರ‍್ರಹ್ಮರಥೋತ್ಸವ