ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಪಕ್ಷದ ಪ್ರಚಾರ ಸಮಿತಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಹೆಜ್ಜೆಗೂ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಎಸ್ಸಿಗಳನ್ನು ಧಮನ ಮಾಡುವ ಕೆಲಸ ಮಾಡುತ್ತಿದೆ. ಇದರ ಕರಾಳ ಮುಖವನ್ನು ಬಯಲು ಮಾಡುತ್ತೇವೆ. ಎಸ್ಸಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಾಕತ್ತಿದ್ದರೆ ಸರಿಪಡಿಸಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ 5 ಎಸ್ಸಿ ಮೀಸಲು ಕ್ಷೇತ್ರಗಳಿವೆ. ಅವುಗಳಲ್ಲಿ 2 ಎಡಗೈ, 1 ಬೋವಿ, 1 ಲಂಬಾಣಿ ಹಾಗೂ 1 ಛಲವಾದಿ ಸಮುದಾಯಕ್ಕೆ ಎಂದು ಹಂಚಿಕೆ ಮಾಡಲಾಗಿದೆ. ಕೋಲಾರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿರುವುದರಿಂದ ಅಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಭೋವಿ ಸಮುದಾಯದವರಿಗೆ ಟಿಕೆಟ್ ನೀಡಲಾಗಿದೆ. ಎಂ.ಚಂದ್ರಪ್ಪರವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಬಗ್ಗೆ ವಿಶೇಷ ಗೌರವವಿದೆ. ಆದರೆ ಬಿಜೆಪಿಗೂ ಹಾಗೂ ಅವರಿಗೆ ಯಾವುದೇ ಸಂಬಂಧ ಇಲ್ಲದ ಕೆಲವು ನಾಯಕರುಗಳು ಚಂದ್ರಪ್ಪರವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ.ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಗೋವಿಂದ ಕಾರಜೋಳ ಅವರು ಮೊದಲ ಬಾರಿಗೆ ನಗರಕ್ಕೆ ಆಗಮಿಸುವ ಸಂದರ್ಭದಲ್ಲಿ ಮಸಿ ಎರೆಚುವ, ಮೊಟ್ಟೆ ಹೊಡೆಯುವ, ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಪ್ರಯತ್ನ ಮಾಡಲಾಗಿದೆ. ಐದು ಬಾರಿ ಶಾಸಕರಾಗಿ, ಉಪ ಮುಖ್ಯಮಂತ್ರಿಯಾಗಿದಂತಹ ಕಾರಜೋಳ ರವರಿಗೆ ಮಸಿ ಬಳಿಯಲು ಮೊಟ್ಟೆ ಎಸೆಯಲು ಸಿದ್ಧತೆ ಮಾಡಿಕೊಂಡಿರುವುದು ಎಷ್ಟರಮಟ್ಟಿಗೆ ಸರಿ. ಇಂತಹ ನಡೆಯನ್ನು ಬಿಜೆಪಿ ಯಶಸ್ವಿಯಾಗಿ ಎದುರಿಸುತ್ತದೆ ಎಂದರು.
ಚಿತ್ರದುರ್ಗ ಲೋಕಸಭೆ ಎಸ್ಸಿ ಮೀಸಲು ಕ್ಷೇತ್ರವಾದ ತಕ್ಷಣ ಭೋವಿ ಸಮುದಾಯದ ಜನಾರ್ಧನಸ್ವಾಮಿ ಅವರಿಗೆ ಟಿಕೇಟ್ ಕೊಡಲಾಗಿತ್ತು. ಹೊಳಲ್ಕೆರೆ ಮೀಸಲು ಕ್ಷೇತ್ರವಾದ ವರ್ಷದಿಂದ ಈವರೆಗೆ ಬಿಜೆಪಿ ಭೋವಿ ಸಮುದಾಯದ ಚಂದ್ರಪ್ಪ ಅವರಿಗೆ ಟಿಕೆಟ್ ನೀಡುತ್ತಿದೆ. ಹೊಸದುರ್ಗ ಸಾಮಾನ್ಯ ಕ್ಷೇತ್ರದಲ್ಲಿ ಗೂಳಿಹಟ್ಟಿ ಶೇಖರ್ ಅವರಿಗೆ ಟಿಕೆಟ್ ಕೊಟ್ಟಿದೆ. ಗೂಳಿಹಟ್ಟಿಗೆ ಟಿಕೇಟ್ ಕೈ ತಪ್ಪಿದಾಗ ಚಂದ್ರಪ್ಪ ಯಾಕೆ ದನಿ ಎತ್ತಲಿಲ್ಲ ಎಂದು ನವೀನ್ ಪ್ರಶ್ನೆ ಮಾಡಿದರು.
ಜಿಲ್ಲಾಧ್ಯಕ್ಷ ಎ.ಮುರಳಿ, ಮುಖಂಡರಾದ ಜಿ.ಟಿ.ಸುರೇಶ್, ಸಂಪತ್, ಎಸ್.ಆರ್.ಗಿರೀಶ್, ಛಲವಾದಿ ತಿಪ್ಪೇಸ್ವಾಮಿ, ನವೀನ್ ಸುದ್ದಿಗೋಷ್ಠಿಯಲ್ಲಿದ್ದರು.