ಸರ್ಕಾರಿ ಗೋಮಾಳ ನಿವೇಶನವನ್ನಾಗಿ ಮಾಡಿ ವಿತರಿಸಿ

KannadaprabhaNewsNetwork | Published : Mar 9, 2025 1:46 AM

ಸಾರಾಂಶ

ಹೋಬಳಿಯ ಸಿ.ಎನ್.ಹೊಸೂರು ಗ್ರಾಮದಲ್ಲಿನ ೭ ಎಕರೆ ಸರ್ಕಾರಿ ಗೋಮಾಳದೊಳಗೆ ಯಾರೂ ಅತಿಕ್ರಮ ಪ್ರವೇಶ ಮಾಡಬಾರದು ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಬೋರ್ಡ್ ಅಳವಡಿಕೆ ಮಾಡಿದ್ದರೂ ರಾತ್ರೋ ರಾತ್ರಿ ಕೆಲವರು ಜೆಸಿಬಿ ತಂದು ಮಣ್ಣು ತುಂಬಿಸುವುದರ ಜೊತೆಗೆ ಈ ಭೂಮಿಯನ್ನು ವಿರೂಪಗೊಳಿಸುವಂತಹ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಈ ಜಮೀನನ್ನು ಗ್ರಾಮಸ್ಥರಿಗೆ ನಿವೇಶನಗಳನ್ನಾಗಿ ಮಾಡಿಕೊಟ್ಟು ವಿತರಿಸಬೇಕು ಎಂದು ಕರ್ನಾಟಕ ದಲಿತ ಜನ ಸೇನೆ ರಾಜ್ಯಾಧ್ಯಕ್ಷ ಟಿ.ಭರತ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ ಹೋಬಳಿಯ ಸಿ.ಎನ್.ಹೊಸೂರು ಗ್ರಾಮದಲ್ಲಿನ ೭ ಎಕರೆ ಸರ್ಕಾರಿ ಗೋಮಾಳದೊಳಗೆ ಯಾರೂ ಅತಿಕ್ರಮ ಪ್ರವೇಶ ಮಾಡಬಾರದು ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಬೋರ್ಡ್ ಅಳವಡಿಕೆ ಮಾಡಿದ್ದರೂ ರಾತ್ರೋ ರಾತ್ರಿ ಕೆಲವರು ಜೆಸಿಬಿ ತಂದು ಮಣ್ಣು ತುಂಬಿಸುವುದರ ಜೊತೆಗೆ ಈ ಭೂಮಿಯನ್ನು ವಿರೂಪಗೊಳಿಸುವಂತಹ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಈ ಜಮೀನನ್ನು ಗ್ರಾಮಸ್ಥರಿಗೆ ನಿವೇಶನಗಳನ್ನಾಗಿ ಮಾಡಿಕೊಟ್ಟು ವಿತರಿಸಬೇಕು ಎಂದು ಕರ್ನಾಟಕ ದಲಿತ ಜನ ಸೇನೆ ರಾಜ್ಯಾಧ್ಯಕ್ಷ ಟಿ.ಭರತ್ ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಗ್ರಾಮದಲ್ಲಿನ ಎಸ್ಸಿ ಜನಾಂಗದವರಿಗಾಗಿ ಈ ಜಮೀನು ಮೀಸಲಿಡಬೇಕು. ಎರಡು ವರ್ಷಗಳ ಹಿಂದೆ ರಿಯಲ್ ಎಸ್ಟೇಟ್ ಏಜೆನ್ಸಿಗಳು ಈ ಭೂಮಿಯನ್ನು ಕಬಳಿಸುವಂತಹ ಪ್ರಯತ್ನವನ್ನೂ ಮಾಡಿದ್ದರು. ಆಗ ನಾವೆಲ್ಲರೂ ಹೋರಾಟ ಮಾಡಿದ್ದರ ಪರಿಣಾಮವಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಬೋರ್ಡ್ ಅಳವಡಿಕೆ ಮಾಡಿ ಈ ಭೂಮಿ ಒತ್ತುವರಿಯಾಗದಂತೆ ತಡೆದಿದ್ದರು. ಇತ್ತಿಚೆಗೆ ಜೆಸಿಬಿ ತಂದು ಮಣ್ಣು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ತಾಪಂಗೂ ದೂರು ನೀಡುತ್ತೇವೆ. ೨೦ ದಿನಗಳು ಗಡವು ಕೊಡುತ್ತೇವೆ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು, ಈ ಜಮೀನನ್ನು ಸಿ.ಎನ್. ಹೊಸೂರು ಗ್ರಾಮಸ್ಥರಿಗೆ ಉಪಯೋಗವಾಗುವಂತೆ ನಿವೇಶನ ಮಾಡಿ ಹಂಚಿಕೆ ಮಾಡಬೇಕು. ಈ ವಿಚಾರದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದನ್ನು ಶೀಘ್ರವಾಗಿ ಇತ್ಯರ್ಥಪಡಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದರು.ಮುಖಂಡ ಪುನೀತ್ ಕುಮಾರ್ ಮಾತನಾಡಿ, ನಮ್ಮ ಗ್ರಾಮದಲ್ಲಿ ೫೦ಕ್ಕೂ ಹೆಚ್ಚು ಪರಿಶಿಷ್ಟರ ಮನೆಗಳಿವೆ. ಒಂದೊಂದು ಮನೆಯಲ್ಲಿ ಮೂರು ಕುಟುಂಬದವರು ವಾಸ ಮಾಡಿಕೊಂಡಿದ್ದಾರೆ. ಆದ್ದರಿಂದ ನಮ್ಮ ಊರಿನಲ್ಲಿ ಇದೊಂದು ಗೋಮಾಳದ ಜಾಗ ಬಿಟ್ಟರೆ ಬೇರೆ ಎಲ್ಲೂ ಇಲ್ಲ. ಆದ್ದರಿಂದ ನಿವೇಶನಗಳು, ಸಮುದಾಯ ಭವನ ಮಂಜೂರು ಮಾಡಬೇಕು ಎಂದರು.ಮುಖಂಡರಾದ ಮುನಿಕೃಷ್ಣಪ್ಪ, ವೆಂಕಟೇಶಪ್ಪ, ರವಿ, ಮೋಹನ್, ಸಂತೋಷ್, ವಿಜಯ್, ವೇಣು, ಪ್ರಕಾಶ್, ಸುಚೀಂದ್ರ, ಮುನಿಯಪ್ಪ, ನಾರಾಯಣಸ್ವಾಮಿ, ವೆಂಕಟರಾಯಪ್ಪ, ರಾಮಾಂಜಿ, ಕೃಷ್ಣಪ್ಪ, ನರಸಿಂಹಮೂರ್ತಿ,ಹಾಜರಿದ್ದರು.

Share this article