ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಹೇಳಿಕೆ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯಿಂದ ಆಗುವ ತೊಂದರೆಯ ಕುರಿತು ಸಂಸದರ ನೇತೃತ್ವದಲ್ಲಿ ಕೇಂದ್ರದ ಬಳಿ ನಿಯೋಗದೊಂದಿಗೆ ಹೋಗಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಅಗತ್ಯ ಬಿದ್ದಲ್ಲಿ ಪ್ರಧಾನ ಮಂತ್ರಿಗಳನ್ನೂ ಭೇಟಿ ಮಾಡಿ ಯೋಜನೆ ಕೈ ಬಿಡಲು ವಿನಂತಿಸಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯೋಜನೆಯ ವಿರುದ್ಧದ ಹೋರಾಟದಲ್ಲಿ ಸಂಸದರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆದರೂ ಶಿರಸಿಯ ಸಮಾವೇಶದಲ್ಲಿ ಅನಗತ್ಯವಾಗಿ ಅವರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರು ಟೀಕಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಕಾಗೇರಿ ವಿಧಾನಸಭಾಧ್ಯಕ್ಷರಾಗಿದ್ದರು ಎಂದು ನೆನಪಿಸುವ ಸಚಿವ ವೈದ್ಯರು, ಆಗ ಜಿಲ್ಲೆಯ ಉಸ್ತುವಾರಿ ಸಚಿವರು ಯಾರಿದ್ದರು ಎಂಬುದನ್ನೂ ಯೋಚಿಸಬೇಕು. ಆಗ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಹೆಬ್ಬಾರ ಅವರು, ಆಗಲೇ ಧ್ವನಿ ಎತ್ತಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಅವರು ಪಕ್ಷ ಬದಲಾಯಿಸಿದ ಮಾತ್ರಕ್ಕೆ ನೈತಿಕ ಹೊಣೆ ಬದಲಾಗಲು ಸಾಧ್ಯವಿಲ್ಲ ಎಂದರು.ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ನಿಲ್ಲಿಸುವ ಕಾಂಗ್ರೆಸ್ ಸರ್ಕಾರ, ಜನ ವಿರೋಧಿ ಯೋಜನೆಗಳನ್ನು ಮಾತ್ರ ಕೈಬಿಡುತ್ತಿಲ್ಲ. ನದಿ ಜೋಡಣೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾದರೆ ಕೇಂದ್ರದಿಂದ ರಾಜ್ಯಕ್ಕೆ ₹೬೫ ಸಾವಿರ ಕೋಟಿ ಅನುದಾನ ಬರಲಿದೆ. ಅದರ ಆಸೆಯಿಂದ ಕಾಂಗ್ರೆಸ್ ಸರ್ಕಾರ ಯೋಜನೆ ಜಾರಿಗೊಳಿಸಲು ಮುಂದಾಗುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿದರು. ಈ ವೇಳೆ ಪ್ರಮುಖರಾದ ಉಮೇಶ ಭಾಗ್ವತ, ರಾಮು ನಾಯ್ಕ, ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ರಾಘವೇಂದ್ರ ಭಟ್ಟ, ಕೆ.ಟಿ.ಹೆಗಡೆ ಇತರರಿದ್ದರು.