ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜ.12ರಿಂದ ಮೂರು ದಿನಗಳವರೆಗೆ ಕರ್ನಾಟಕ- ಮುಂಬೈ ನಡುವೆ ನಡೆಯುವ 19 ವರ್ಷದೊಳಗಿನವರ ಬಿಸಿಸಿಐ ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಶಿವಮೊಗ್ಗದ ಕೆಎಸ್‌ಸಿಎ ನವುಲೆ ಕ್ರೀಡಾಂಗಣ ಸಾಕ್ಷಿಯಾಗಲಿದೆ.
ಜ.12ರಂದು ಬೆಳಗ್ಗೆ 9.30ಕ್ಕೆ ಪಂದ್ಯ ಆರಂಭವಾಗಲಿದೆ. ಪ್ರತಿದಿನ ಸರಾಸರಿ 90 ಓವರ್ ಪಂದ್ಯ ನಡೆಯಲಿದೆ. ಕರ್ನಾಟಕ ಮತ್ತು ಮುಂಬೈ ವಿರುದ್ಧ ನಡುವೆ ನಡಯುವ ಫೈನಲ್ ಪಂದ್ಯದಲ್ಲಿ ಗೆದ್ದು ಬೀಗುವವರು ಯಾರು ಎಂಬುದು ಕುತೂಹಲ ಮೂಡಿಸಿದೆ ಎಂದು ಶಿವಮೊಗ್ಗ ವಲಯದ ಸಂಚಾಲಕ ಎಚ್.ಎಸ್. ಸಂದಾನಂದ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕರ್ನಾಟಕ ತಂಡಕ್ಕೆ ಧೀರರಾಜ್ ಜೆ. ಗೌಡ ನಾಯಕನಾಗಿದ್ದು, ಹಾರ್ದಿಕ್‌ರಾಜ್ ಉಪನಾಯಕ ಆಗಿದ್ದಾರೆ. ಕೇಶವ್ ಬಜಾಜ್ ವಿಕೆಟ್ ಕೀಪರ್. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸುಮಿತ್ ದ್ರಾವಿಡ್ ಫೈನಲ್ ಪಂದ್ಯದ ಪ್ರಮುಖ ಆಕರ್ಷಣೆ ಆಗಿದ್ದಾರೆ. ಒಟ್ಟು 15 ಜನರ ತಂಡ ಈಗಾಗಲೇ ಶಿವಮೊಗ್ಗಕ್ಕೆ ಬಂದಿದೆ ಎಂದು ತಿಳಿಸಿದರು.
ಮುಂಬೈ ತಂಡದ ನಾಯಕನಾಗಿ ಮನಾನ್ ಭಟ್ ಆಡಲಿದ್ದಾರೆ. ಆಯುಷ್, ತನಿಷ್, ಪ್ರತೀಕ್ ಸೇರಿದಂತೆ 16 ಜನರ ತಂಡ ಇನ್ನೇನು ಶಿವಮೊಗ್ಗಕ್ಕೆ ಬರಲಿದೆ. ಈಗಾಗಲೇ ಆಟಗಾರರಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ. ಕರ್ನಾಟಕ ತಂಡದ ಕೋಚ್ ಆಗಿ ಕೆ.ಬಿ.ಪವನ್ ಹಾಗೂ ಬೌಲಿಂಗ್ ಕೋಚ್ ಆಗಿ ಶಿವಮೊಗ್ಗದವರೇ ಆದ ಎಸ್.ಎಲ್. ಅಕ್ಷಯ್ ಇದ್ದಾರೆ. ಮುಂಬೈ ತಂಡದ ಕೋಚ್ ಆಗಿ ದಿನೇಶ್ ಲಾಡ್ ಇರುತ್ತಾರೆ ಎಂದರು.ಕೂಚ್ ಬೆಹಾರ್ ಟ್ರೋಫಿ ಪಂದ್ಯಾವಳಿಗಳಲ್ಲಿ ಮಿಂಚಿದ ಆಟಗಾರರು ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ತಂಡದಲ್ಲಿ ಆಡಿದ್ದಾರೆ. ಭವಿಷ್ಯದಲ್ಲಿ ದೊಡ್ಡ ಆಟಗಾರನಾಗಬೇಕು ಎನ್ನುವ ಯುವಕರ ಪಾಲಿಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿದೆ. ಬಿಸಿಸಿಐ ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದು, ಉದಯೋನ್ಮುಖ ಆಟಗಾರರನ್ನು ಹೊರತರುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಜೇಂದ್ರ ಕುಮಾರ್, ಕೆ.ಎಸ್. ಸುಬ್ರಹ್ಮಣ್ಯ, ಐಡಿಯಲ್ ಗೋಪಿ ಇದ್ದರು.- - -
ಬಾಕ್ಸ್‌ಕೂಚ್ ಬೆಹಾರ್ ಟ್ರೋಫಿ ವಿಶೇಷವೇನು? ಕೂಚ್ ಬೆಹಾರ್ ಟ್ರೋಫಿ ಅತ್ಯಂತ ಐತಿಹಾಸಿಕ ಪ್ರಾಮುಖ್ಯತೆ ಪಡೆದಿದೆ. ಬ್ರಿಟಿಷರ ಕಾಲದಲ್ಲಿ ಕೂಚ್ ಬೆಹಾರ್ ಪಟ್ಟಣವು ರಾಜಪ್ರಭುತ್ವದ ಕೇಂದ್ರವಾಗಿತ್ತು. ಸ್ವಾತಂತ್ರ್ಯದ ನಂತರ ಇದು ಪಶ್ಚಿಮ ಬಂಗಾಳದ ಜಿಲ್ಲೆಯಾಗಿ ರೂಪಾಂತರಗೊಂಡಿದೆ. ತನ್ನ ಪಾರಂಪರಿಕ ಸ್ಥಾನ ಮಾನ ಉಳಿಸಿಕೊಂಡಿದೆ. 19 ವರ್ಷದೊಳಗಿನವರ ಜೂನಿಯರ್ ತಂಡಗಳನ್ನು ಒಳಗೊಂಡ ಈ ಕ್ರಿಕೆಟ್ ಪಂದ್ಯಾವಳಿ 1945ರಿಂದ ಆಯೋಜಿಸಲಾಗುತ್ತಿದೆ ಎಂದು ಶಿವಮೊಗ್ಗ ವಲಯದ ಸಂಚಾಲಕ ಎಚ್.ಎಸ್.ಸಂದಾನಂದ ಹೇಳಿದರು.ಯುವಕರ ಪಾಲಿಗೆ ಮತ್ತು ತಂಡದಲ್ಲಿ ಆಟವಾಡುತ್ತಿರುವವರ ಪಾಲಿಗೆ ಈ ಮಾದರಿ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಬಿಸಿಸಿಐ ಇದರ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದೆ. ಉದಯೋನ್ಮುಖ ಆಟಗಾರರನ್ನು ಹೊರತರುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.- - --10ಎಸ್‌ಎಂಜಿಕೆಪಿ07: ಕೆಎಸ್‌ಸಿಎ ಕ್ರೀಡಾಂಗಣ ಸಭಾಂಗಣದಲ್ಲಿ ಬುಧವಾರ ಶಿವಮೊಗ್ಗ ವಲಯದ ಸಂಚಾಲಕ ಎಚ್.ಎಸ್.ಸಂದಾನಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.