ಕೊಟ್ಟೂರೇಶ್ವರ ರಥೋತ್ಸವದ ಯಶಸ್ಸಿಗೆ ಸಹಕರಿಸಿ

KannadaprabhaNewsNetwork |  
Published : Jan 30, 2025, 12:30 AM IST
ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ ನೇಮಿರಾಜನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ಆರಾಧ್ಯ ದೈವ ಗುರು ಕೊಟ್ಟೂರೇಶ್ವರ ರಥೋತ್ಸವ ಯಶಸ್ವಿಯಾಗಲು ಅಧಿಕಾರಿಗಳೊಂದಿಗೆ ಎಲ್ಲ ಭಕ್ತರು ಸಹಕರಿಸಬೇಕು.

ಕೊಟ್ಟೂರು: ಪಟ್ಟಣದ ಆರಾಧ್ಯ ದೈವ ಗುರು ಕೊಟ್ಟೂರೇಶ್ವರ ರಥೋತ್ಸವ ಯಶಸ್ವಿಯಾಗಲು ಅಧಿಕಾರಿಗಳೊಂದಿಗೆ ಎಲ್ಲ ಭಕ್ತರು ಸಹಕರಿಸಬೇಕು. ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ಮೂಲ ಸೌಕರ್ಯ, ಸೌಲಭ್ಯಗಳನ್ನು ಎಲ್ಲ ಇಲಾಖೆ ಅಧಿಕಾರಿಗಳು ಕಲ್ಪಿಸಿಕೊಡಬೇಕು ಎಂದು ಶಾಸಕ ಕೆ.ನೇಮಿರಾಜನಾಯ್ಕ ಸೂಚಿಸಿದರು.ಪಟ್ಟಣದ ಗುರು ಕೊಟ್ಟೂರೇಶ್ವರ ದೇವಸ್ಥಾನ ಮುಂಭಾಗದಲ್ಲಿ ರಥೋತ್ಸವದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡಿದರು.

ಫೆ.೨೨ರಂದು ಸ್ವಾಮಿಯ ರಥೊತ್ಸವ ಜರುಗುವ ಹಿನ್ನೆಲೆಯಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಎಲ್ಲ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಜಾತ್ರೆ ಸಂದರ್ಭದಲ್ಲಿ ಕುಡಿವ ನೀರು, ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗದಂತೆ ಅಧಿಕಾರಿಗಳು ಮುಂಜಾಗೃತ ಕ್ರಮಗಳನ್ನು ವಹಿಸಬೇಕು. ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಆಗಮಿಸುವ ಹಿನ್ನಲೆಯಲ್ಲಿ ಅವರ ಆರೋಗ್ಯ ಸಂರಕ್ಷಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಸ್ಥಳೀಯ ಆಡಳಿತ ಪಟ್ಟಣದೆಲ್ಲೆಡೆ ಸ್ವಚ್ಛತೆ ಕ್ರಮ ಜರುಗಿಸಬೇಕು. ಸ್ವಾಮಿ ದೇವಸ್ಥಾನ ಹಾಗೂ ತೇರು ಬಯಲು ಪ್ರದೇಶ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಮುಂಜೂರು ಮಾಡಲಾಗುವುದು. ಜಿಲ್ಲಾಧಿಕಾರಿ ಜಿಲ್ಲೆಯ ಪ್ರತಿ ಜಾತ್ರೆಗಳ ಸಂದರ್ಭದಲ್ಲಿ ಪೂರ್ವಭಾವಿ ಸಭೆ ನಡೆಸಿ ಯಶಸ್ವಿಯಾಗುವಂತೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ರಥೋತ್ಸವಕ್ಕೆ ಶುಭ ಕೋರಿ ನನ್ನ ಭಾವಚಿತ್ರ ಸಹಿತ ಯಾರೇ ಆಗಲಿ ಫ್ಲೆಕ್ಸ್ ಬ್ಯಾನರ್ ಹಾಕಬಾರದು. ನನ್ನ ಚಿತ್ರವಿರುವ ಫ್ಲೆಕ್ಸ್ ಹಾಕಿದರೆ ಅಧಿಕಾರಿಗಳು ಕಿತ್ತು ಹಾಕುವಂತೆ ಹೇಳಿದರು.

ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಭಕ್ತರಿಗೆ ವಾಹನ ಸೌಕರ್ಯ ಸೇರಿ ಇತರೆ ಯಾವುದೇ ಸೌಕರ್ಯಗಳಿಗೆ ತೊಂದರೆಯಾಗದಂತೆ ಇಲಾಖೆ ಅಧಿಕಾರಿಗಳು ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಖಡಕ್ ಸೂಚನೆ ನೀಡಿದರು. ಪಟ್ಟಣಕ್ಕೆ ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ಹಾಗೂ ಪಟ್ಟಣದೊಳಗೆ ಅನಾವಶ್ಯಕವಾಗಿ ಬ್ಯಾರಿಕೇಡ್ ಹಾಕಬಾರದು. ಪಟ್ಟಣದ ಪ್ರಮುಖ ಭಾಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ರಥೋತ್ಸವ ಜರುಗವ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಬೇಕು. ಭಕ್ತರಿಗೆ ಶ್ರೀ ಸ್ವಾಮಿ ದರ್ಶನಕ್ಕೆ ಅವಸರ ಮಾಡದೇ ಸಮರ್ಪಕ ವ್ಯವಸ್ಥೆ ಮಾಡಬೇಕು. ಸ್ವಾಮಿಯ ಗಚ್ಚಿನಮಠವನ್ನು ಧಾರ್ಮಿಕ ಇಲಾಖೆ ವ್ಯಾಪ್ತಿಗೊಳಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ರಥೋತ್ಸವ ನಿಮಿತ್ತವಾಗಿ ರಾಜಕೀಯದವರು, ಸಂಘ ಸಂಸ್ಥೆಯವರು ಶುಭ ಕೋರುವ ಫ್ಲೆಕ್ಸ್ ಬ್ಯಾನರ್‌ಗಳನ್ನು ಹಾಕಬಾರದು. ಹಾಕಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಈ ಕುರಿತು ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.

ಜಿಲ್ಲಾ ಎ.ಎಸ್.ಪಿ. ಸಲೀಂಪಾಷ ಮಾತನಾಡಿ, ಜಾತ್ರೆ ದಿನಗಳಲ್ಲಿ ಅನುಮಾನಸ್ಪದ ವ್ಯಕ್ತಿಗಳು ಕಂಡ ಬಂದಲ್ಲಿ ಠಾಣೆಗೆ ಮಾಹಿತಿ ನೀಡಬೇಕು. ಅಪರಾಧ ತಡೆಗೆ ಎಲ್ಲ ಕ್ರಮ ವಹಿಸಲಾಗುವುದು ಎಂದರು.

ಕ್ರಿಯಾಮೂರ್ತಿಗಳಾದ ಶಿವಪ್ರಕಾಶ ಕೊಟ್ಟೂರು ದೇವರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಸಿಇಒ ಮೊಹಮ್ಮದ್ ಅಲಿ ಅಕ್ರಂ ಶಾ, ಪ.ಪಂ. ಅಧ್ಯಕ್ಷೆ ಬದ್ದಿ ರೇಖಾ ರಮೇಶ, ತಹಸೀಲ್ದಾರ ಜಿ.ಕೆ.ಅಮರೇಶ, ಪ.ಪಂ. ಮುಖ್ಯಾಧಿಕಾರಿ ಎ.ನಲಸರುಲ್ಲಾ, ಮುಖಂಡರಾದ ಎಂಎಂಜೆ ಹರ್ಷವರ್ಧನ, ಪಿಎಚ್ ದೊಡ್ಡರಾಮಣ್ಣ, ಐಎಂ ದಾರುಕೇಶ, ಬದ್ದಿ ಮರಿಸ್ವಾಮಿ, ಟಿ.ಹನುಮಂತ ಇತರರು ಇದ್ದರು. ದೇವಸ್ಥಾನ ಇಒ ಹನುಮಂತಪ್ಪ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಪಂಗಳು ಸ್ಥಳೀಯ ಸರ್ಕಾರವಿದ್ದಂತೆ: ಎಚ್.ಟಿ.ಮಂಜು
ಚೈತನ್ಯ ಕುಮಾರ್‌ಗೆ ಬ್ರಾಹ್ಮಣ ಸಂಘದಿಂದ ಅಭಿನಂದನೆ