ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಹಕರಿಸಿ: ಕೆ. ರಾಘವೇಂದ್ರ ರಾವ್

KannadaprabhaNewsNetwork |  
Published : Jun 07, 2026, 02:15 AM IST
ಪೋಟೊ-೬ ಎಸ್.ಎಚ್.ಟಿ. ೧ಕೆ- ತಹಸೀಲ್ದಾರ್ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕೆ. ರಾಘವೇಂದ್ರ ರಾವ್ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. | Kannada Prabha

ಸಾರಾಂಶ

ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ೨೫೨ ಮತಗಟ್ಟೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅವರ ಕಾರ್ಯದ ಮೇಲ್ವಿಚಾರಣೆಗಾಗಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.

ಶಿರಹಟ್ಟಿ: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳ ಸಭೆಗಳು, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಈಗಾಗಲೇ ನಡೆಯುತ್ತಿವೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ೨೫೨ ಮತಗಟ್ಟೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ನೇಮಿಸಲಾಗಿದ್ದು, ಅವರ ಕಾರ್ಯದ ಮೇಲ್ವಿಚಾರಣೆಗಾಗಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.

ಪಟ್ಟಣದ ದೇವರಾಜ ಅರಸು ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಭಾರತದ ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ನವೀಕರಿಸಿ, ಅರ್ಹ ಮತದಾರರನ್ನು ಸೇರಿಸಿ, ಮೃತರು, ಸ್ಥಳಾಂತರಗೊಂಡವರು ಅಥವಾ ನಕಲಿ ಹೆಸರನ್ನು ತೆಗೆದುಹಾಕಲು ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದರ ಮುಖ್ಯ ಉದ್ದೇಶ "ಅರ್ಹ ಮತದಾರರು ಯಾರೂ ಹೊರಗುಳಿಯಬಾರದು ಹಾಗೂ ಅನರ್ಹರು ಪಟ್ಟಿಯಲ್ಲಿ ಇರಬಾರದು ಎಂಬುದಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು ೨.೩೨.೧೨೦ ಮತದಾರರಿದ್ದು, ೨೫೨ ಮತಗಟ್ಟೆ ಸ್ಥಾಪಿಸಲಾಗಿದೆ. ಶಿರಹಟ್ಟಿಯಲ್ಲಿ ೮೮, ಲಕ್ಷ್ಮೇಶ್ವರದಲ್ಲಿ ೧೦೨, ಮುಂಡರಗಿಯಲ್ಲಿ ೬೨ ಮತಗಟ್ಟೆಗಳಿವೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜೂ. ೧೬ರೊಳಗೆ ಮುಗಿಸಬೇಕು. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ, ಮರಣ ಹೊಂದಿದ ಅಥವಾ ಅನರ್ಹರ ಹೆಸರು ತೆರವು ಮೊದಲಾದ ಪರಿಷ್ಕರಣೆ ಕಾರ್ಯಗಳನ್ನು ಜೂನ್ ೧೬ರೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಶೇ. ೯೩.೧೪ರಷ್ಟು ಈಗಾಗಲೇ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ಇದರ ಉದ್ದೇಶ ಮುಂದಿನ ಚುನಾವಣೆಗಳಿಗೆ ನಿಖರ ಮತ್ತು ನವೀಕೃತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು. ಸಾಮಾನ್ಯವಾಗಿ ಈ ಕಾರ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮಾಹಿತಿ ಪರಿಶೀಲನೆ ನಡೆಸುತ್ತಾರೆ. ಬಿಎಲ್‌ಒಗಳು ಹಾಗೂ ಮೇಲ್ವಿಚಾರಕರಿಗೆ ವಿಶೇಷ ತರಬೇತಿ ನೀಡಲಾಗುವುದು. ಜೂನ್ ೩೦ರಿಂದ ಜುಲೈ ೨೯ರ ವರೆಗೆ ಬಿಎಲ್‌ಒಗಳು ಪ್ರತಿ ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಫಾರ್ಮ್‌ಗಳನ್ನು ವಿತರಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಸಂಗ್ರಹಿಸಲಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ಮೂರು ಬಾರಿ ಭೇಟಿ ನೀಡಿ ಮಾಹಿತಿ ಪಡೆಯಲಾಗುವುದು. ಸಂಪರ್ಕ ಸಾಧ್ಯವಾಗದಿದ್ದಲ್ಲಿ ನೋಟಿಸ್ ಅಂಟಿಸಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ ಮಾಗಡಿ, ನಾಗರಾಜ ಲಕ್ಕುಂಡಿ, ತಿಮ್ಮರಡ್ಡಿ ಮರಡ್ಡಿ, ಶಂಕರ ಮರಾಠೆ, ಅಕ್ಬರ್ ಯಾದಗಿರಿ, ಶಿರಸ್ತೇದಾರ ಸಂತೋಷ ಅಸ್ಕಿ, ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ, ಕೆ.ಎಚ್. ಹೊಂಬಳಮಠ ಸೇರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಅರ್ಧ ತಾಸು ಸತತ ಮಳೆ: ಹೊಳೆಯಾದ ಮುಖ್ಯರಸ್ತೆ
ಯಡ್ತಾರೆ-ಕಬ್ಬರ್ಗಿಗೆ ರಸ್ತೆ, ಬಸ್ ಸೌಕರ್ಯ ಕಲ್ಪಿಸಲು ಒತ್ತಾಯ