ಸಹಕಾರಿ ಬೆಳವಣಿಗೆಗೆ ಆಡಳಿತ ಮಂಡಳಿ, ಸಿಬ್ಬಂದಿ ಸಹಕಾರ ಅಗತ್ಯ: ಶ್ರೀಧರ

KannadaprabhaNewsNetwork | Published : Dec 20, 2024 12:48 AM

ಸಾರಾಂಶ

ಸಹಕಾರ ಕ್ಷೇತ್ರದ ಬೆಳವಣಿಗೆಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಹಕಾರ ಜೊತೆಗೆ ಸಮನ್ವಯತೆ ಇರಬೇಕು.

ಕನ್ನಡಪ್ರಭ ವಾರ್ತೆ ಗಂಗಾವತಿ

ಸಹಕಾರ ಕ್ಷೇತ್ರದ ಬೆಳವಣಿಗೆಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಹಕಾರ ಜೊತೆಗೆ ಸಮನ್ವಯತೆ ಇರಬೇಕು ಎಂದು ಸಹಕಾರಿ ಸಂಯುಕ್ತ ನಿರ್ದೇಶಕ ಜಿ. ಶ್ರೀಧರ ಹೇಳಿದರು.

ನಗರದ ಲಲಿತ್ ಮಹಲ್ ಹೋಟೆಲ್ ನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಕಲ್ಬುರ್ಗಿ ಪ್ರಾಂತೀಯ ಕಚೇರಿಯಿಂದ ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲೂಕಿನ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಸಹಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಜೋಡೆತ್ತಿನ ಹಾಗೆ ಕಾರ್ಯನಿರ್ವಹಿಸಬೇಕು. ಆದ್ದರಿಂದ ನಾವೆಲ್ಲ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಸೌಹಾರ್ದ ಸಹಕಾರಿಗಳು ಕೇವಲ ಹಣಕಾಸಿನ ವ್ಯವಹಾರ ಮಾಡುವುದಲ್ಲದೆ, ಇತರ ಸೇವಾ ಚಟುವಟಿಕೆಗಳ ಕಡೆ ಗಮನಹರಿಸಬೇಕಾಗಿದೆ. ತೆಲಿಗಿ ಇ ಸ್ಟಾಂಪ್ ಹಗರಣದ ನಂತರ ರಾಜ್ಯ ಸರ್ಕಾರ ಈ ಸ್ಟ್ಯಾಂಪಿಂಗ್‌ ವ್ಯವಸ್ಥೆ ಬ್ಯಾಂಕುಗಳ ಮುಖಾಂತರ ನೀಡುತ್ತಿದೆ. ಆ ಸಂದರ್ಭ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಸಂಯುಕ್ತ ಸಹಕಾರಿಯ ಪ್ರಯತ್ನದಿಂದ ಸಹಕಾರಿಗಳು ಇ ಸ್ಟ್ಯಾಂಪ್ ವ್ಯವಸ್ಥೆ ಮಾಡಿದ್ದರಿಂದ ಇಂದು ಕ್ಷಣಮಾತ್ರದಲ್ಲಿ ಸಿಗುವ ವ್ಯವಸ್ಥೆ ಸಹಕಾರಿಗಳಿಂದ ಆಗಿದೆ ಎಂದರು.ಕಾಮನ್ ಸರ್ವಿಸ್ ಸೆಂಟರ್ ಗಳು ಸಹ ನೀಡಬೇಕು ಎನ್ನುವ ಹಿನ್ನೆಲೆ ಸಂಯುಕ್ತ ಸಹಕಾರಿ ಸರ್ಕಾರದ ಜೊತೆ ಮಾತುಕತೆ ನಡೆಸಿ ಕಾಮನ್ ಸರ್ವಿಸ್ ಸೆಂಟರ್ ಪ್ರಾರಂಭಿಸಲು ಮುಂದಾಗಿದ್ದೇವೆ. ಆದ್ದರಿಂದ ಅದರ ಲಾಭವನ್ನು ನಾವೆಲ್ಲ ಪಡೆಯಬೇಕೆಂದು ಕೋರಿದರು

ಕಾರ್ಯಕ್ರಮದಲ್ಲಿ ಸಹಕಾರಿ ನಾಗಲಿಂಗಪ್ಪ ಪತ್ತಾರ್, ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ್ ರಾಕಲೇ, ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಓಂಕಾರ್ ಧರಣಿ ಉಪಸ್ಥಿತರಿದ್ದರು. ಈ ಸಂದರ್ಭ ಸಂಯುಕ್ತ ಸಹಕಾರಿಯ 2025ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

Share this article