ಸಿದ್ದಾಪುರ: ಶಕ್ತಿಶಾಲಿಯಾದ ಹನುಮಂತನು ಸಣ್ಣ ಜಾಗದಲ್ಲಿದ್ದುಕೊಂಡು ದೊಡ್ಡ ಜಾಗವನ್ನು ಆಳುತ್ತಾನೆ. ಆನೆಸಾಲ ಹನುಮಂತನಿಗೆ ಬಿಳಗಿ ಸೀಮೆ ಸೇರಿದಂತೆ ವಿಶಾಲ ವ್ಯಾಪ್ತಿಯಿದೆ. ರಾಜ ಮಹಾರಾಜರ ಕಾಲದಿಂದಲೂ ನಡೆದುಕೊಂಡ ಬಂದ ಪುರಾತನವಾದ ಹನುಮಂತ ದೇವರಿಗೆ ನೂತನ ಆಲಯ ನಿರ್ಮಿಸುವಲ್ಲಿ ಈ ಭಾಗದ ಭಕ್ತಾದಿಗಳ ಬೇಡಿಕೆಯಂತೆ ಎಲ್ಲ ರೀತಿಯ ಮಾರ್ಗದರ್ಶನ ಹಾಗೂ ಸಹಕಾರ ನೀಡುತ್ತೇವೆ ಎಂದು ರಾಮಚಂದ್ರಪುರಮಠದ ರಾಘವೇಶ್ವರ ಭಾರತೀ ಶ್ರೀಗಳು ತಿಳಿಸಿದರು.
ತಾಲೂಕಿನ ಬಿಳಗಿಯ ಪುರಾತನ ಆನೆಸಾಲ ಹನುಮಂತ ದೇವಾಲಯದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳ ಕೋರಿಕೆಯಂತೆ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನೂತನ ದೇವಾಲಯ ಕಟ್ಟಡ ನಿರ್ಮಿಸುವಲ್ಲಿ ಸಲಹೆ- ಸೂಚನೆ ನೀಡಿದರು. ಹನುಮಂತ ದೇವರಿಗೆ ನೂತನ ಆಲಯ ನಿರ್ಮಿಸುವಲ್ಲಿ ಯಾವುದೇ ತೊಂದರೆ ತೊಡಕುಬಾರದು. ಆತನ ಶಕ್ತಿ, ಆಶೀರ್ವಾದದಿಂದ ಹಣಕಾಸು ಸಂಪತ್ತು ಸಹ ಕೂಡಿ ಬರುತ್ತದೆ. ದೇವಾಲಯ ನೂತನ ಕಟ್ಟಡ ನಿರ್ಮಾಣ ಕುರಿತು ಮುಂದಿನ ಹೆಜ್ಜೆ ಇಡಿ ಎಂದು ಅಭಯ ನೀಡಿದ ಶ್ರೀಗಳು, ದೇವಾಲಯ ಸಮಿತಿಯವರಿಗೆ ಫಲಮಂತ್ರಾಕ್ಷತೆ ಅನುಗ್ರಹಿಸಿದರು.ದೇವಾಲಯ ಮೊಕ್ತೇಸರರಾದ ಶಾಂತಾರಾಮ ಪೈ, ಸಮಿತಿ ಅಧ್ಯಕ್ಷ ಮಹಾಬಲೇಶ್ವರ ನಾರಾಯಣ ಗೌಡ, ಕಾರ್ಯದರ್ಶಿ ಜಯಂತ ಮಂಜುನಾಥ ನಾಯ್ಕ, ಮಾರಿಕಾಂಬಾ ಹಾಗೂ ದುರ್ಗಾಂಬಿಕಾ ದೇವಾಲಯಗಳ ಮೊಕ್ತೇಸರ ಶ್ರೀಧರ ಹೆಗಡೆ ನೇರಗಾಲ, ರಾಮಲಿಂಗೇಶ್ವರ ದೇವಾಲಯದ ಅಧ್ಯಕ್ಷ ರಮಾನಂದ ಮಡಿವಾಳ, ಪ್ರಭಾಕರ ಹಿರೇಕೋಡಿ, ಮಂಜುನಾಥ ಮಡಿವಾಳ, ಗೋಸ್ವರ್ಗ ಸಮಿತಿಯ ಆರ್.ಎಸ್. ಹೆಗಡೆ ಹರಗಿ, ಸಿದ್ದಾಪುರ ಮಂಡಲ ಅಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಸ್ವರ್ಣಪಾದುಕಾ ಸಮಿತಿಯ ಭಾಸ್ಕರ ಹೆಗಡೆ ಕೊಡಗಿಬೈಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಹುತ್ಕಂಡದ ಮಾರಿಕಾಂಬಾ ದೇವಿ ಜಾತ್ರೆಗೆ ತೆರೆ
ಯಲ್ಲಾಪುರ: ದೇವಾಲಯಗಳು ಊರಿನ ಶಕ್ತಿಕೇಂದ್ರಗಳಂತೆ ಕೆಲಸ ಮಾಡುತ್ತವೆ. ಊರಿನ ನಾಗರಿಕರಲ್ಲಿ ಸ್ನೇಹ, ಸಹಬಾಳ್ವೆ, ಸಮನ್ವಯ ರೂಪುಗೊಳ್ಳಲು ಧಾರ್ಮಿಕ ಕೇಂದ್ರಗಳು ಸಹಕಾರಿ ಎಂದು ಹುತ್ಕಂಡದ ಮಾರಿಕಾಂಬಾ ದೇವಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎನ್. ಭಟ್ಟ ಹುತ್ಕಂಡ ತಿಳಿಸಿದರು.ನ. ೨ ಮತ್ತು ೩ರಂದು ಎರಡು ದಿನಗಳ ಕಾಲ ನಡೆದ ಹುತ್ಕಂಡದ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಉದ್ಘಾಟಿಸಿ, ಮಾತನಾಡಿದರು.ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಿದರೆ ಯಾವುದೇ ಕ್ಷೇತ್ರದಲ್ಲಿ ಪರಿವರ್ತನೆ ತರಲು ಸಾಧ್ಯವಿದೆ. ಎಲ್ಲರ ಸಹಕಾರ, ಸಮನ್ವಯದಿಂದ ಅಭಿವೃದ್ಧಿ ಸಾಧ್ಯ. ಶತಮಾನಗಳ ಇತಿಹಾಸವಿರುವ ಮಾರಿಕಾಂಬಾ ದೇವಸ್ಥಾನದ ಗೋಪುರ ಪುನರ್ ನಿರ್ಮಾಣ ಮಾಡಬೇಕಿದೆ. ಈ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.
ಚಂದಗುಳಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ಎಸ್. ಭಟ್ಟ ಮಾತನಾಡಿ, ಪಂಚಗ್ರಾಮಗಳ ಅಧಿದೇವತೆ ಮಾರಿಕಾಂಬಾ ದೇಗುಲಕ್ಕೆ ಎಲ್ಲ ಪಂಚಗ್ರಾಮದ ಭಕ್ತರು ಹೆಚ್ಚಿನ ಸೇವೆ ಸಲ್ಲಿಸುವುದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧ್ಯ ಎಂದರು.ಹುತ್ಕಂಡದ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಭಟ್ಟ ಮಾತನಾಡಿ, ದೀಪಾವಳಿ ಹಬ್ಬವನ್ನು ಏಕೆ ಮತ್ತು ಹೇಗೆ ಆಚರಿಸಬೇಕು ಎಂದರು.ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಚಂದ್ರ ಭಟ್ಟ ಅಂಬುಳ್ಳಿ, ಸದಸ್ಯರಾದ ರಾಮಚಂದ್ರ ಭಾಗ್ವತ್ ಗೋಳಿಗದ್ದೆ, ದೇವೇಂದ್ರ ಹೆಗಡೆ ಕಬ್ಬಿನಗದ್ದೆ, ಮೊಕ್ತೇಸರ ರಾಮಾ ಘಾಡಿ ಸೋಮನಳ್ಳಿ, ಚಂದಗುಳಿ ಗ್ರಾಪಂ ಅಧ್ಯಕ್ಷೆ ಶಿಲ್ಪಾ ನಾಯ್ಕ, ಮಾಜಿ ಅಧ್ಯಕ್ಷೆ ನೇತ್ರಾವತಿ ಹೆಗಡೆ ಕಬ್ಬಿನಗದ್ದೆ, ಸುಬ್ರಾಯ ಭಾಗ್ವತ್ ಗಾಣಗದ್ದೆ, ಮಂಜುನಾಥ ಹೆಗಡೆ ಜಂಬೆಸಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.