ಗದಗ: ಜಿಲ್ಲಾದ್ಯಂತ ನ. 4 ರಿಂದ 21 ರವರೆಗೆ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ (ಎಲ್ಸಿಡಿಸಿ) ಹಮ್ಮಿಕೊಳ್ಳಲಾಗುತ್ತಿದ್ದು, ಅಭಿಯಾನದ ಯಶಸ್ಸಿಗೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ಹೇಳಿದರು.
ಎಲ್ಸಿಡಿಸಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರ ಭಾಗವಹಿಸುವಿಕೆ ಮುಖ್ಯವಾಗಿದೆ. ಪ್ರತಿ ಗ್ರಾಪಂಯಿಂದ ಈ ಅಭಿಯಾನದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಗ್ರಾಪಂದಿಂದ ಕಸದ ವಿಲೇವಾರಿ ವಾಹನದ ಮುಖಾಂತರ ಅಭಿಯಾನದ ಕುರಿತು ಮೈಕಿಂಗ್ ಮಾಡಿಸುವುದು. ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಪ್ರತಿನಿತ್ಯ ಗ್ರಾಮ ಮಟ್ಟದಲ್ಲಿ ಡಂಗೂರ ಸಾರುವುದು. ಒಟ್ಟಾರೆ ಅಭಿಯಾನ ವ್ಯವಸ್ಥಿತವಾಗಿ ಜರುಗಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ನೀಲಗುಂದ ಮಾತನಾಡಿ ಎಲ್.ಸಿ.ಡಿ.ಸಿ. ಸಮೀಕ್ಷಾ ಕಾರ್ಯಕ್ರಮ ನ. 4 ರಿಂದ 21 ರವರೆಗೆ (ರಜಾ ದಿನ ಹೊರತುಪಡಿಸಿ) ಹಮ್ಮಿಕೊಳ್ಳಲಾಗುತ್ತಿದ್ದು, ಸಮೀಕ್ಷಾ ಕಾರ್ಯದ ಮೇಲ್ವಿಚಾರಣೆಗಾಗಿ 10 ಸಮೀಕ್ಷಾ ತಂಡಗಳಿಗೆ ಓರ್ವ ಮೇಲ್ವಿಚಾರಕರನ್ನು ನೇಮಿಸಲಾಗಿದ್ದು. ಜಿಲ್ಲೆಯಲ್ಲಿ 813 ಸಮೀಕ್ಷಾ ತಂಡಗಳ ಕ್ರಿಯಾ ಯೋಜನೆ ರಚಿಸಲಾಗಿದೆ. ಜಾಥಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳನ್ನು ಹಾಗೂ ನಗರ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯದಲ್ಲಿ ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಭೆಗೆ ವಿವರಿಸಿದರು.ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಕುಷ್ಟ ರೋಗ ವಿಭಾಗ) ದ ಬಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.