ಲಕ್ಷ್ಮೇಶ್ವರ: ಮಗುವಿನ ಸರ್ವಾಂಗೀಣ ಪ್ರಗತಿಗೆ ಶಿಕ್ಷಕ, ಪೋಷಕರು ಹಾಗೂ ಇಲಾಖೆಯ ಅಧಿಕಾರಿಗಳ ಪರಿಶ್ರಮ ಅಗತ್ಯವಾಗಿದೆ ಎಂದು ಗದಗ ಜಿಪಂನ ಸಾಮಾಜಿಕ ಪರಿಶೋಧಕ ಮರಿಬಸನಗೌಡರ ಹೇಳಿದರು.
ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವ ಕಾರ್ಯವನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಮಾಡಬೇಕಾಗುತ್ತದೆ. ವಿದ್ಯಾರ್ಥಿ, ಶಿಕ್ಷಕ, ಪೋಷಕರು, ಸಮಾಜ ಹಾಗೂ ಇಲಾಖೆಯ ಅಧಿಕಾರಿ ವರ್ಗ ಸೇರಿದಂತೆ ಇನ್ನೂ ಹಲವು ಸಂಘ ಸಂಸ್ಥೆಗಳು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಮಾಜದ ಬೆಳವಣಿಗೆಯ ಜತೆಯಲ್ಲಿ ಮಗುವಿನ ಬೆಳವಣಿಗೆ ಆಗುವಂತೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ವೀರೇಶ ಭಂಗಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲೆಯ ಎಸ್ ಡಿ ಎಂಸಿ, ಪೋಷಕರು, ಸಮುದಾಯ ಹಾಗೂ ಶಾಲೆಯ ಶಿಕ್ಷಕರು ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದಾಗ ಶಿಕ್ಷಣ ಇಲಾಖೆಯ ಆಶಯ ಈಡೇರುತ್ತದೆ ಹೇಳಿದರು.ಅರಣ್ಯ ಇಲಾಖೆಯ ಅಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ, ಶಾಲಾ ಹಂತದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಕೊಡುಗೆ ಬಹಳ ಅವಶ್ಯವಾಗಿದ್ದು, ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ನೂತನ ತಂತ್ರಜ್ಞಾನ ಆಧಾರಿತ ಶಿಕ್ಷಣ ಸಂಪನ್ಮೂಲಗಳ ಸೌಲಭ್ಯ ಪಡೆದು ಮಗುವಿನ ಶಿಕ್ಷಣಕ್ಕೆ ಹೆಚ್ಚು ನೆರವಾಗುತ್ತದೆ ಎಂದು ಹೇಳಿದರು.
ಈ ವೇಳೆ ಮುಖ್ಯೋಪಧ್ಯಾಯಿನಿ ಎಸ್.ಎಚ್.ಉಮಚಗಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕುಮಾರ ಚಕ್ರಸಾಲಿ, ರವಿ ನಾಯಕ ದೇವರಮನಿ, ಮಂಜುಳಾ ಪಾಟೀಲ, ವಿನಾಯಕ ಬಡಿಗೇರ, ಹನಮಂತ ಕಾರಬಾರಿ, ಹನುಮಂತಪ್ಪ ಲಮಾಣಿ, ರೂಪಾ ಬೊಮ್ಮನಹಳ್ಳಿ, ಯಲ್ಲಪ್ಪ ಗಡಿಯಪ್ಪನವರ, ಎಸ್‌ಡಿಎಂಸಿ ಸದಸ್ಯರು ಇದ್ದರು. ಡಿ.ಡಿ. ಲಮಾಣಿ ನಿರ್ವಹಿಸಿದರು. ಪಿ.ಸಿ. ಕಾಳಶೆಟ್ಟಿ ವಂದಿಸಿದರು.