ಮಾರಿಕಾಂಬಾ ದೇವಸ್ಥಾನ ಹಾಗೂ ಮಾರಿ ಮೂರ್ತಿ ವಿಸರ್ಜನೆ ನಡೆಯುವ ಜಾಲಿಕೋಡಿ ಕಡಲ ತೀರವನ್ನು ವೀಕ್ಷಿಸಿದರು.
ಭಟ್ಕಳ: ಪಟ್ಟಣದ ಮಾರಿಗುಡಿಯಲ್ಲಿ ಜುಲೈ 23-24ರಂದು ಎರಡು ದಿನಗಳ ಕಾಲ ನಡೆಯಲಿರುವ ಜಾತ್ರೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಜಾತ್ರೆಯ ಪೂರ್ವಭಾವಿ ಸಿದ್ಧತೆ ಹಾಗೂ ಕೈಗೊಳ್ಳಬೇಕಾದ ಭದ್ರತೆ ಬಗ್ಗೆ ಪರಿಶೀಲಿಸಿದರು.
ಉತ್ತರ ಕನ್ನಡ ಜಿಲ್ಲಾ ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಭಟ್ಕಳಕ್ಕೆ ಆಗಮಿಸಿದ ಅವರು, ಮಾರಿಕಾಂಬಾ ದೇವಸ್ಥಾನ ಹಾಗೂ ಮಾರಿ ಮೂರ್ತಿ ವಿಸರ್ಜನೆ ನಡೆಯುವ ಜಾಲಿಕೋಡಿ ಕಡಲ ತೀರವನ್ನು ವೀಕ್ಷಿಸಿ, ಮೆರವಣಿಗೆಯ ಮಾರ್ಗ, ಸಾರ್ವಜನಿಕ ಸುರಕ್ಷತೆ, ಹಾಗೂ ಸಾರ್ವಜನಿಕರು ಸೇರಿರುವ ಸಂದರ್ಭದ ವ್ಯವಸ್ಥೆಗಳ ಕುರಿತು ಡಿವೈಎಸ್ಪಿ ಮಹೇಶ, ನಗರ ಠಾಣೆ ಇನ್ಸಪೆಕ್ಟರ್ ದಿವಾಕರ ಅವರೊಂದಿಗೆ ಚರ್ಚೆ ನಡೆಸಿದರು. ನಂತರ ಮಾರಿಕಾಂಬೆ ದೇವಸ್ಥಾನಕ್ಕೆ ಆಗಮಿಸಿದ ಎಸ್‍ಪಿ ಅವರಿಗೆ ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷ ಪರಮೇಶ್ವರ ನಾಯ್ಕ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ಸುರೇಶ ಆಚಾರ್ಯ ಮುಂತಾದವರು ಸ್ವಾಗತಿಸಿದರು.ಆಡಳಿತ ಮಂಡಳಿ ಪ್ರಮುಖರ ಬಳಿ ಅವರು ಜಾತ್ರೆಯ ಹಿನ್ನೆಲೆ ನಿರ್ವಹಣಾ ಕಾರ್ಯಚಟುವಟಿಕೆಗಳ ಕುರಿತು ವಿವರ ಪಡೆದರು. ಬಳಿಕ ಅವರು ಡಿವೈಎಸ್ಪಿ ಕಚೇರಿಯಲ್ಲಿ ಪ್ರಮುಖರೊಂದಿಗೆ ಶಾಂತಿ, ಸುವ್ಯವಸ್ಥೆ, ಮತ್ತು ಸಹಕಾರದ ಕುರಿತು ಸಭೆ ನಡೆಸಿದರು. ಶಾಂತಿ ಸಭೆಯಲ್ಲಿ ಎಸ್ಪಿ ಅವರು ಮಾರಿಕಾಂಬೆ ಜಾತ್ರೆ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವೆಂದರು. ಸಭೆಯಲ್ಲಿ ಡಿವೈಎಸ್ಪಿ ಮಹೇಶ, ಸಿಪಿಐ ದಿವಾಕರ, ಸಿಪಿಐ ಮಂಜುನಾಥ ಲಿಂಗಾರೆಡ್ಡಿ, ಪುರಸಭಾ ಉಪಾಧ್ಯಕ್ಷ ಆಲ್ತಾಫ್ ಖರೂರಿ, ಬಿಜೆಪಿ ಮುಖಂಡ ಗೋವಿಂದ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ಅಧ್ಯಕ್ಷ ಇನಾಯತ ಶಾಬಂದ್ರಿ, ಪ್ರಧಾನ ಕಾರ್ಯದರ್ಶಿ ಅಬ್ದುರಕೀಬ್ ಎಂ.ಜೆ., ಇಮ್ರಾನ್ ಲಂಕಾ ಮತ್ತು ಇತರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.