ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ದ್ವಿಭಾಷಾ ತರಗತಿ ಉದ್ಘಾಟನೆ
ಸರ್ಕಾರಿ ಶಾಲೆಗಳ ಉಳಿವಿಗೆ ಸ್ಥಳೀಯರ, ಗ್ರಾಮಸ್ಥರ ಹಾಗೂ ಪೋಷಕರ ಸಹಕಾರ ಅತ್ಯಗತ್ಯ ಎಂದು ಬಿಇಓ ಶಬಾನಾಅಂಜುಮ್ ಹೇಳಿದರು.
ಶುಕ್ರವಾರ ತಾಲೂಕಿನ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದಾನಿಗಳಿಗೆ ಗೌರವ ಸಮರ್ಪಣೆ ಹಾಗೂ ದ್ವಿ ಭಾಷಾ ತರಗತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಪೋಷಕರು ಆಂಗ್ಲ ಮಾಧ್ಯಮದ ವ್ಯಾಮೋಹ ದಿಂದ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಆಂಗ್ಲ ಮಾದ್ಯಮದ ತರಗತಿ ಪ್ರಾರಂಭಿಸಿದೆ ಎಂದರು.ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ದಾನಿ ಕಣಿವೆ ವಿನಯ್ ಶಾಲೆಗೆ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿ ಮಾತನಾಡಿ, ಹೆಚ್ಚಿನ ಮಕ್ಕಳು ಹೆಚ್ಚಿನ ಉನ್ನತ ಶಿಕ್ಷಣ ಪಡೆದು ಹೊರ ದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಆದರೆ, ಅವರ ತಂದೆ, ತಾಯಂದಿರು ಮಾತ್ರ ವೃದ್ಧಾಶ್ರಮದಲ್ಲಿ ಬದುಕುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸರ್ಕಾರಿ ಶಾಲೆಗಳ ಅವನತಿಯೇ ಮುಖ್ಯ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್ ಶಾಲೆಯ 1 ನೇ ತರಗತಿಯ 10 ಮಕ್ಕಳಿಗೆ ತಲಾ 1 ಸಾವಿರ ರೂ.ನಂತೆ ಠೇವಣಿ ನೀಡಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯನೂ ಕೂಡ ತಾನು ದುಡಿದ ಹಣದಲ್ಲಿ ಸ್ವಲ್ಪ ಪ್ರಮಾಣ ದಲ್ಲಾದರೂ ಸಮಾಜ ಮುಖಿ ಕಾರ್ಯಗಳಿಗೆ ಬಳಕೆ ಮಾಡಬೇಕು ಎಂದರು. ಜೇಮ್ಸ್, ಎಲ್ದೋ, ಸಚಿನ್,ರವಿಚಂದ್ರ, ಸುಲೇಮಾನ್ ಮಕ್ಕಳಿಗೆ ತಟ್ಟೆ ಹಾಗೂ ಲೋಟಗಳನ್ನು ವಿತರಿಸಿದರು. ಶಾಲಾಭಿ ವೃದ್ಧಿ ಸಮಿತಿ ಅಧ್ಯಕ್ಷ ಎಂ.ಜಗದೀಶ್ 1 ನೇ ತರಗತಿಗೆ ದಾಖಲಾದ ಮಕ್ಕಳಿಗೆ ನೋಟ್ ಬುಕ್, ಬ್ಯಾಗ್‌ಗಳನ್ನು ವಿತರಿಸಿ ದರು. ದಾನಿಗಳೆಲ್ಲರಿಗೂ ಶಾಲೆಯಿಂದ ಗೌರವಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಜಗದೀಶ್ ವಹಿಸಿದ್ದರು. ರೋಟರಿ ಸಂಸ್ಥೆ ಕಾರ್ಯದರ್ಶಿ ಕಟಗಳಲೆ ಲೋಕೇಶ್, ಮುಖಂಡರಾದ ಗಾಂಧಿಗ್ರಾಮ ನಾಗರಾಜು,ಕೆ.ಸಿ.ನಾಗೇಶ್, ಎಂ.ಎಲ್. ಪ್ರಾಣೇಶ್, ವಾಣಿನರೇಂದ್ರ, ಅರುಣಕುಮಾರ್,ಗಾಯಿತ್ರಿ, ಪಿಡಿಓ ವಿಂದ್ಯಾ,ಮುಖ್ಯ ಶಿಕ್ಷಕಿ ಎ.ಜೆ.ಪೆನಿನ ಮತ್ತಿತರರು ಇದ್ದರು.