ದಾಂಡೇಲಿ: ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿರುವ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನ ನನ್ನ ಕ್ಷೇತ್ರದ ದಾಂಡೇಲಿಯಲ್ಲಿ ನಡೆಯುತ್ತಿರುವುದು ಅಭಿಮಾನದ ಸಂಗತಿ. ಈ ಸಮ್ಮೇಳನವನ್ನ ಅತ್ಯಂತ ಅರ್ಥಪೂರ್ಣವಾಗಿ ಸಂಘಟಿಸುವ ಜೊತೆಗೆ ಒಂದು ಐತಿಹಾಸಿಕ ಕಾರ್ಯಕ್ರಮವನ್ನಾಗಿ ರೂಪಿಸುವಲ್ಲಿ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಕರನೀಡಿದರು.
ದಾಂಡೇಲಿಯ ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತಾ ಸಭೆ ಹಾಗೂ ಸ್ವಾಗತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಿ.ಎನ್. ವಾಸರೆ ಅಧ್ಯಕ್ಷತೆಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ, ರಚನಾತ್ಮಕ ಕಾರ್ಯಕ್ರಮಗಳು ನಡೆಯುವುದನ್ನು ಗಮನಿಸಿದ್ದೇವೆ. ಇದೀಗ ರಾಜ್ಯದಲ್ಲಿ ಅತಿ ಹೆಚ್ಚು ಸಮ್ಮೇಳನ ನಡೆಸಿರುವ ಖ್ಯಾತಿ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದು, 25ನೇ ಸಮ್ಮೇಳನ ಸ್ವಾಗತ ಸಮಿತಿಯ ಗೌರವಾಧ್ಯಕ್ಷನಾಗಿ ನಾನು ಎಲ್ಲ ರೀತಿಯ ಸಹಕಾರ ನೀಡುವ ಜೊತೆಗೆ, ಇದು ಈ ಜಿಲ್ಲೆಯ ಇತಿಹಾಸ ಪುಟಗಳಲ್ಲಿ ಮರೆಯದ ಸಮ್ಮೇಳನವಾಗಿ ರೂಪಗೊಳ್ಳುವಂತಾಗಬೇಕು ಎಂದರು.
ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳಿಗೆ ಸಂಪನ್ಮೂಲದ ವ್ಯಕ್ತಿಗಳಿಗೆ, ಯಾವುದೇ ರೀತಿಯ ಸಮಸ್ಯೆ ಆಗದ ರೀತಿಯಲ್ಲಿ ಪ್ರತಿಯೊಬ್ಬ ದಾಂಡೇಲಿಗರೂ ಇದು ತಮ್ಮ ಮನೆಯ ಹಬ್ಬ ಎನ್ನುವ ರೀತಿಯಲ್ಲಿ ಸಹಕರಿಸಬೇಕು. ತಹಸೀಲ್ದಾರ್ ನೇತೃತ್ವದಲ್ಲಿ ಸಮ್ಮೇಳನದ ಮುಂದಿನ ಎಲ್ಲ ಸಿದ್ಧತಾ ಚಟುವಟಿಕೆ, ಪೂರ್ವಭಾವಿ ಸಭೆಗಳು ನಡೆಯುವಂತಾಗಲಿ. ಎಲ್ಲ ಇಲಾಖೆಗಳು ಹಾಗೂ ಸಂಘಟನೆಯವರು ಸಹಕರಿಸಬೇಕು. ಡಿಸೆಂಬರ್ 13, 14, 15,ರಂದು ಸಮ್ಮೇಳನ ನಡೆಯಲಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವುದರಿಂದ, ಈ ದಿನಾಂಕವನ್ನು ಹೊಂದಿಸಲಾಗಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸುವಂತೆ ಮನವಿ ಮಾಡಿದರು.ಜಿಲ್ಲಾ ಕಸಾಪ ಅಧ್ಯಕ್ಷ ಬಿ. ಎನ್. ವಾಸರೆ ಮಾತನಾಡಿ, ಇದು ನನ್ನ ಕರ್ಮಭೂಮಿ. ನನ್ನ ಅವಧಿಯಲ್ಲಿ 25ನೇ ಸಮ್ಮೇಳನ ದಾಂಡೇಲಿಯಲ್ಲಿ ನಡೆಯುತ್ತಿರುವುದು ನನ್ನ ಬದುಕಿನ ಭಾಗ್ಯದ ಸಂದರ್ಭ ಅಂದುಕೊಂಡಿದ್ದೇನೆ. ರಾಜ್ಯದಲ್ಲಿ ಅತಿ ಹೆಚ್ಚು ಸಮ್ಮೇಳನ ಮಾಡಿದ ಖ್ಯಾತಿ ಉತ್ತರ ಕನ್ನಡ ಜಿಲ್ಲೆಗೆ ಪ್ರಾಪ್ತವಾಗಿದ್ದು, ದಾಂಡೇಲಿಯಲ್ಲಿ 14 ವರ್ಷಗಳ ನಂತರ ಜಿಲ್ಲಾ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನವನ್ನು ಅದ್ಧೂರಿಯಾಗಿ ಎನ್ನುವುದಕ್ಕಿಂತ ಅರ್ಥಪೂರ್ಣವಾಗಿ ಸಂಘಟಿಸಬೇಕಿದೆ ಎಂದು ಹೇಳಿದರು.
ಬೆಳ್ಳಿ ಹಬ್ಬದ ಸಂಭ್ರಮದ ಕಾರಣಕ್ಕಾಗಿ ಈ ಸಮ್ಮೇಳನವನ್ನು ಮೂರು ದಿನ ನಡೆಸಲಾಗುತ್ತಿದೆ. 25 ವಿಶೇಷ ಸಾಧಕರಿಗೆ ಸನ್ಮಾನ , 25 ಪುಸ್ತಕಗಳ ಬಿಡುಗಡೆ ಸೇರಿದಂತೆ ಹಲವು ವೈಶಿಷ್ಠ್ಯತೆಗಳಿಂದ ಕೂಡಿರಲಿದೆ. ಆಕರ್ಷಕ ಸಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿದೆ. ಸಮ್ಮೇಳನದ ಮೊದಲ ದಿನ ಕನ್ನಡ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಂಸ್ಕೃತಿಕ ಕಲಾತಂಡ ಜೊತೆಗೆ ನಡೆಯಲಿದೆ ಎಂದರು.ಸಭೆಯಲ್ಲಿ ದಾಂಡೇಲಿ ತಹಸೀಲ್ದಾರ ಶೈಲೇಶ ಪರಮಾನಂದ, ದಾಂಡೇಲಿಯ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಟಿ.ಸಿ. ಹಾದಿಮನಿ, ದಾಂಡೇಲಿ ನಗರಸಭೆಯು ನಗರ ವಿವೇಕ ಬನ್ನೆ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ನಗರಸಭಾ ಅಧ್ಯಕ್ಷ ಅಶ್ಪಾಕ ಶೇಖ್, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಬಿಜೆಪಿ ಅಧ್ಯಕ್ಷ ಬುದ್ದಿವಂತ ಗೌಡ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ, ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯಕ ಭಾವಿಕೇರಿ ನೌಕರರ ಸಂಘದ ಅಧ್ಯಕ್ಷ ಉತ್ಪಾಲ ಶಿರೋಡ್ಕರ್, ಶಿರಸಿ ಅರ್ಬನ್ ಬ್ಯಾಂಕ್ ನಿರ್ದೇಶಕ ಟಿ.ಎಸ್. ಬಾಲಮಣಿ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ, ಕಸಾಪ ದಾಂಡೇಲಿ ತಾಲೂಕು ಘಟಕದ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಪ್ರವೀಣ್ ನಾಯ್ಕ, ಕೋಶಾಧ್ಯಕ್ಷ ಶ್ರೀಮಂತ ಮದರಿ, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಆರ್.ಪಿ. ನಾಯಕ, ಶಾರದಾ ಪರಶುರಾಮ, ಕರ್ನಾಟಕ ಸಂಘದ ಅಧ್ಯಕ್ಷ ಯು.ಎಸ್. ಪಾಟೀಲ, ಕಾರ್ಯದರ್ಶಿ ಕೀರ್ತಿ ಗಾಂವಕರ, ಪ್ರೆಸ್ ಕ್ಲಬ್ ಅಧ್ಯಕ್ಷ ಸಂದೇಶ ಜೈನ್ ಹಾಗೂ ಪದಾಧಿಕಾರಿಗಳು ವಿವಿಧ ಇಲಾಖಾ ಅಧಿಕಾರಿಗಳು, ನಗರಸಭಾ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ, ಕನ್ನಡಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.