ಬಾಲ್ಯವಿವಾಹ ಮುಕ್ತ ಜಿಲ್ಲೆಯ ನಿರ್ಮಾಣಕ್ಕೆ ಸಹಕಾರ ಅಗತ್ಯ

KannadaprabhaNewsNetwork |  
Published : Oct 02, 2026, 02:30 AM IST
ಫೋಟೋವಿವರ- (30ಎಚ್‌ಪಿಟಿ2) ಹೊಸಪೇಟೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ಸಬಲೀಕರಣ ಕುರಿತ ಜಿಲ್ಲಾಮಟ್ಟದ ಸಮಾಲೋಚನಾ ಕಾರ್ಯಾಗಾರವನ್ನು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಉದ್ಘಾಟಿಸಿದರು | Kannada Prabha

ಸಾರಾಂಶ

ಸ್ವಾತಂತ್ರ‍್ಯ ಬಂದು ಹಲವಾರು ವರ್ಷಗಳು ಕಳೆದರೂ ಹಾಗೂ ಕಠಿಣ ಕಾನೂನು ಜಾರಿಯಲ್ಲಿದ್ದರೂ ಸಹ ಬಾಲ್ಯ ವಿವಾಹ ಇಂದಿಗೂ ನಡೆಯುತ್ತಿರುವುದು ವ್ಯವಸ್ಥೆಯ ಲೋಪ ತೋರಿಸುತ್ತದೆ

ಹೊಸಪೇಟೆ: ವಿಜಯನಗರ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕ, ಸಮುದಾಯ, ಅಧಿಕಾರಿಗಳ ಸಹಕಾರ ಮತ್ತು ಸರ್ಕಾರದ ಇಲಾಖೆಗಳ ನಡುವೆ ಸಮನ್ವಯತೆಯ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.

ಅವರು ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಸಬಲೀಕರಣ ಕುರಿತ ಜಿಲ್ಲಾಮಟ್ಟದ ಸಮಾಲೋಚನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಬಾಲ್ಯ ವಿವಾಹ ಎಂಬುದು ಸಮಾಜಕ್ಕೆ ಅಂಟಿದ ದೊಡ್ಡ ಪಿಡುಗು. ಸ್ವಾತಂತ್ರ‍್ಯ ಬಂದು ಹಲವಾರು ವರ್ಷಗಳು ಕಳೆದರೂ ಹಾಗೂ ಕಠಿಣ ಕಾನೂನು ಜಾರಿಯಲ್ಲಿದ್ದರೂ ಸಹ ಬಾಲ್ಯ ವಿವಾಹ ಇಂದಿಗೂ ನಡೆಯುತ್ತಿರುವುದು ವ್ಯವಸ್ಥೆಯ ಲೋಪ ತೋರಿಸುತ್ತದೆ. ಕೇವಲ ಪತ್ರಿಕೆಗಳಲ್ಲಿ ಸುದ್ದಿ ಬಂದಾಗ ಅಷ್ಟೇ ಗಮನಿಸದೇ ಅಧಿಕಾರಿಗಳು ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಹೊಣೆಗಾರಿಕೆಯಾಗಿ ಸ್ವೀಕರಿಸಿ ಬಾಲ್ಯ ವಿವಾಹ ತಡೆಯಲು ಶ್ರಮಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಗುಳೆ ಹೋಗುವ ಕುಟುಂಬಗಳ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ಅಗತ್ಯವಾಗಿದ್ದು, ಕೊಟ್ಟೂರು, ಹೂವಿನಹಡಗಲಿ, ಕೂಡ್ಲಿಗಿ ಭಾಗಗಳಲ್ಲಿ ದೀಪಾವಳಿ ಹಬ್ಬದ ನಂತರ ಜನರು ಕೆಲಸಕ್ಕಾಗಿ ಬೇರೆಡೆಗೆ ಗುಳೆ ಹೋಗುತ್ತಾರೆ. ಈ ಸಮಯದಲ್ಲಿ ವೃದ್ಧರ ಆಶ್ರಯದಲ್ಲಿ ಉಳಿಯುವ ಹೆಣ್ಣುಮಕ್ಕಳು ಬಾಲ್ಯ ವಿವಾಹದಂತಹ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಜಾಗೃತಿ ಹಾಗೂ ನಿರಂತರ ನಿಗಾ ವಹಿಸುವುದು ಅತ್ಯಗತ್ಯ ಎಂದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ಮಲ್ಲೇಶ ದೊಡ್ಡಮನಿ ಮಾತನಾಡಿ, ಸಮಾಜದಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಸಹ ಗ್ರಾಮೀಣ ಭಾಗದ ಕೆಲವು ಸಮುದಾಯಗಳಲ್ಲಿ ಬಾಲ್ಯ ವಿವಾಹ ಹಾಗೂ ಅಪ್ರಾಪ್ತ ವಯಸ್ಕರ ಗರ್ಭಧಾರಣೆ ಪ್ರಕರಣಗಳು ಕಂಡು ಬರುತ್ತಿವೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ.ಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ:

ಮಕ್ಕಳ ಹಕ್ಕುಗಳ ವ್ಯವಸ್ಥೆಗಳ ಸಬಲೀಕರಣ ಸಮಾಲೋಚನಾ ಕಾರ್ಯಾಗಾರದಲ್ಲಿ ಯುನಿಸೆಫ್ ಯೋಜನೆ ಪ್ರಾದೇಶಿಕ ಸಂಯೋಜಕ ಡಾ. ಕೆ.ರಾಘವೇಂದ್ರ ಭಟ್, ಮಕ್ಕಳ ಹಕ್ಕುಗಳ ಅನುಷ್ಠಾನ ಮತ್ತು ಸಂರಕ್ಷಣಾ ವ್ಯವಸ್ಥೆಗಳ ಸಬಲೀಕರಣ ಮತ್ತು ಬಾಲ್ಯವಿವಾಹ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ತಡೆಗಟ್ಟುವಿಕೆ ಹಾಗೂ ಮಕ್ಕಳ ಜೀವನಚಕ್ರ ಯೋಜನೆಗಳ ಕುರಿತು ವಿಸ್ತೃತವಾಗಿ ಉಪನ್ಯಾಸ ಮಂಡಿಸಿದರು.

ಯುನಿಸೆಫ್ ಯೋಜನೆಯ ಸಂಯೋಜಕ ಹರೀಶ್ ಜೋಗಿ, ಮಕ್ಕಳ ರಕ್ಷಣಾ ವ್ಯವಸ್ಥೆಗಳ ಸಬಲೀಕರಣ ಯೋಜನೆ ಮತ್ತು ಪ್ರಬದ್ದತಾ ಮಾದರಿ ಸೂಚಕದ ಕುರಿತು ಉಪನ್ಯಾಸ ನೀಡಿದರು.

ಇನ್ನೊರ್ವ ಯೋಜನಾ ಸಂಯೋಜಕ ಸಿಸ್ಟರ್ ದುಲ್ಸಿನ್ ಕ್ರಾಸ್ಟಾ ನೇತೃತ್ವದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಯ ಬಲವರ್ಧನೆಗಾಗಿ ಮುಂದಿನ ಕ್ರಿಯಾ ಯೋಜನೆ ಸಿದ್ಧಪಡಿಸಲಾಯಿತು.

ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮುದುಕಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಧೀರ್ ಕುಮಾರ್ ಇದ್ದರು. ಶರಣಪ್ಪ ಜಿ.ನಿರೂಪಿಸಿ, ವಂದಿಸಿದರು.

ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ, ಸಕಾರೇತರ ಸಂಘ,ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟ್ಟ ಕೊಡವ ಸಮಾಜದಲ್ಲಿ ಕೈಲ್ ಪೋಳ್ದ್ ಒತ್ತೋರ್ಮೆ ಕೂಟ
ಮಡಿಕೇರಿಯಲ್ಲಿ ಅಂತರ ಕಾಲೇಜು ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ