ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಸಾಮಾನ್ಯ ಜನರ ಉತ್ಸವದಂತೆ ಆಚರಿಸಲು ಜಿಲ್ಲೆಯ ಸಂಘ-ಸಂಸ್ಥೆಗಳು, ಜನತೆಯ ಸಹಕಾರದಿಂದ ಯಶಸ್ವಿಗೊಳಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಇದೇ ವೇಳೆ ಸಭೆಗೆ ಆಗಮಿಸಿದ್ದ ಅನೇಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ವಿವಿಧ ಸಲಹೆಗಳನ್ನು ಪ್ರಸ್ತಾಪಿಸಿದರು. ಪ್ರಮುಖವಾಗಿ ಹಂಪಿ ಉತ್ಸವದಲ್ಲಿ ದಿ. ಎಂ.ಪಿ.ಪ್ರಕಾಶ್ ಅವರ ಹೆಸರಿನಲ್ಲಿ ಮುಖ್ಯ ವೇದಿಕೆ ನಿರ್ಮಿಸುವ ಮೂಲಕ ಅವರನ್ನು ಸ್ಮರಿಸುವ ಕೆಲಸ ಆಗಬೇಕಿದೆ ಎಂಬ ಸಲಹೆ ಬಂತು.
ಹೊಸಪೇಟೆ ನಗರದಲ್ಲಿ ವಡಕರಾಯ ದೇಗುಲದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯುತ್ತಿದ್ದ ವಸಂತ ವೈಭವ ಕಾರ್ಯಕ್ರಮವನ್ನು ಆಯೋಜಿಸಬೇಕು. ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಆಯೋಜಿಸುವ ಕವಿಗೋಷ್ಠಿಯಲ್ಲಿ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ಕವಿಗೋಷ್ಠಿಯನ್ನು ನಿರ್ವಹಿಸಬೇಕು. ಕವಿಗಳಿಗೆ ವೇದಿಕೆಯಲ್ಲಿ ಆಸನ ಕಲ್ಪಿಸಿ ಗೌರವದಿಂದ ನಡೆಸಿಕೊಳ್ಳಬೇಕು. ಹಂಪಿ ಉತ್ಸವದಲ್ಲಿ ಸ್ವಾಗತಿಸುವ ಮತ್ತು ಸನ್ಮಾನಿಸುವ ವೇಳೆ ಕನ್ನಡ ಶಾಲುಗಳನ್ನು ಬಳಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಂಪಿಯಲ್ಲಿ ಗಮನಾರ್ಹವಾದ ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ ಸ್ಥಳೀಯ ಭರತನಾಟ್ಯ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಲಹೆ ಬಂದಿತು.ರೈತರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ವಿಚಾರ ಸಂಕಿರಣ, ಜಾನುವಾರುಗಳ ಪ್ರದರ್ಶನ, ಸಿರಿಧಾನ್ಯ ಮಳಿಗೆಗಳನ್ನು ಆಚ್ಚುಕಟ್ಟಾಗಿ ಆಯೋಜಿಸಬೇಕು. ಯುವಕರಿಗೆ, ಕ್ರೀಡಾಪಟುಗಳಿಗೆ ಒಳಗೊಂಡು ಗ್ರಾಮೀಣ ಕ್ರೀಡೆಗಳು, ಕ್ರೀಡಾಪಟುಗಳಿಗೆ ಗೌರವ ಸನ್ಮಾನ ಮಾಡಬೇಕು. ಉತ್ಸವದಲ್ಲಿ ಕುಡಿಯುವ ನೀರು, ಸ್ವಚ್ಛತೆ, ಟ್ರಾಫಿಕ್ ಜಾಮ್ ಆಗದಂತೆ ಸಂಚಾರ ವ್ಯವಸ್ಥೆ, ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳ ನಿಯೋಜನೆ, ಮಹಿಳೆಯರಿಗೆ ಸೂಕ್ತ ರಕ್ಷಣೆ ಮತ್ತು ಶೌಚಾಲಯಗಳ ನಿರ್ಮಾಣ, ಆರೋಗ್ಯ ಹಿತದೃಷ್ಟಿಯಿಂದ ಆ್ಯಂಬ್ಯುಲೆನ್ಸ್ ಸೇವೆಗಳು ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರಗಳ ನಿರ್ಮಾಣ, ವಿಐಪಿ ಪಾಸ್‌ಗಳ ದುರ್ಬಳಕೆ ಕಡಿವಾಣ, ವಾಹನಗಳ ಪಾರ್ಕಿಂಗ್ ಸೂಕ್ತ ವ್ಯವಸ್ಥೆ, ಅಂಗವಿಕಲ ಕಲಾವಿದರಿಗೆ ವೇದಿಕೆಯಲ್ಲಿ ಅವಕಾಶ, ಹಂಪಿಯ ಸ್ಮಾರಕಗಳ ಬಳಿ ವಿದ್ಯುತ್ ದೀಪಾಲಂಕಾರ ಸೇರಿದಂತೆ ಅನೇಕ ಸಲಹೆಗಳನ್ನು ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೀಡಿದರು.
ಹೊಸಪೇಟೆ ಸಹಾಯಕ ಆಯುಕ್ತ ವಿವೇಕಾನಂದ, ತಹಸೀಲ್ದಾರ್ ಎಂ. ಶ್ರುತಿ, ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.