ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಸ್ಥರ ಸಹಕಾರ ಅಗತ್ಯ-ಡಾ. ಚಂದ್ರು ಲಮಾಣಿ

KannadaprabhaNewsNetwork | Published : Nov 6, 2023 12:49 AM

ಸಾರಾಂಶ

ಮುಂಡರಗಿ ಬಾಗೇವಾಡಿ ಗ್ರಾಮದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಮುಂಡರಗಿ ಅಡಿಯಲ್ಲಿ 20 ಲಕ್ಷ ರು.ಗಳ ಅನುದಾನಲ್ಲಿ ಸಿ.ಸಿ. ಗಟಾರ ನಿರ್ಮಾಣ, ವಿರೂಪಾಪುರ ತಾಂಡಾದಲ್ಲಿ 20 ಲಕ್ಷ ರು.ಗಳ ಅನುದಾನದಲ್ಲಿ ಸಿ.ಸಿ.ಗಟಾರ, ಮುಷ್ಠಿಕೊಪ್ಪ ಗ್ರಾಮದಲ್ಲಿ 30 ಲಕ್ಷ ಸಿ.ಸಿ.ಗಟಾರ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಡಾ. ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು.

ವಿರೂಪಾಪುರ ತಾಂಡಾ, ಮುಷ್ಠಿಕೊಪ್ಪ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಮುಂಡರಗಿ:ಮುಂಡರಗಿ ತಾಲೂಕಿನ ಬಾಗೇವಾಡಿ, ವಿರೂಪಾಪುರ ತಾಂಡಾ, ಮುಷ್ಠಿಕೊಪ್ಪ ಗ್ರಾಮಗಳಲ್ಲಿ ಚರಂಡಿ ಸಮಸ್ಯೆ ಇದ್ದು, ರಸ್ತೆಯ ಮೇಲೆ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯುಂಟಾಗುತ್ತಿರುವ ಬಗ್ಗೆ ಗ್ರಾಮಸ್ಥರು ಚುನಾವಣೆ ಪ್ರಚಾರಕ್ಕೆ ಬಂದಾಗಲೇ ತಿಳಿಸಿದ್ದರು. ಇದೀಗ ಆ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದು, ಗ್ರಾಮೀಣ ಭಾಗಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮಸ್ಥರ ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಶನಿವಾರ ಸಂಜೆ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಮುಂಡರಗಿ ಅಡಿಯಲ್ಲಿ 20 ಲಕ್ಷ ರು.ಗಳ ಅನುದಾನಲ್ಲಿ ಸಿ.ಸಿ. ಗಟಾರ ನಿರ್ಮಾಣ, ವಿರೂಪಾಪುರ ತಾಂಡಾದಲ್ಲಿ 20 ಲಕ್ಷ ರು.ಗಳ ಅನುದಾನದಲ್ಲಿ ಸಿ.ಸಿ.ಗಟಾರ, ಮುಷ್ಠಿಕೊಪ್ಪ ಗ್ರಾಮದಲ್ಲಿ 30 ಲಕ್ಷ ಸಿ.ಸಿ.ಗಟಾರ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನಿರಂತರವಾಗಿ ರಸ್ತೆ ಮೇಲೆ ನೀರು ಹರಿಯುವುದರಿಂದ ಸೊಳ್ಳೆಗಳು ಹುಟ್ಟಿಕೊಂಡು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಟಾರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ಎಲ್ಲ ಗ್ರಾಮಗಳಲ್ಲಿಯೂ ಗ್ರಾಮಸ್ಥರು ಗುತ್ತಿಗೆದಾರರಿಗೆ ಸಹಕಾರ ನೀಡುವ ಮೂಲಕ ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದರು. ಸರ್ಕಾರ ಈಗಾಗಲೇ ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಆದರೆ ಇದುವರೆಗೂ ಅದಕ್ಕೆ ಸಂಬಂಧಿಸಿದಂತೆ ರೈತರಿಗೆ ಯಾವುದೇ ರೀತಿಯ ಮಧ್ಯಂತರ ಪರಿಹಾರ ನೀಡಿಲ್ಲ. ಆದ್ದರಿಂದ ಸರ್ಕಾರ ತಕ್ಷಣವೇ ರೈತರಿಗೆ ಬರಬೇಕಾದ ಮಧ್ಯಂತರ ಬೆಳೆವಿಮೆ ಬಿಡುಗಡೆಯಾಗಬೇಕು. ಜೊತೆಗೆ ಆಯಾ ತಾಲೂಕುಗಳಿಗೆ ಬರಬೇಕಾದ ವಿಶೇಷ ಬರಗಾಲದ ಅನುದಾನಗಳನ್ನು ಸಹ ಬಿಡುಗಡೆ ಮಾಡಬೇಕು. ಅದಕ್ಕಾಗಿ ತಾವು ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು. ಸರ್ಕಾರದಿಂದ ರಾಜ್ಯದ ಬರಪೀಡಿತ ಪ್ರದೇಶಗಳಿಗೆ 324 ಕೋಟಿ ರು.ಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದು, 324 ಕೋಟಿಯಲ್ಲಿ ಪ್ರತಿ ಜಿಲ್ಲೆಗೆ ತಲಾ 10 ಕೋಟಿ ರು.ಗಳ ಪರಿಹಾರ ಸಿಗಲಿದೆ. ಬರಗಾಲದಿಂದಾಗಿ ನಮ್ಮ ಜಿಲ್ಲೆಯ ರೈತರಿಗೆ ಒಟ್ಟು ಹಾನಿಯಾಗಿದ್ದು 520 ಕೋಟಿ, ಆದರೆ ಸರ್ಕಾರ ನೀಡಿದ್ದು ಮಾತ್ರ ಕೇವಲ 10 ಕೋಟಿ ಮಾತ್ರ. ಇದರಿಂದ ರೈತರು ಏನು ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಸರ್ಕಾರ ತಕ್ಷಣವೇ ಹೆಚ್ಚಿನ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿ, ಶನಿವಾರ ಜಿಲ್ಲೆಗೆ ಆಗಮಿಸಿದ್ದ ಬಿಜೆಪಿ ಮುಖಂಡರ ಬರ ಅಧ್ಯಯನ ತಂಡದ ಮೂಲಕವೂ ಸಹ ಸರ್ಕಾರಕ್ಕೆ ಒತ್ತಯಿಸಲಾಗಿದೆ. ಸರ್ಕಾರದಿಂದ ಬೆರಣಿಕೆಯಷ್ಟು ರೈತರಿಗೆ ಮಧ್ಯಂತರ ಬೆಳೆವಿಮೆ ಜಮಾ ಆಗುತ್ತಿದ್ದು, ಅವರು ಬ್ಯಾಂಕಿನಲ್ಲಿ ಸಾಲ ಮಾಡಿದ್ದರ ಪರಿಣಾಮ ಬ್ಯಾಂಕಿನ ಅಧಿಕಾರಿಗಳು ಆ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದು, ಆ ರೀತಿ ಮಾಡದಂತೆ ಈಗಾಗಲೇ ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಸಹ ಮತ್ತೆ ಅದನ್ನೇ ಮಾಡುತ್ತಿರುವುದು ಕೇಳಿ ಬರುತ್ತಿದ್ದು, ಈ ಬಗ್ಗೆ ಇನ್ನಷ್ಟು ಕಟ್ಟುನಿಟ್ಟಾಗಿ ಸೂಚನೆ ನೀಡುವುದಾಗಿ ತಿಳಿಸಿದರು. ಅಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೀರಿನ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ನಮ್ಮ ಕ್ಷೇತ್ರದಲ್ಲಿನ ಮೂರು ತಾಲೂಕುಗಳಲ್ಲಿ ಜಾನುವಾರುಗಳಿಗೆ ಗೋಶಾಲೆಗಳನ್ನು ತೆರೆಯಲು ಸಹ ಒತ್ತಾಯಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಲಿಂಗರಾಜಗೌಡ ಪಾಟೀಲ, ಶ್ರೀನಿವಾಸ ಅಬ್ಬೀಗೇರಿ, ವಿನಾಯಕ ಕರಿಬಿಷ್ಠಿ, ಮಾರುತಿ ಬೂತಾಳ, ರವಿ ಬೂತಾಳ, ದೇವಪ್ಪ ಹಾಡಕರ್, ಸಿದ್ದಪ್ಪ ತಳವಾರ, ಚೆನ್ನಪ್ಪ ಗೋವಣಕೊಪ್ಪ, ಶಂಕ್ರಪ್ಪ ನಾಯಕ, ಬೆಣಕರಾಜ ಪೂಜಾರ, ಉಮೇಶ ದೇವರಮನಿ, ಶಿವಾನಂದ ಪೂಜಾರ, ಆನಂದ ಪೂಜಾರ, ರವಿ ಡಂಬಳ, ಬಸನಗೌಡ ಪಾಟೀಲ, ಹನಮಂತಪ್ಪ ಗಡಾದಾರ, ಕೃಷ್ಣಾ ಬನ್ನಿಕೊಪ್ಪ, ಸಂಗನಗೌಡ ಪಾಟೀಲ, ಪರಸಪ್ಪ ಕವಲೂರು, ಸಣ್ಣಯಂಕಪ್ಪ ರಂಗಣ್ಣವರ, ಲಿಂಗನಗೌಡ ಪಾಟೀಲ, ತಿಮ್ಮಣ್ಣ ಉಪ್ಪಾರ, ಕೊಪ್ಪಣ್ಣ ಕೊಪ್ಪಣ್ಣವರ, ಎಇಇ ಮಂಜುನಾಥ ಕಲಬುರ್ಗಿ, ಜೆಇ ಶಿಲ್ಪಾ ಮುಂದಿನಮನಿ, ಜೆಇ ನಾಗರಾಜ ಮಠದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article