ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಷ್ಟ್ರೀಯ ಬ್ಯಾಂಕುಗಳು ಸುಲಭವಾಗಿ ಸಾಲ ಸೌಲಭ್ಯ ನೀಡುವುದಿಲ್ಲ. ಇಂಥ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದ ಆರ್ಥಿಕ ಸಂಸ್ಥೆಗಳು ಇಲ್ಲದಿದ್ದರೆ ರೈತರು ಲೇವಾದೇವಿಗಾರರ ಬಳಿ ಶೇ.3, 4, 5 ಮತ್ತು ಅದಕ್ಕಿಂತ ಹೆಚ್ಚಿನ ಬಡ್ಡಿಗೆ ಸಾಲ ಮಾಡಿ, ಮರಳಿಸಲಾಗದೇ ಹೊಲಮನೆ ಮಾರುವ ಪರಿಸ್ಥಿತಿ ಇರುತ್ತಿತ್ತು. ಸಹಕಾರಿ ಕ್ಷೇತ್ರ ದೇಶದ ಅಭಿವೃದ್ಧಿಯ ಹೆಬ್ಬಾಗಿಲು ಎಂದು ಎಸ್.ಆರ್. ಪಾಟೀಲ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.ನವನಗರದಲ್ಲಿ ಬಾಪೂಜಿ ಸೌಹಾರ್ದ ಸಂಘವು ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ ಆಪ್ ಸೊಸೈಟಿ ಆದ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಮಾಜದಲ್ಲಿರುವ ಎಲ್ಲ ವರ್ಗಗಳು ಇವತ್ತು ಆರ್ಥಿಕವಾಗಿ ಸದೃಢವಾಗುತ್ತಿದ್ದು, ಅದಕ್ಕೆ ಸಹಕಾರಿ ಕ್ಷೇತ್ರ ಕಾರಣವಾಗಿದೆ. ರಾಷ್ಟ್ರೀಯ ಬ್ಯಾಂಕುಗಳಲ್ಲಿ ಸಾಲ ಸಿಗದೇ ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲರಿಗೂ ಸಹಕಾರಿ ಕ್ಷೇತ್ರದ ಸಂಸ್ಥೆಗಳು ನೆರವಿಗೆ ನಿಲ್ಲುತ್ತವೆ ಎಂದು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಾಲ ಕೇಳಲು ಹೋದರೆ ಟ್ರಕ್ ಗಟ್ಟಲೇ ಕಾಗದ ಪತ್ರ ಕೇಳುತ್ತಾರೆ. ಅಷ್ಟೂ ಒದಗಿಸಿದರೆ ನಾಲ್ಕೈದು ತಿಂಗಳ ಬಳಿಕ ನಿಮ್ಮ ಸಾಲದ ಅರ್ಜಿ ತಿರಸ್ಕಾರವಾಗಿದೆ ಎನ್ನುತ್ತಾರೆ. ಆಗ ಜನರು ಏನು ಮಾಡಬೇಕು? ಆದರೆ, ಸಹಕಾರಿ ಸಂಸ್ಥೆಗಳು ಕಡುಬಡವರಿಂದ ಹಿಡಿದು ಕಾರ್ಖಾನೆ ಮಾಲೀಕರವರೆಗೂ ಎಲ್ಲರಿಗೂ ಅವರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಬೆಳೆಯಲು ಅವಕಾಶ ಕೊಟ್ಟು, ತಮ್ಮ ಸಂಸ್ಥೆಯನ್ನೂ ಬೆಳೆಸುತ್ತಾರೆ ಎಂದು ಹೆಮ್ಮೆಯಿಂದ ಹೇಳಿದರು.ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚು ಸಕ್ಕರೆ ಕಾರ್ಖಾನೆ ಸ್ಥಾಪನೆ ಆಗಿದ್ದರಿಂದ ರೈತರು ಹೆಚ್ಚೆಚ್ಚು ಕಬ್ಬು ಬೆಳೆದು ಆರ್ಥಿಕವಾಗಿ ಸದೃಢವಾಗಿದ್ದಾರೆ. ಹಿಂದೆ ಸೈಕಲ್ ಕೂಡ ಇಲ್ಲದಿದ್ದ ಕುಟುಂಬದಲ್ಲಿ ಇಂದು ಮೂರ್ನಾಲ್ಕು ಬೈಕ್, ಒಂದೆರಡು ಕಾರು ಇರುವುದನ್ನು ನೋಡಿದ್ದೇವೆ. ಸಕ್ಕರೆ ಕಾರ್ಖಾನೆಗಳು ಜೀವಂತವಾಗಿ ಇರುವುದಕ್ಕೆ ಕಾರಣವೇ ಸಹಕಾರಿ ಆರ್ಥಿಕ ಸಂಸ್ಥೆಗಳು. ಕಾರ್ಖಾನೆಗಳು ಸದೃಢವಾಗಿದ್ದರಿಂದ ರೈತರು ಆರ್ಥಿಕವಾಗಿ ಬೆಳೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಸಹಕಾರಿ ಕ್ಷೇತ್ರ. ಇಂತಹ ಕಾರ್ಖಾನೆಗಳು, ರೈತರಿಗೆ ಸಾಲ ಕೊಡಲು ಎಡತಾಕಿಸುವ ರಾಷ್ಟ್ರೀಕೃತ ಬ್ಯಾಂಕುಗಳು ಶ್ರೀಮಂತರು, ಉದ್ಯಮಿಗಳಿಗೆ ತಕ್ಷಣ ಸಾಲ ನೀಡುತ್ತವೆ. ₹10 ಲಕ್ಷ ಕೋಟಿ ಸಾಲ ಪಡೆದು ವಿದೇಶಕ್ಕೆ ಓಡಿ ಹೋದವರಿದ್ದಾರೆ ಎಂದು ಹೇಳುತ್ತ ವಿದೇಶಕ್ಕೆ ಪರಾರಿಯಾಗಿದುವ ಉದ್ಯಮಿಗಳ ಹೆಸರು ಉಲ್ಲೇಖಿಸಿದರು.
ಗೌಪ್ಯ ಸಭೆಯೂ ಇಲ್ಲ, ಸುಡಗಾಡು ಇಲ್ಲ: ಎಸ್.ಆರ್. ಪಾಟೀಲ ಅವರ ಬ್ಯಾಂಕಿನ ಕಾರ್ಯಕ್ರಮಕ್ಕೆ ಯತ್ನಾಳ ಬಂದರು ಎಂದು ಕೆಲವರು ಕೇಳುತ್ತಾರೆ. ಆದರೆ, ಇದರಲ್ಲಿ ರಾಜಕೀಯ ಏನಿದೆ ? ನಾವಿಬ್ಬರೂ ಸಹಕಾರಿ ರಂಗದಲ್ಲಿ ಇದ್ದವರು. ಸಮಾನ ಮನಸ್ಕರು. ನಮ್ಮ ಕಾರ್ಯಕ್ರಮಕ್ಕೆ ಅವರು, ಅವರ ಕಾರ್ಯಕ್ರಮಕ್ಕೆ ನಾವು ಬರುತ್ತೇವೆ. ಅದರಲ್ಲಿ ವಿಶೇಷತೆ ಇಲ್ಲ. ಇದನ್ನೇ ಮಾಧ್ಯಮಗಳಲ್ಲಿ ಎಸ್.ಆರ್.ಪಾಟೀಲ, ಯತ್ನಾಳ ಗೌಪ್ಯ ಸಭೆ, ಸಭೆಯಲ್ಲಿ ಎಚ್.ವೈ. ಮೇಟಿ, ಸರನಾಯಕ ಭಾಗಿ. ಪ್ರಸ್ತುತ ರಾಜಕೀಯದ ಚರ್ಚೆ ಎನ್ನುತ್ತಾರೆ. ಇಲ್ಲೇನಾದರೂ ಗೌಪ್ಯವಾಗಿ ಇದ್ದೇವಾ? ಗೌಪ್ಯವೂ ಇಲ್ಲ, ಸುಡುಗಾಡು ಇಲ್ಲ ಎಂದು ಯತ್ನಾಳ ಹಾಸ್ಯ ಚಟಾಕಿ ಹಾರಿಸಿದರು.ಯತ್ನಾಳ ಅವರು, ನಾನು ಯಾವುದೇ ಸಂಸ್ಥೆ ಆರಂಭಿಸಿದರೂ ಅವಳಿ ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ಮಾಡಿದ್ದೇವೆ. ನಮ್ಮ ಸಕ್ಕರೆ ಕಾರ್ಖಾನೆ, ಮೆಡಿಕಲ್ ಕಾಲೇಜು, ಸಹಕಾರಿ ಸಂಸ್ಥೆಗಳು ಎಲ್ಲವೂ ಸಹ ಎರಡೂ ಜಿಲ್ಲೆಗೆ ಅನುಕೂಲ ಆಗಿವೆ. ಬಾಡಗಂಡಿ ಗ್ರಾಮದಂತೆ ವಿಜಯಪುರದಲ್ಲಿ ಯತ್ನಾಳ ಅವರು ಮೆಡಿಕಲ್ ಕಾಲೇಜು ಆರಂಭಿಸಬೇಕು. ನನ್ನ ಕಡೆಗಂತೂ ಗೌಪ್ಯ ಸಭೆಯೂ ಇಲ್ಲ, ಏನೂ ಇಲ್ಲ. ನನ್ನದೇನಿದ್ದರೂ ನೇರಾನೇರ. ನಮ್ಮ ಸಮೂಹ ಸಂಸ್ಥೆಗಳು ಜಾತ್ಯತೀತ, ಧರ್ಮಾತೀತ ಮತ್ತು ಪಕ್ಷಾತೀತ. ಬಾಪೂಜಿ ಹಾಗೂ ಸಿದ್ದಸಿರಿ ನಾಡಿನ ಎರಡು ಕಣ್ಣುಗಳಾಗಿ ಬೆಳೆಯುತ್ತವೆ.- ಎಸ್.ಆರ್. ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಎಸ್.ಆರ್.ಪಾಟೀಲ ಸಮೂಹ ಸಂಸ್ಥೆ