ಸಹಕಾರ ಸಂಘಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸದಸ್ಯರಿಗೆ ಸನ್ಮಾನ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಹಕಾರಿ ಕ್ಷೇತ್ರ ಜನಸಾಮಾನ್ಯರ ನಂಬಿಕೆ, ವಿಶ್ವಾಸಕ್ಕೆ ಅರ್ಹವಾಗಿರಬೇಕು. ಸೊಸೈಟಿ ವಹಿವಾಟಿನಲ್ಲಿ ನಿರ್ದೇಶಕರು ಸೇವಾ ಗುಣ ಹಾಗೂ ನೇರ ನುಡಿ ಹೊಂದಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಸಹಕಾರ ಸಂಘಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸದಸ್ಯರಿಗೆ ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳ 116 ಸ್ಥಾನಗಳ ಪೈಕಿ 96 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತರು ಜಯಗಳಿಸಿದ್ದಾರೆ. ಈ ವಿಜಯ ಮುಂದಿನ ಜಿಪಂ ಹಾಗೂ ತಾಪಂ ಚುನಾವಣೆಗೆ ನಾಂದಿಯಾಗಲಿದೆ ಎಂದರು.ಸಹಕಾರ ಸಂಘಗಳು ರೈತರ ಶ್ರೇಯೋಭಿವೃದ್ಧಿಗೆ ದುಡಿಯುವ ನಿಟ್ಟಿನಲ್ಲಿ ಪರಸ್ಪರ ಗಟ್ಟಿಯಾಗಬೇಕು. ತಪ್ಪು ತಿಳುವಳಿಕೆ ದೂರವಾಗಿಸಿ ಜನರ ಸೇವೆಗೆ ಸದಸ್ಯರು ಮುಂದಾದರೆ ಸಂಘ ಉನ್ನತ ಹಾದಿಯಲ್ಲಿ ಸಾಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಪ್ರತಿ ಸದಸ್ಯರಲ್ಲಿ ಪರಸ್ಪರ ಹೊಂದಾಣಿಕೆ ಅತ್ಯಗತ್ಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಸೊಸೈಟಿಗಳಲ್ಲಿ ಅಧಿಕಾರ ಸಿಕ್ಕರೂ ಅಥವಾ ಸಿಗ ದಿದ್ದರೂ ಹೊಂದಾಣಿಕೆಗೆ ಕೊರತೆಯಿರಬಾರದು. ಭವಿಷ್ಯದಲ್ಲಿ ಈ ಹೊಂದಾಣಿಕೆ ಅನೇಕ ಚುನಾವಣೆಗಳನ್ನು ಎದುರಿಸುವ ಹಿನ್ನೆಲೆಯಲ್ಲಿ ಒಗ್ಗಟ್ಟಾಗಿರಬೇಕು. ಯಾವುದೇ ಚುನಾವಣೆಗಳಲ್ಲಿ ಪಕ್ಷ ಸೂಚಿಸುವ ಅಭ್ಯರ್ಥಿಗಳ ಪರವಾಗಿ ಒಪ್ಪಿ ಸಂಘಟನೆ ಯಲ್ಲಿ ತೊಡಗಬೇಕು ಎಂದರು.ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹5 ಲಕ್ಷ ಘೋಷಿಸಿತ್ತು. ಆದರೆ, ಕೇವಲ ₹3 ಲಕ್ಷವನ್ನು ಮಾತ್ರ ನೀಡಿವೆ. ಮಧ್ಯಮ ಹಾಗೂ ದೀರ್ಘಾವಧಿ ಸಾಲ ₹15 ಲಕ್ಷ ಗಳಿಗೆ ಏರಿಸಿದ್ದನ್ನು ಕೊಡಲು ಸಾಧ್ಯವಾಗಿಲ್ಲ. ಇಷ್ಟೆಲ್ಲಾ ಗಮನಿಸಿದರೆ ರಾಜ್ಯ ಸರ್ಕಾರ ಕೇವಲ ಸುಳ್ಳಿನ ಬಜೆಟ್ ಘೋಷಿಸಿ ಜನತೆಗೆ ಮಂಕುಬೂದಿ ಎರಚುತ್ತಿದೆ ಎಂದು ದೂಷಿಸಿದರು.
ರೈತರಿಗೆ ಕೃಷಿ ಬದುಕು ಕಷ್ಟಸಾಧ್ಯವಾದರೂ ಉಳುವ ಭೂಮಿಯನ್ನು ಕೈಬಿಟ್ಟಿಲ್ಲ. ಹೀಗಾಗಿ ಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸಿ ಸಹಕರಿಸಬೇಕು. ಗ್ರಾಮಗಳಿಗೆ ಸಹಕಾರ ಸಂಘಗಳು ಜೀವಾಳ. ರೈತರ ಬೆವರಿನ ಹನಿ ಕೂಡಿರುವ ಸೊಸೈಟಿ ಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಆಡಳಿತ ಮಂಡಳಿಯದು. ತಾರತಮ್ಯವಿಲ್ಲದೇ ಕೆಲಸ ಮಾಡಬೇಕು ಎಂದು ಸೂಚಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್‌ಶೆಟ್ಟಿ ಮಾತನಾಡಿ, ಸೊಸೈಟಿಗಳ ಅಭೂತಪೂರ್ವ ಗೆಲುವು ಮುಂದೆ ಎದುರಾಗುವ ಚುನಾವಣೆಗಳಿಗೆ ಮುನ್ಸೂಚನೆಯಾಗಿದೆ. ಆಡಳಿತ ಪಡೆದಿರುವ ಸದಸ್ಯರು ಮುಂದಿನ ಚುನಾವಣೆಗೆ ಪಕ್ಷಕ್ಕಾಗಿ ದುಡಿಯಬೇಕು. ಸೊಸೈಟಿಗಳ ಉತ್ತಮ ಕೆಲಸಗಳೇ ಪಕ್ಷಕ್ಕೆ ಒಳಿತಾಗಲಿದೆ ಎಂದು ತಿಳಿಸಿದರು.ಚಿಕ್ಕಮಗಳೂರು ಗ್ರಾಮಾಂತರ ಮಂಡಳ ಅಧ್ಯಕ್ಷ ವಿಜಯ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಮುಗುಳುವಳ್ಳಿ ನಿರಂಜನ್, ಪಿಸಿಎಲ್‌ಡಿ ಬ್ಯಾಂಕ್ ನಿರ್ದೇಶಕ ಈಶ್ವರಹಳ್ಳಿ ಮಹೇಶ್, ಬೀಕನ ಹಳ್ಳಿ ಸೊಸೈಟಿ ಅಧ್ಯಕ್ಷ ಸೋಮಶೇಖರ್, ತಾಪಂ ಮಾಜಿ ಸದಸ್ಯ ಆನಂದ್‌ನಾಯ್ಕ್, ಕಡೂರು ಎಪಿಎಂಸಿ ಮಾಜಿ ಅಧ್ಯಕ್ಷ ರವಿ ಚಿಕ್ಕದೇವನೂರು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಜೀವ್, ಪ್ರಕಾಶ್, ಮುಖಂಡ ಬಸವರಾಜ್ ಉಪಸ್ಥಿತರಿದ್ದರು.
22 ಕೆಸಿಕೆಎಂ 2ಸಹಕಾರ ಸಂಘಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸದಸ್ಯರಿಗೆ ಚಿಕ್ಕಮಗಳೂರಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭವನ್ನು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು. ಎಸ್.ಎಲ್. ಭೋಜೇಗೌಡ, ದೇವರಾಜ್ ಶೆಟ್ಟಿ ಇದ್ದರು.