ಸಹಕಾರ ಸಂಘಗಳು ರೈತರ ಜೀವನಾಡಿ: ಮಾಲಿಪಾಟೀಲ್

KannadaprabhaNewsNetwork |  
Published : Sep 23, 2026, 01:15 AM IST
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ 2025-26ನೇ ಸಾಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಘದ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವಿದೆ. ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆಯಾ ವ್ಯಾಪ್ತಿಯಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಅವರ ಜೀವನಾಡಿಯಾಗಿವೆ ಎಂದು ಸಹಕಾರ ಸಂಘದ ಅಧ್ಯಕ್ಷ ಶರಣಪ್ಪಗೌಡ ಮಾಲಿ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಮ್ಮ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವಿದೆ. ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆಯಾ ವ್ಯಾಪ್ತಿಯಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಅವರ ಜೀವನಾಡಿಯಾಗಿವೆ ಎಂದು ಸಹಕಾರ ಸಂಘದ ಅಧ್ಯಕ್ಷ ಶರಣಪ್ಪಗೌಡ ಮಾಲಿ ಪಾಟೀಲ್ ಹೇಳಿದರು.

ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ನಮ್ಮ ಸಂಘವು ರೈತರಿಗೆ ₹2.28 ಕೋಟಿ ಬೆಳೆ ಸಾಲ ನೀಡಿದೆ. ರೈತರು ಕೂಡ ಪ್ರಾಮಾಣಿಕವಾಗಿ ಸಕಾಲದಲ್ಲಿ ಎಲ್ಲರೂ ಸಾಲ ಮರು ಪಾವತಿಸಿದ್ದಾರೆ, ಸಂಘಕ್ಕೆ ₹7 ಲಕ್ಷ ಲಾಭ ಬಂದಿದೆ ಎಂದು ತಿಳಿಸಿದರು.

ಸಂಘದಿಂದ ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ₹2.23 ಕೋಟಿ ಸಾಲ ನೀಡಿ, ಅವರ ವ್ಯಾಪಾರ ಅಭಿವೃದ್ಧಿಗೆ ಸಹಕರಿಸಲಾಗಿದೆ. ಅಲ್ಲದೆ, ಸಂಘದಲ್ಲಿ ಗ್ರಾಹಕರಿಂದ ₹1.10 ಕೋಟಿ ಮುದ್ದತ್ ಠೇವಣಿ ಹಣ ಸಂಗ್ರಹಿಸಲಾಗಿದೆ. ಸಂಘದ ಆಡಳಿತ ಕಚೇರಿ ನವೀಕರಣಗೊಳಿಸಲಾಗಿದೆ. ನ್ಯಾಯಬೆಲೆ ಅಂಗಡಿ ಮೂಲಕ ಅರ್ಹ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ವಿತರಣೆ ಮಾಡಲಾಗುತ್ತಿದೆ ಎಂದರು.

ಈ ವರ್ಷ ಮುಂಗಾರುಮಳೆ ದುರ್ಬಲವಾಗಿರುವುದರಿಂದ ರೈತಾಪಿವರ್ಗ ಸಂಕಷ್ಟದಲ್ಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಂಘದಿಂದ ಹೆಚ್ಚಿನ ಆರ್ಥಿಕ ಸಾಲ ನಿರೀಕ್ಷೆಯಲ್ಲಿದ್ದಾರೆ. ನಾವು ಆಡಳಿತ ಮಂಡಳಿಯವರು ರೈತರ ನಿಯೋಗದೊಂದಿಗೆ ಕೆವೈಡಿಸಿಸಿ ಕೇಂದ್ರ ಬ್ಯಾಂಕ್ ಕಲಬುರಗಿ ಅಧಿಕಾರಿಗಳನ್ನು ಭೇಟಿಯಾಗಿ ಸಂಘಕ್ಕೆ ಹೆಚ್ಚಿನ ಆರ್ಥಿಕ ಸಹಾಯ ನೀಡಲು ಮನವಿ ಮಾಡುತ್ತೇವೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೈತರಿಗೆ ಹಾಗೂ ಮಹಿಳೆಯರಿಗೆ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ಸಾಲ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕೆಓಎಫ್ ಅಧ್ಯಕ್ಷ ಶರಣಪ್ಪ ಸೋಮಣ್ಣೋರ ಮಾತನಾಡಿ, ಎಲ್ಲರ ಸಹಕಾರದಿಂದ ಸಂಘವೂ ಉತ್ತಮ ಆರ್ಥಿಕ ವಹಿವಾಟು ಮಾಡುವ ಮೂಲಕ ಜಿಲ್ಲೆಯಲ್ಲಿಯೇ ಅತ್ಯತ್ತಮ ಸಂಘವಾಗಿ ಪ್ರಗತಿಯತ್ತ ಸಾಗುತ್ತಿದೆ, ಸಂಘವೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ, ವ್ಯಾಪಾರಸ್ಥರಿಗೆ, ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮಾಡಬೇಕು, ಅಂದಾಗ ಮಾತ್ರ ಸಂಘದ ಸೌಲಭ್ಯಗಳು ಎಲ್ಲರಿಗೂ ತಲುಪಿ ಸಂಘದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಸಂಘದ ನಿರ್ದೇಶಕ ಅಮೀನರಡ್ಡಿ ಬಿಳ್ಹಾರ ಮಾತನಾಡಿ, ಗ್ರಾಮ ಹಾಗೂ ಸುತ್ತಮುತ್ತಲಿನ ಆರ್ಥಿಕ ಸಂಪನ್ಮೂಲ ವ್ಯಕ್ತಿಗಳು ಸಂಘದಲ್ಲಿ ತಮ್ಮ ಹಣ ಜಮಾ ಮಾಡಬೇಕು, ಇದರಿಂದ ಸಂಘದ ಆರ್ಥಿಕ ಚಟುವಟಿಕೆಗಳ ವೇಗ ಹೆಚ್ಚಿಸಲು ಅನುಕೂಲವಾಗುತ್ತದೆ ಎಂದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವಕುಮಾರ ಪುಟಗಿ, ಸಂಘದ ವಾರ್ಷಿಕ ವರಧಿ ಲೆಕ್ಕಪತ್ರ ವಾಚಿಸಿದರು.

ಸಮಾರಂಭದಲ್ಲಿ ಸಂಘದಲ್ಲಿ ಠೇವಣಿ ಮಾಡಿದ ಗ್ರಾಹಕರನ್ನು, ಪಿಗ್ಮಿದಾರರನ್ನು, ಮಹಿಳೆಯರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಖಂಡಪ್ಪನೋರ, ಮಾಜಿ ಅಧ್ಯಕ್ಷ ಮಹಿಪಾಲರಡ್ಡಿ ಪಾಟೀಲ್, ನಿರ್ದೇಶಕರಾದ ಬೋಜಣ್ಣಗೌಡ ಯಡ್ಡಳ್ಳಿ, ಬಸವರಾಜ ಕೋಡ್ಲಾ, ಸಾಬರಡ್ಡಿ ತಮ್ಮಣ್ಣೋರ, ನರಸಪ್ಪ ಇದ್ಲಿ, ಸಾಯಿಬಣ್ಣ ಬೊಳೇರ್, ಅಮೃತರಡ್ಡಿ ಪಾಟೀಲ್, ಶರಣಪ್ಪ ಶಂಕ್ರಪ್ಪನೋರ, ಯಲ್ಲಮ್ಮ ತಮ್ಮಣ್ಣೋರ, ಭೀಮವ್ವ ಸಮನಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾಬಣ್ಣ ಯಾದಗಿರಿ ನಿರೂಪಿಸಿ, ಸ್ವಾಗತಿಸಿದರು. ಅಲ್ಲಾಭಕ್ಷ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿ.ಎಫ್: ಕಾರ್ಮಿಕರ ವೇತನ‌ಮಿತಿ ₹ 25,000ಕ್ಕೆ ಹೆಚ್ಚಳ: ಪಿಎಫ್ ಆಯುಕ್ತ ಎಂ. ಸುಬ್ರಹ್ಮಣ್ಯಂ
ವಿದ್ಯಾರ್ಥಿಗಳು ಶಿಸ್ತು ಅಳವಡಿಸಿ: ಡಾ. ಕಣ್ಣೂರ್