ಸಹಕಾರಿ ಸಂಸ್ಥೆಗಳು ಸಾಮಾಜಿಕ-ಆರ್ಥಿಕ ರಚನೆಯ ಅವಿಭಾಜ್ಯ ಅಂಗ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಸಹಕಾರಿ ಸಂಸ್ಥೆಗಳು ದಶಕಗಳಿಂದ ಭಾರತದ ಸಾಮಾಜಿಕ ಮತ್ತು ಆರ್ಥಿಕ ರಚನೆಯ ಅವಿಭಾಜ್ಯ ಅಂಗವಾಗಿವೆ. ಭಾರತದ ಸಹಕಾರಿ ವ್ಯವಸ್ಥೆ ಇಡೀ ವಿಶ್ವದಲ್ಲಿಯೇ ದೊಡ್ಡದಾಗಿದೆ ಮತ್ತು ಕೃಷಿ ಸಂಬಂಧಿತ ವಲಯದ ಪ್ರಬಲ ಆಧಾರ ಸ್ತಂಭವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಕನ್ನಡಪ್ರಭ ವಾರ್ತೆ ಕಲಘಟಗಿ

ಸಹಕಾರಿ ಸಂಸ್ಥೆಗಳು ದಶಕಗಳಿಂದ ಭಾರತದ ಸಾಮಾಜಿಕ ಮತ್ತು ಆರ್ಥಿಕ ರಚನೆಯ ಅವಿಭಾಜ್ಯ ಅಂಗವಾಗಿವೆ. ಭಾರತದ ಸಹಕಾರಿ ವ್ಯವಸ್ಥೆ ಇಡೀ ವಿಶ್ವದಲ್ಲಿಯೇ ದೊಡ್ಡದಾಗಿದೆ ಮತ್ತು ಕೃಷಿ ಸಂಬಂಧಿತ ವಲಯದ ಪ್ರಬಲ ಆಧಾರ ಸ್ತಂಭವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಪಟ್ಟಣದ ಹನ್ನೆರಡೆತ್ತಿನ ಮಠದ ಹತ್ತಿರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ತೋಟಗಾರಿಕಾ ಮಹಾಮಂಡಳ ಹಾಗೂ ಕರ್ನಾಟಕ ಸೆಂಟ್ರಲ್ ಕೋ ಅಪರೇಟಿವ್ ಬ್ಯಾಂಕ್, ಧಾರವಾಡ ಮತ್ತು ವಿವಿಧ ಸಹಕಾರ ಸಂಘ, ಹಾಲು ಒಕ್ಕೂಟಗಳ ಆಶ್ರಯದಲ್ಲಿ ಆಯೋಜಿಸಿದ್ದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಂಘಕ್ಕೆ ಅವಿಭಜಿತ ಧಾರವಾಡ ಜಿಲ್ಲೆಯ ಸಹಕಾರಿ ರಂಗದ ಪಿತಾಮಹ ಸಿದ್ಧನಗೌಡ ರಾಮನಗೌಡರ ಕೊಡುಗೆ ಅಪಾರವಾಗಿದೆ. ದೇಶದಲ್ಲಿ 9 ಲಕ್ಷ ಸಹಕಾರ ಸಂಸ್ಥೆಗಳಿವೆ. ಸಹಕಾರ ಸಂಸ್ಥೆಗಳು ಬಡತನವನ್ನು ನಿವಾರಿಸಲು, ಉದ್ಯೋಗವನ್ನು ಸೃಷ್ಟಿಸಲು ಮತ್ತು ಸಮಾನ ಆರ್ಥಿಕ ಬೆಳವಣಿಗೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಹಕಾರಿ ಸಂಘಗಳಿಂದ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಿ, ಉದ್ಯೋಗವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಗಮದ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಉಪಾಧ್ಯಕ್ಷ ಕೆ.ಕೆ. ಮಹೇಂದ್ರ ಪ್ರಸಾದಗೌಡ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡದ ವೃತ್ತಿಪರ ನಿರ್ದೇಶಕ ಬಾಪುಗೌಡ ಡಿ. ಪಾಟೀಲ, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಲಿಂಗರಾಜ್ ಚಪ್ಪರದಳ್ಳಿ, ಕರ್ನಾಟಕ ರಾಜ್ಯ ಗ್ರಾಹಕ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಪಿ. ಪಾಟೀಲ್, ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ ಡಾ. ಬಿ.ಡಿ. ಭೂಕಾಂತ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಉಪಾಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ್, ಧಾರವಾಡ ಜಿಲ್ಲಾ ಸೌಹಾರ್ದ ಸಹಕಾರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಗಮದ ನಿರ್ದೇಶಕ ಡಾ. ಸಂಜಯ ಪಂ. ಹೊಸಮಠ, ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಶಂಕರ ವಿ. ಮುಗದ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಸಹಕಾರ ಇಲಾಖೆಯ ಅಧಿಕಾರಿಗಳು ವೇದಿಕೆಯಲ್ಲಿದ್ದರು.

ಧಾರವಾಡ ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮಂಜುನಾಥಗೌಡ ಮುರಳ್ಳಿ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ. ನಂಜನಗೌಡ ಪ್ರಾಸ್ತವಿಕವಾಗಿ ಮಾತನಾಡಿದರು. ಗೌರಿ ಮಟ್ಟಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೇಷ್ಠ ಸಹಕಾರಿಗಳನ್ನು ಸನ್ಮಾನಿಸಲಾಯಿತು. ಸಹಕಾರ ಸಪ್ತಾಹದ ಅಂಗವಾಗಿ ಪಟ್ಟಣದ ಆಂಜನೇಯ ಸರ್ಕಲ್‌ನಿಂದ ಟ್ರ್ಯಾಕ್ಟರ ಹಾಗೂ ಡೊಳ್ಳು, ಜಗ್ಗಲಿಗೆಗಳೊಂದಿಗೆ ಮೆರವಣಿಗೆ ಜರುಗಿತು. ಇದೇವೇಳೆ ಸಹಕಾರ ವಿಶೇಷ ವಾರಪತ್ರಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಸಹಕಾರಿ ಕ್ಷೇತ್ರಗಳ ಪ್ರತಿನಿಧಿಗಳು, ನಿರ್ದೇಶಕರು, ಸದಸ್ಯರು ಭಾಗವಹಿಸಿದ್ದರು.

Share this article