ಸಮನ್ವಯ ಸಾಧಿಸಿ ಅಭಿವೃದ್ಧಿಗೆ ವೇಗ ನೀಡಿ

KannadaprabhaNewsNetwork |  
Published : Dec 06, 2024, 09:01 AM IST
5ಡಿಡಬ್ಲೂಡಿ5,6ಧಾರವಾಡ ಜಿಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗುರುವಾರ ಪ್ರಗತಿ ಪರಿಶೀಲನೆ ಮಾಡಿದ ಜಿಲ್ಲೆಯ ನೂತನ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ ವಿ..  | Kannada Prabha

ಸಾರಾಂಶ

ಬೆಳೆಹಾನಿ ಬಗ್ಗೆ ಸಮೀಕ್ಷೆ ಮಾಡುವಾಗ ಸಣ್ಣ ಮತ್ತು ಮಧ್ಯಮ ರೈತರಿಗೆ ಆದ್ಯತೆ ನೀಡಬೇಕು. ಧ್ವನಿ ಇಲ್ಲದವರಿಗೆ ನಾವು ಶಕ್ತಿ ತುಂಬಬೇಕು. ಅರ್ಹರಿಗೆ, ಬಡವರಿಗೆ ಸರ್ಕಾರದ ಸವಲತ್ತು ನಿಯಮಾನುಸಾರ, ಪಾರದರ್ಶಕವಾಗಿ ತಲುಪಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ.

ಧಾರವಾಡ:

ಸರ್ಕಾರದ ಅನುದಾನ ಬಳಕೆಯಾಗದೇ ಉಳಿದರೆ ಸಂಬಂಧಿತ ಅಧಿಕಾರಿಯನ್ನು ಜವಾಬ್ದಾರಿಗೊಳಿಸಿ ಕ್ರಮ ಜರುಗಿಸುವುದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ ಪ್ರಸಾತ್ ಮನೋಹರ ವಿ. ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಮಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಇಲಾಖೆ, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ನಿರಂತರ ಇರಬೇಕು. ಇಲಾಖೆ ಕೆಲಸ ಕಾರ್ಯಗಳಲ್ಲಿ ಶಿಸ್ತು ಬದ್ಧತೆ ಇರಬೇಕು. ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ಕ್ಷೇತ್ರ ಮಟ್ಟದ ಸಿಬ್ಬಂದಿಗಳೊಂದಿಗೆ ನೇರ ಸಂಪರ್ಕವಿದ್ದು, ಕಾಲಕಾಲಕ್ಕೆ ಕಾಮಗಾರಿ, ಯೋಜನೆಗಳ ಪ್ರಗತಿ ಪರಿಶೀಲಿಸಿ, ಅದರ ಪ್ರಾಥಮಿಕ ಮಾಹಿತಿ ಹೊಂದಿರಬೇಕು ಎಂದರು.

ಬೆಳೆಹಾನಿ ಬಗ್ಗೆ ಸಮೀಕ್ಷೆ ಮಾಡುವಾಗ ಸಣ್ಣ ಮತ್ತು ಮಧ್ಯಮ ರೈತರಿಗೆ ಆದ್ಯತೆ ನೀಡಬೇಕು. ಧ್ವನಿ ಇಲ್ಲದವರಿಗೆ ನಾವು ಶಕ್ತಿ ತುಂಬಬೇಕು. ಅರ್ಹರಿಗೆ, ಬಡವರಿಗೆ ಸರ್ಕಾರದ ಸವಲತ್ತು ನಿಯಮಾನುಸಾರ, ಪಾರದರ್ಶಕವಾಗಿ ತಲುಪಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ರೈತರಿಗೆ ಬೆಳೆ ಪರಿಹಾರ ನೀಡುವುದು ಸರ್ಕಾರದ ತತ್‌ಕ್ಷಣದ ಪರಿಹಾರ. ಅವರಿಗೆ ಬೆಳೆವಿಮೆ ಪರಿಹಾರ ಸಿಗುವಂತೆ ಮಾಡುವ ನೈತಿಕ ಜವಾಬ್ದಾರಿಯು ನಮಗಿದೆ ಎಂದು ಹೇಳಿದರು.

ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನದಲ್ಲಿ ಆರ್ಥಿಕ, ಸಾಮಾಜಿಕ ಹಿಂದುಳಿದವರಿಗೆ ಆದ್ಯತೆ ನೀಡಬೇಕು. ಸರ್ಕಾರದ ಸವಲತ್ತು ಅರ್ಹರಿಗೆ ಮಾತ್ರ ಮುಟ್ಟಬೇಕು ಎಂದ ಅವರು, ರೈತರಿಗೆ ಜಾನುವಾರುಗಳೇ ಜೀವನ. ಎಲ್ಲ ಹಸು, ದನಕರುಗಳನ್ನು ಲಸಿಕಾಕರಣಕ್ಕೆ ಒಳಪಡಿಸಬೇಕು ಎಂದರು.

ಜಿಲ್ಲೆಯ ಅಗತ್ಯ ಅಭಿವೃದ್ಧಿ ಯೋಜನೆಗಳಿಗೆ ಅನುದಾನದ ಕೊರತೆ ಇದ್ದರೆ, ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು. ಅನುದಾನ ಬಿಡುಗಡೆಯಾದ ಕಾಮಗಾರಿಗಳು ಕಳಪೆ ಆಗಿರದೆ, ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಅವಧಿಯಲ್ಲಿ ಅವುಗಳನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಗೈರಾದವರಿಗೆ ನೋಟಿಸ್:

ಸಭೆಗೆ ಅನುಮತಿ ಪಡೆಯದೆ ಗೈರಾಗಿದ್ದ ಮೂವರು ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಸೂಚಿಸಿದರು. ಅನುಮತಿ ಪಡೆಯದೆ ಸಭೆಗೆ ಗೈರಾಗಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಎಚ್.ಜಿ. ಗುಂಡಳ್ಳಿ, ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಅಮೃತ ಸೊಳಂಕಿ, ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮುರನಾಳ ಅವರಿಗೆ ನೋಟಿಸ್ ಕಳುಹಿಸಿ, ಉತ್ತರ ಪಡೆಯಲು ಹೇಳಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲೆಯ ಪಕ್ಷಿ ನೋಟ, ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಕುರಿತು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು. ಜಿಪಂ ಸಿಇಒ ಸ್ವರೂಪ ಟಿ.ಕೆ., ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ