ಜಿಪಿಎಲ್ ಸೀಸನ್ 2: ಕೂರ್ಗ್ ವಾರಿಯರ್ಸ್ ಕ್ವಾಲಿಫೈಯರ್ ಗೆ ಆಯ್ಕೆ

KannadaprabhaNewsNetwork | Updated : Apr 21 2024, 02:21 AM IST

ನಗರದ ಜನರಲ್‌ ತಿಮ್ಮಯ ಮೈದಾನದಲ್ಲಿ ಜಿಪಿಎಲ್‌ ಕ್ರಿಕೆಟ್ ಕೂಟ ನಡೆಯುತ್ತಿದೆ. ಕೂರ್ಗ್‌ ವಾರಿಯರ್ಸ್‌ ತಂಡ ಕ್ವಾಲಿಫೈಯರ್‌ಗೆ ಆಯ್ಕೆಗೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಗೌಡ ಯುವ ವೇದಿಕೆಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಜಿಪಿಎಲ್ ಸೀಸನ್ 2 ಕ್ರಿಕೆಟ್ ಕೂಟದ ಶನಿವಾರ ನಡೆದ ಪಂದ್ಯದಲ್ಲಿ ಎ ಪೂಲ್ ನಲ್ಲಿ ಕೂರ್ಗ್ ವಾರಿಯರ್ಸ್ ತಂಡ ಟೇಬಲ್ ಟಾಪರ್ಸ್ ಆಗಿ ಕ್ವಾಲಿಫೈಯರ್ ಗೆ ಆಯ್ಕೆಗೊಂಡಿತು.

ಮೊದಲ ಪಂದ್ಯದಲ್ಲಿ ಜಿ. ಕಿಂಗ್ಸ್ ತಂಡ, ಫೀನಿಕ್ಸ್ ಫ್ಲೈಯರ್ಸ್ ತಂಡದ ವಿರುದ್ಧ 22 ರನ್‌ಗಳ ಜಯ ಪಡೆದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಜಿ. ಕಿಂಗ್ಸ್ ನಿಗದಿತ 10 ಓವರ್ ಗಳಲ್ಲಿ ಯಾವುದೆ ವಿಕೆಟ್ ನಷ್ಟವಿಲ್ಲದೆ 127 ರನ್ ಗಳನ್ನು ಗಳಿಸಿತು. ತಂಡದ ಪರ ಸುಳ್ಯಕೋಡಿ ರಿಷಿ ಬೋಪಣ್ಣ 42 ಎಸೆತಗಳಲ್ಲಿ 100 ರನ್ ಪೇರಿಸುವ ಮೂಲಕ ಟೂರ್ನಮೆಂಟಿನಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದರು.

ನಂತರ ಗುರಿಯನ್ನು ಬೆನ್ನಟ್ಟಿದ ಫೀನಿಕ್ಸ್ ಫ್ಲೈಯರ್ಸ್ ತಂಡದ ಪರ ತಳೂರು ಶ್ರೇಯಸ್ 32 ಎಸೆತಗಳಲ್ಲಿ 50 ರನ್ ದಾಖಲಿಸುವ ಮೂಲಕ ತಮ್ಮ ಎರಡನೇ ಅರ್ಧ ಶತಕವನ್ನು ದಾಖಲಿಸಿದರು. ಜಿ. ಕಿಂಗ್ಸ್ ಪರ ರಿಷಿ ಬೋಪಣ್ಣ ಮತ್ತು ಭರತ್ ತಲಾ ಒಂದು ವಿಕೆಟ್ ಪಡೆದರು. ಜಿ.ಕಿಂಗ್ಸ್ ಪರ ಆಡಿದ ಮಹಿಳಾ ಆಟಗಾರ್ತಿ ಬಾಡನ ತಪಶ ಲೋಕೇಶ್ ಗಮನ ಸೆಳೆದರು.

ಎರಡನೇ ಪಂದ್ಯಾಟದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ಮತ್ತು ಕೂರ್ಗ್ ವಾರಿಯರ್ಸ್ ತಂಡದ ಪಂದ್ಯಾಟ ರೋಚಕ ಟೈ ನಲ್ಲಿ ಕೊನೆಗೊಂಡು ಎರಡೂ ತಂಡಕ್ಕೂ ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡರು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೂರ್ಗ್ ವಾರಿಯರ್ಸ್ ನಿಗದಿತ 10 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 113 ರನ್ ಕಲೆಹಾಕಿತು. ತಂಡದ ಪರ ಕುಡೇಕಲ್ಲು ಅನಿಲ್ 31 ಎಸೆತಕ್ಕೆ 54 ರನ್ ಗಳಿಸಿದರು‌. ಇದು ಅನಿಲ್ ಅವರ ವೈಯುಕ್ತಿಕ 3 ನೇ ಅರ್ಧ ಶತಕ. ಎಲೈಟ್ ತಂಡದ ಪರ ಲೋಕೇಶ್ 2 ವಿಕೆಟ್ ಪಡೆದರು.

ನಂತರ ಬ್ಯಾಟಿಂಗ್ ಮಾಡಿದ ಎಲೈಟ್ ತಂಡ ನಿಗದಿತ ಓವರ್‌ ನಲ್ಲಿ 2 ವಿಕೆಟ್ ನಷ್ಟಕ್ಕೆ 113 ರನ್‌ಗಳಿಸಿ ಪಂದ್ಯ ಟೈ ಆಯಿತು.‌ ಕೂರ್ಗ್ ವಾರಿಯರ್ಸ್ ತಂಡದ ಪರ ಮಿಥುನ್ ಕುದುಕುಳಿ ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಇದರೊಂದಿಗೆ ಎ ಪೂಲ್ ನಲ್ಲಿ ಕೂರ್ಗ್ ವಾರಿಯರ್ಸ್ ತಂಡ ಟೇಬಲ್ ಟಾಪರ್ಸ್ ಆಗಿ ಕ್ವಾಲಿಫೈಯರ್ ಗೆ ಆಯ್ಕೆಗೊಂಡಿತು.

ಮೂರನೇ ಪಂದ್ಯದಲ್ಲಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡವು ಕೂರ್ಗ್ ಹಾಕ್ಸ್ ವಿರುದ್ಧ 8 ವಿಕೆಟ್‌ಗಳ ಜಯ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಕೂರ್ಗ್ ಹಾಕ್ಸ್ ನಿಗದಿತ 10 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 65 ರನ್ ಗಳಿಸಿ 66 ರನ್ ಗಳ ಟಾರ್ಗೆಟ್ ನೀಡಿತು. ಪ್ಲಾಂಟರ್ಸ್ ಕ್ಲಬ್ ಪರ ವಾಗಿ ತುಷಾರ್ ಮೂವನ 2 ಓವರಿನಲ್ಲಿ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಪೂಜಾರಿರ ಮಿತ್ರ 2 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಪ್ಲಾಂಟರ್ಸ್ ಬಿಳಿಗೇರಿ ತಂಡ 7.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ತಂಡದ ಪರ ಪರ್ಲಕೋಟಿ ಜಶ್ವಿತ್ ಬೋಪಣ್ಣ 23 ಎಸೆತದಲ್ಲಿ 35 ರನ್ ಗಳಿಸಿದರು. ಹಾಕ್ಸ್ ತಂಡದ ಪರ ಕೊಂಬಾರನ ಹರ್ಷ ಮತ್ತು ಜೀವನ್ ತಲಾ ಒಂದು ವಿಕೆಟ್ ಪಡೆದರು.

ಇಂದಿನ ಪಂದ್ಯ: 9AM ಎಲೈಟ್ ಸ್ಕ್ವಾಡ್ 2 v/s ಕಾಫಿ ಕ್ರಿಕೆಟರ್ಸ್, 11 AM ಕೂರ್ಗ್ ಹಾಕ್ಸ್ v/s ದಿ ಮರಗೋಡಿಯನ್ಸ್, 1 PM ಎಲೈಟ್ ಸ್ಕ್ವಾಡ್ 2 v/s ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ