ಕೇರಳ ಗಡಿಯಲ್ಲಿ ಕೊರೋನಾ ಜಾಗೃತಿ, ತಪಾಸಣೆ: ಡಿಎಚ್‌ಒ

KannadaprabhaNewsNetwork |  
Published : Dec 21, 2023, 01:16 AM IST
೩೨ | Kannada Prabha

ಸಾರಾಂಶ

ಕಾಸರಗೋಡಿನಲ್ಲಿ ಪ್ರಸ್ತುತ 27 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 25 ಮಂದಿ ಹೋಮ್‌ ಐಸೋಲೇಶನ್‌ನಲ್ಲಿದ್ದರೆ, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಕಾಸರಗೋಡಿನಲ್ಲಿ ದಿನವೊಂದಕ್ಕೆ ಕೇವಲ ಒಂದೆರಡು ಮಂದಿಗೆ ಮಾತ್ರ ಕೊರೋನಾ ಕಂಡುಬರುತ್ತಿದೆ. ಅಲ್ಲಿನ ಆರೋಗ್ಯಾಧಿಕಾರಿ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದರೆ ದಕ್ಷಿಣ ಕನ್ನಡದಲ್ಲಿ ಇದುವರೆಗೆ ಕೊರೋನಾ ಸೋಂಕು ಕಂಡುಬಂದಿಲ್ಲ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೇರಳದಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದ.ಕ. ಜಿಲ್ಲೆಯ ಐದು ಗಡಿಗಳಲ್ಲಿ ಚೆಕ್‌ಪೋಸ್ಟ್‌ ಹಾಕಲಾಗಿದ್ದು, ಅಲ್ಲಿ ಜನರಿಗೆ ಕೋವಿಡ್‌ ಜಾಗೃತಿ ಹಾಗೂ ತಪಾಸಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಆರ್‌. ತಿಮ್ಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸರಗೋಡಿನಲ್ಲಿ ಪ್ರಸ್ತುತ 27 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 25 ಮಂದಿ ಹೋಮ್‌ ಐಸೋಲೇಶನ್‌ನಲ್ಲಿದ್ದರೆ, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಕಾಸರಗೋಡಿನಲ್ಲಿ ದಿನವೊಂದಕ್ಕೆ ಕೇವಲ ಒಂದೆರಡು ಮಂದಿಗೆ ಮಾತ್ರ ಕೊರೋನಾ ಕಂಡುಬರುತ್ತಿದೆ. ಅಲ್ಲಿನ ಆರೋಗ್ಯಾಧಿಕಾರಿ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆದರೆ ದಕ್ಷಿಣ ಕನ್ನಡದಲ್ಲಿ ಇದುವರೆಗೆ ಕೊರೋನಾ ಸೋಂಕು ಕಂಡುಬಂದಿಲ್ಲ. ಆದರೆ ಕೇರಳದಿಂದ ನಿತ್ಯವೂ ನೂರಾರು ಮಂದಿ ದಕ್ಷಿಣ ಕನ್ನಡಕ್ಕೆ ಆಗಮಿಸುತ್ತಿರುವುದರಿಂದ ಸರ್ಕಾರದ ಸೂಚನೆ ಮೇರೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಕೇರಳ- ಕರ್ನಾಟಕ ನಡುವೆ ಜನರ ಸಂಚಾರ ಹೆಚ್ಚಿರುವ ಗಡಿ ಪ್ರದೇಶಗಳಾದ ತಲಪಾಡಿ, ಸಾರಡ್ಕ, ಸ್ವರ್ಗ, ಸುಳ್ಯಪದವು, ಜಾಲ್ಸೂರಿನಲ್ಲಿ ಚೆಕ್‌ಪೋಸ್ಟ್‌ ಹಾಕಲಾಗಿದೆ. ಕೋವಿಡ್‌ ಜಾಗೃತಿಯನ್ನು ಮೈಕ್‌ಗಳಲ್ಲಿ ಹೇಳಲಾಗುತ್ತಿದೆ. ಜ್ವರ, ಶೀತ ಲಕ್ಷಣಗಳಿದ್ದವರನ್ನು ಮಾತ್ರ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುವುದು. ಆದರೆ ಅಂತಾರಾಜ್ಯ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದರು.ನಿಲ್ದಾಣಗಳಲ್ಲಿ ಜಾಗೃತಿ: ಜತೆಗೆ ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣದಲ್ಲಿ ಕೋವಿಡ್‌ ಜಾಗೃತಿಗೆ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಐಎಲ್‌ಐ/ ಸಾರಿ ಪ್ರಕರಣಗಳು ದಾಖಲಾದರೆ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುವುದು. ಜಿಲ್ಲೆಯ ವೆನ್ಲಾಕ್‌ ಆಸ್ಪತ್ರೆಯ ವೈರಾಲಜಿ ಲ್ಯಾಬ್‌ನಲ್ಲಿ ಕೋವಿಡ್‌ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಲಾಗಿದ್ದು, ಇಂದಿನಿಂದಲೇ ಕೋವಿಡ್‌ ಮಾದರಿ ಪರೀಕ್ಷೆಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದರು.321 ಪರೀಕ್ಷೆ ಗುರಿ:ದ.ಕ. ಜಿಲ್ಲೆಯಲ್ಲಿ ಪ್ರತಿದಿನ 321 ಮಂದಿಯ ಕೋವಿಡ್‌ ಪರೀಕ್ಷೆ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಇವರಲ್ಲಿ 125 ಮಂದಿಯ ರ್‍ಯಾಪಿಡ್‌ ಟೆಸ್ಟ್‌ ಹಾಗೂ 221 ಮಂದಿಯ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಬೇಕಿದೆ. ಪ್ರಸ್ತುತ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಂದು ಲಕ್ಷ ಕಿಟ್‌ಗಳಿದ್ದು, ವಿಟಿಎಂ 300 ಕಿಟ್‌ಗಳಿವೆ, ನಾಳೆಯೊಳಗೆ 1 ಸಾವಿರ ವಿಟಿಎಂ ಕಿಟ್‌ಗಳು ಜಿಲ್ಲೆಗೆ ಬರಲಿವೆ ಎಂದು ತಿಳಿಸಿದರು.ಆಕ್ಸಿಜನ್‌ ಸನ್ನದ್ಧ:ಕೊರೋನಾ ಮುನ್ನೆಚ್ಚರಿಕೆಯಾಗಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ವೆನ್ಲಾಕ್‌ ಆಸ್ಪತ್ರೆ, ಲೇಡಿಗೋಶನ್ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಘಟಕಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಸೂಚಿಸಲಾಗಿದೆ. ಒಟ್ಟು 10,986 ಬೆಡ್‌ಗಳನ್ನು ಮೀಸಲಿರಿಸಲಾಗಿದೆ. ಈ ಪೈಕಿ ಆಕ್ಸಿಜನ್‌ ಬೆಡ್‌ಗಳು 1,376 ಇದ್ದು, 722 ಐಸಿಯು ಬೆಡ್‌ಗಳು, 336 ವೆಂಟಿಲೇಟರ್ ಬೆಡ್‌ಗಳಿವೆ ಎಂದು ಡಾ.ತಿಮ್ಮಯ್ಯ ಮಾಹಿತಿ ನೀಡಿದರು.ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ. ಸದಾಶಿವ ಶಾನುಭಾಗ್‌ ಇದ್ದರು.ಶಬರಿಮಲೆ ಭಕ್ತರಿಗೆ ಲಕ್ಷಣ ಇದ್ದರೆ ಪರೀಕ್ಷೆಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಹೋದವರು ಮತ್ತೆ ಜಿಲ್ಲೆಗೆ ಬರುವ ವೇಳೆ ಕೋವಿಡ್‌ ಸಂಬಂಧಿತ ಲಕ್ಷಣಗಳು ಕಾಣಿಸಿಕೊಂಡರೆ ಅಂಥವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಇದೇ ರೀತಿಯಲ್ಲಿ ಕೇರಳದ ವಿದ್ಯಾರ್ಥಿಗಳು ಜಿಲ್ಲೆಗೆ ಬಂದಾಗ ಕೊರೋನಾ ಲಕ್ಷಣ ಕಾಣಿಸಿಕೊಂಡರೆ ಐಸೋಲೇಶನ್‌ ಮಾಡಿ ಪರೀಕ್ಷೆಗೆ ಒಳಪಡಿಸಲು ಎಲ್ಲ ಕಾಲೇಜುಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ತಿಳಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ