ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ತಾಲೂಕಿನಲ್ಲಿ ಕೆಎಫ್‌ಡಿ ಆತಂಕದ ನಡುವೆ ಈಗ ಮತ್ತೆ ಕೊರೋನಾ ಕಾಣಿಸಿಕೊಂಡಿದೆ. ತಾಲೂಕಿನಲ್ಲಿ ಈಗಾಗಲೇ ಒಂದು ಕೆಎಫ್ಡಿ ಪ್ರಕರಣ ಕಂಡುಬಂದಿದೆ. ಯಾವುದೇ ಕ್ಷಣದಲ್ಲಿ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಆರೋಗ್ಯ ಇಲಾಖೆ ಈಗಿನಿಂದಲೇ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ ಕೊರೋನಾ ಮುಂಜಾಗ್ರತೆ ಕುರಿತಂತೆ ಮಂಗಳವಾರ ಕರೆದಿದ್ದ ಆರೋಗ್ಯ ಇಲಾಖೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸರ್ಕಾರಿ ಅಧಿಕಾರಿಗಳ ಸೇರಿದ್ದ ತುರ್ತು ಸಭೆಯಲ್ಲಿ ಮಾತನಾಡಿ, ಕೊರೋನಾ ಸೋಂಕು ಕಳೆದ ಎರಡು ವರ್ಷಗಳ ಹಿಂದಿನಷ್ಟು ಭೀಕರತೆ ಕಂಡುಬಂದಿಲ್ಲ. ಆದರೆ, ಈ ಬಗ್ಗೆ ಖಂಡಿತಾ ಉದಾಸೀನತೆ ಸಲ್ಲದು ಎಂದರು.ಸರ್ಕಾರಿ ವೈದ್ಯರು ಮಾತ್ರವಲ್ಲದೇ ಖಾಸಗಿ ವೈದ್ಯರು ಸಹ ಎಚ್ಚರಿಕೆ ವಹಿಸಬೇಕು. ಅನುಮಾನ ಕಂಡುಬಂದಲ್ಲಿ ತಪಾಸಣೆ ಬಿಗಿಗೊಳಿಸಬೇಕು. ಪಾಸಿಟಿವ್ ಕಂಡುಬಂದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ. ಆದರೆ, ತಪಾಸಣೆಗೆ ಹಿಂದೇಟು ಮಾತ್ರ ಹಾಕಬಾರದು ಎಂದೂ ಹೇಳಿದರು.
ಕಾಂಗ್ರೆಸ್ ಸರ್ಕಾರ ವಿಫಲ:ತಾಲೂಕಿನಲ್ಲಿ ಒಂದು ಕೆಎಫ್ಡಿ ಪ್ರಕರಣ ಕಂಡುಬಂದಿದೆ. ಬಿಸಿಲಿನ ತಾಪಮಾನ ಏರುತ್ತಿರುವ ಹಿನ್ನೆಲೆ ಸೋಂಕು ಯಾವುದೇ ಕ್ಷಣದಲ್ಲಿ ವ್ಯಾಪಿಸುವ ಆತಂಕವಿದೆ. ಹೊಸನಗರ ತಾಲೂಕಿನ ನಗರದ ಸಮೀಪ ಅಡಕೆ ತೋಟದಲ್ಲಿ ಒಂದೇ ಕಡೆ ಸತ್ತ ನಾಲ್ಕು ಮಂಗಗಳ ಶವ ಪತ್ತೆಯಾಗಿದೆ. ಡಿಎಚ್‍ಒ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಲಸಿಕೆ ಒದಗಿಸುವಲ್ಲಿ ಈ ಸರ್ಕಾರ ವಿಫಲವಾಗಿದೆ. ಗ್ರಾ.ಪಂ. ಮಟ್ಟದಲ್ಲಿ ಈ ಬಗ್ಗೆ ಜನಜಾಗೃತಿ ಮೂಡಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಕ್ಕನಗೌಡರ್, ತಾಪಂ ಇಒ ಎಂ.ಶೈಲಾ, ತಾಲೂಕು ಆರೋಗ್ಯ ವೈಧ್ಯಾಧಿಕಾರಿ ಡಾ. ನಟರಾಜ್, ಬಿಇಒ ವೈ.ಗಣೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಆಶಾಲತಾ, ಪಪಂ ಸಿಒ ಕುರಿಯಾಕೋಸ್ ಮುಂತಾದವರು ಇದ್ದರು.- - - ಬಾಕ್ಸ್ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆ: ವೈದ್ಯಾಧಿಕಾರಿ ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಗಣೇಶ್ ಭಟ್ ಮಾತನಾಡಿ, ಜೆಸಿ ಆಸ್ಪತ್ರೆಯಲ್ಲಿ ಕೋವಿಡ್ ಮತ್ತು ಕೆಎಫ್‍ಡಿ ಸೋಂಕಿನ ಚಿಕಿತ್ಸೆಗೆ ಅಗತ್ಯವಿರುವ ಪಿ.ಪಿ. ಕಿಟ್ ಔಷಧಿ ಸೇರಿದಂತೆ ಎಲ್ಲ ಸಿದ್ಧತೆಗಳಿವೆ. ಆಸ್ಪತ್ರೆಯಲ್ಲಿರುವ ಎಲ್ಲ 100 ಹಾಸಿಗೆಗಳಿಗೂ ಆಕ್ಸಿಜನ್ ಸಂಪರ್ಕ ಕಲ್ಪಿಸಲಾಗಿದೆ. ಐಸಿಯು ವಾರ್ಡಿನಲ್ಲಿ 23 ಹಾಸಿಗೆಗಳಿವೆ ಎಂದರು. ಹೆರಿಗೆ ಮತ್ತು ನವಜಾತ ಶಿಶು ಆರೈಕೆಯಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮಾಡಿದ ಕಾರ್ಯವನ್ನು ಮೆಚ್ಚಿ ಜೆ.ಸಿ. ಆಸ್ಪತ್ರೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ. 7 ತಿಂಗಳ ಅವಧಿಯಲ್ಲಿ ಈ ಆಸ್ಪತ್ರೆಯಲ್ಲಿ 700 ಹೆರಿಗೆಗಳಾಗಿವೆ. ಮೂರು ವರ್ಷಗಳ ಈ ಸಾಧನೆಗೆ ಪ್ರತಿ ವರ್ಷಕ್ಕೆ ಆಸ್ಪತ್ರೆಗೆ ಬಹುಮಾನದ ರೂಪದಲ್ಲಿ ತಲಾ ₹6 ಲಕ್ಷ ಲಭಿಸಲಿದೆ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ಶಾಸಕ ಆರಗ ಜ್ಞಾನೇಂದ್ರ ಅಭಿನಂದನೆ ಸಲ್ಲಿಸಿದರು.
- - - -26ಟಿಟಿಎಚ್01:ತೀರ್ಥಹಳ್ಳಿ ಪಟ್ಟಣದ ಜೆಸಿ ಆಸ್ಪತ್ರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕೊರೋನಾ ಮುಂಜಾಗ್ರತಾ ತುರ್ತು ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು.