ಕಾರ್ಪೋರೇಟ್ ಕಂಪನಿಗಳೇ ದೇಶ ಬಿಟ್ಟು ತೊಲಗಿ

KannadaprabhaNewsNetwork |  
Published : Aug 10, 2024, 01:36 AM IST
ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯವರು ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ  ಪ್ರತಿರೋಧ ಕಾರ್ಪೊರೇಟ್ ಬಹು ರಾಷ್ಟ್ರೀಯ ಕಂಪನಿಗಳ ಭೂತ ದಹನ ಕಾರ್ಯಕ್ರಮ ನಡೆಸಿದರು. | Kannada Prabha

ಸಾರಾಂಶ

Corporate companies have left the country

-ಪ್ರತಿರೋಧ ಕಾರ್ಪೊರೇಟ್ ಬಹುರಾಷ್ಟ್ರೀಯ ಕಂಪನಿಗಳ ಭೂತ ದಹನ

------

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕಾರ್ಪೊರೇಟ್ ಬಹುರಾಷ್ಟ್ರೀಯ ಕಂಪನಿಗಳ ಭೂತ ದಹನ ಕಾರ್ಯಕ್ರಮವನ್ನು ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪದಾಧಿಕಾರಿಗಳು, ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ರೈತರ ಲಕ್ಷಾಂತರ ಎಕರೆ ಭೂಮಿಗಳನ್ನು ವಶಪಡಿಸಿಕೊಂಡು ಕಂಪನಿಗಳಿಗೆ ನೀಡಲಾಗಿದೆ. ಖಾಸಗೀಕರಣದ ಹೆಸರಿನಲ್ಲಿ ನೂರಾರು ಸಾರ್ವಜನಿಕ ಉದ್ದಿಮೆಗಳನ್ನು ದುಗ್ಗಾಣಿ ಬೆಲೆಗೆ ಕಂಪನಿಗಳಿಗೆ ನೀಡಲಾಗಿದೆ. ಮಾಲ್‍ಗಳ ಮೂಲಕ ಚಿಲ್ಲರೆ ವ್ಯಾಪಾರಕ್ಕೂ ಕಂಪನಿಗಳಿಗೆ ಕಾಲಿಡಲು ಅವಕಾಶ ಕೊಟ್ಟು ಸಣ್ಣ ವ್ಯಾಪಾರಸ್ಥರನ್ನು ಮುಳುಗಿಸಲಾಗುತ್ತಿದೆ. ಭೂ ಕಾಯ್ದೆ ತಿದ್ದುಪಡಿ ಮೂಲಕ ರೈತರ ಭೂಮಿಯನ್ನು ಬಾಚಲು ಹೊರಟಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಬೆಳೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಹೊರಟಿದ್ದಾರೆ. ಕಂಪನಿಗಳ ಮೇಲಿನ ತೆರಿಗೆ ದರ ಇಳಿಸಲಾಗುತ್ತಿದೆ. ಜಿಎಸ್‌ಟಿ - ಸೆಸ್ ರೂಪಗಳಲ್ಲಿ ಜನಸಾಮಾನ್ಯರನ್ನು ಸುಲಿಯಲಾಗುತ್ತಿದೆ ಎಂದು ದೂರಿದರು.

ರೈತ ಮುಖಂಡ ಭೂತಯ್ಯ ಮಾತನಾಡಿ, ಜನಸಾಮಾನ್ಯರ ಬದುಕು ಕುಸಿಯುತ್ತಿದೆ. ಬಂಡವಾಳಿಗರ ಆದಾಯ, ಆಸ್ತಿ ವ್ಯವಹಾರ ಏರುತ್ತಿದೆ. ದೇಶದ ಮೂರನೇ ಒಂದು ಭಾಗದಷ್ಟು ಆಸ್ತಿ ದೇಶದ ಕೇವಲ 1% ಜನರ ಕೈಗಳಲ್ಲಿದೆ. ಈ ಅವಧಿಯಲ್ಲಿ ಬಹುಕೋಟ್ಯಾಧೀಶರ ಸಂಖ್ಯೆ 56 ರಿಂದ 169ಕ್ಕೆ ಏರಿದೆ. ಮೋದಿ ಅವರ ಪರಮಾಪ್ತರಾದ ಆದಾನಿ, ಅಂಬಾನಿ ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನಗಳಲ್ಲಿದ್ದಾರೆ. ಆದಾನಿ ಆಸ್ತಿ 2013ರಲ್ಲಿ 25,792 ರು. ಕೋಟಿ ಇದ್ದದ್ದು 2022ರ ಹೊತ್ತಿಗೆ 7,48,800 ರು. ಕೋಟಿ ಆಯಿತು. ಅಂದರೆ ಈ ಅವಧಿಯಲ್ಲಿ 30ಪಟ್ಟು ಹೆಚ್ಚಾಗಿದೆ. ಅಂಬಾನಿ ಆಸ್ತಿ 2014ರಲ್ಲಿ 1,54,742 ರು. ಕೋಟಿ ಇದ್ದದ್ದು 2022ರ ಹೊತ್ತಿಗೆ 7.54.620 ರು. ಕೋಟಿ ಆಗಿದೆ. ಅಂದರೆ 5 ಪಟ್ಟು ಹೆಚ್ಚಾಗಿದೆ. ಅಭಿವೃದ್ಧಿಯ ಮುಖವಾಡದಲ್ಲಿ ನಡೆಯುತ್ತಿರುವ ದೇಶದ ಕೊಳ್ಳೆಯನ್ನು, ಜನಸಾಮಾನ್ಯರ ಸುಲಿಗೆಯನ್ನು ನಾವು ಪ್ರತಿರೋಧಿಸಬೇಕಿದೆ. ಕಂಪನಿಗಳ ಕೈಗೊಂಬೆಗಳಾಗಿರುವ, ಅವುಗಳ ಕಮಿಷನ್ ಏಜೆಂಟ್ ಗಳಾಗಿರುವ ಸರ್ಕಾರಗಳನ್ನು ಎಚ್ಚರಿಸಬೇಕಿದೆ. ಈ ವಾಸ್ತವವನ್ನು ಜನಸಾಮಾನ್ಯರ ಗಮನಕ್ಕೆ ತರಲು ಪ್ರತಿರೋಧ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

ಕೃಷಿಯ ಮೇಲಿನ ಕಾರ್ಪೋರೇಟ್ ಆಕ್ರಮಣ ನಿಲ್ಲಲಿ, ರೈತರ ಬೆಳೆಗಳಿಗೆ ಎಂ.ಎಸ್.ಪಿ ಖಾತ್ರಿಯಾಗಲಿ, ರೈತರ ಹಾಗೂ ಜನಸಾಮಾನ್ಯರ ಬದುಕಿಗೆ ಕಂಟಕವಾಗಿರುವ ವಿದ್ಯುತ್ ಖಾಸಗೀಕರಣವಾಗಬಾರದು. ಕಂಪನಿಗಳ ಹಿತಕಾಯಲು ತಂದಿರುವ ಕಾರ್ಮಿಕ ವಿರೋಧಿ ನಾಲ್ಕು ಕೋಡ್‍ಗಳು ರದ್ದಾಗಬೇಕು ಉದ್ಯೋಗ ಭದ್ರತೆ ದೇಶದ ನೀತಿಯಾಗಬೇಕು. ಹಿತ್ತಲ ಬಾಗಿಲಿನಿಂದ ನುಗ್ಗಿ ಮೀಸಲಾತಿಯನ್ನು ಸರ್ವನಾಶ ಗೊಳಿಸುತ್ತಿರುವ ಕಾರ್ಪೋರೇಟ್ ಪರ ಖಾಸಗೀಕರಣಕ್ಕೆ ಧಿಕ್ಕಾರವಿದೆ. ಖಾಸಗಿ ಕ್ಷೇತ್ರದಲ್ಲು ಮೀಸಲಾತಿ ಜಾರಿಯಾಗಬೇಕು. ಸಣ್ಣ-ಮಧ್ಯಮ ಉದ್ದಿಮ ಸರ್ವನಾಶಗೊಳಿಸಿ ಯುವಜನರನ್ನು ನಿರುದ್ಯೋಗದ ಕೂಪಕ್ಕೆ ತಳ್ಳಿರುವ ಕಾರ್ಪೋರೇಟ್ ಕಂಪನಿಗಳಿಗೆ ಕಡಿವಾಣ ಬೀಳಬೇಕು ಎಂದು ಆಗ್ರಹಿಸಲಾಯಿತು.

ಕುಮಾರ್ ಸಮತಳ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹೋರಕೇರಪ್ಪ, ಮಲ್ಲಿಕಾರ್ಜನ್, ಧನಂಜಯ, ಹಂಪಣ್ಣ, ಷಫಿವುಲ್ಲಾ, ಶಿವರುದ್ರಪ್ಪ, ಸಿದ್ದೇಶ್, ಶಿವಕುಮಾರ್ ಭಾಗವಹಿಸಿದ್ದರು.

-----

ಫೋಟೋ: 9hsd9:

ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯವರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿರೋಧ ಕಾರ್ಪೊರೇಟ್ ಬಹುರಾಷ್ಟ್ರೀಯ ಕಂಪನಿಗಳ ಭೂತ ದಹನ ಕಾರ್ಯಕ್ರಮ ನಡೆಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ