ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ನಿಗಮ : ಸಿಎಂ

KannadaprabhaNewsNetwork |  
Published : May 28, 2025, 11:54 PM ISTUpdated : May 29, 2025, 09:46 AM IST
JAI HIND 7 | Kannada Prabha

ಸಾರಾಂಶ

ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಅದರ ಜತೆಗೆ ಸೇನಾ ಕ್ಯಾಂಟೀನ್‌ (ಮಿಲ್ಟ್ರಿ ಕ್ಯಾಂಟೀನ್‌)ಗಳಲ್ಲಿನ ಸಾಮಗ್ರಿಗಳಿಗೆ ಅಬಕಾರಿ ಸುಂಕ ವಿಧಿಸುವುದರಿಂದ ವಿನಾಯ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

 ಬೆಂಗಳೂರು : ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಅದರ ಜತೆಗೆ ಸೇನಾ ಕ್ಯಾಂಟೀನ್‌ (ಮಿಲ್ಟ್ರಿ ಕ್ಯಾಂಟೀನ್‌)ಗಳಲ್ಲಿನ ಸಾಮಗ್ರಿಗಳಿಗೆ ಅಬಕಾರಿ ಸುಂಕ ವಿಧಿಸುವುದರಿಂದ ವಿನಾಯ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಭಾರತೀಯ ಸೇನೆಗೆ ಗೌರವ ಸೂಚಿಸುವ ಉದ್ದೇಶದಿಂದ ಎಐಸಿಸಿ ಸೂಚನೆ ಮೇರೆಗೆ ಕೆಪಿಸಿಸಿಯಿಂದ ಬುಧವಾರ ಪುರಭವನದಲ್ಲಿ ಆಯೋಜಿಸಿದ್ದ ಜೈ ಹಿಂದ್‌ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿದ್ದರಾಮಯ್ಯ ಮಾತನಾಡಿದರು.

ಭಾರತದ ಸೈನಿಕರಿಗೆ ಅನುಕೂಲವಾಗುವಂತಹ ಎಲ್ಲ ಕ್ರಮಗಳನ್ನೂ ರಾಜ್ಯ ಸರ್ಕಾರ ಮಾಡಲಿದೆ. ಶಿಕ್ಷಕರು, ವೈದ್ಯರು, ತಂದೆ-ತಾಯಿ, ರೈತರನ್ನು ಸ್ಮರಿಸುವಂತೆ ನಮ್ಮ ಸೈನಿಕರನ್ನು ಸ್ಮರಿಸಿ, ಗೌರವಿಸಬೇಕು. ಸೇನಾ ಕ್ಯಾಂಟೀನ್‌ಗಳಲ್ಲಿ ಮಾರಾಟವಾಗುವ ಸಾಮಗ್ರಿಗಳಿಗೆ ಅಬಕಾರಿ ಸುಂಕ ವಿಧಿಸುತ್ತಿರುವುದನ್ನು ರದ್ದತಿಗೆ ನಿರ್ಧರಿಸಲಾಗಿದೆ. ಅದರ ಜತೆಗೆ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿಗೆ ಪ್ರತ್ಯೇಕ ನಿಗಮ ರಚನೆಯ ಮನವಿಯಿದ್ದು, ನಿಗಮ ರಚನೆಗೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.

ಖಾಲಿ ಹುದ್ದೆ ಭರ್ತಿ ಮಾಡಿ:

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮಾತನಾಡಿ, ಭಾರತೀಯ ಸೇನೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ. ಸದ್ಯ 1.75 ಲಕ್ಷ ಹುದ್ದೆಗಳು ಖಾಲಿಯಿರುವ ಅಂದಾಜಿದ್ದು, ಅದರಲ್ಲಿ 25 ಸಾವಿರದಷ್ಟು ಅಧಿಕಾರಿ ಹುದ್ದೆಗಳಾಗಿವೆ. ಸೇನೆಗೆ ನೇಮಕಾತಿ ಮಾಡದಿದ್ದರೆ ದೇಶ ಸೇವೆ ಮಾಡುತ್ತಿರುವ ಸೇನಾ ಪಡೆಗಳಿಗೆ ನ್ಯಾಯ ಒದಗಿಸದಂತಾಗಲಿದೆ. ವಾಯುಪಡೆಯಲ್ಲಿ 45ರಿಂದ 48 ಏರ್ ಸ್ಕ್ವಾರ್ಡನ್‌ಗಳು ಇರಬೇಕು. ಆದರೆ, ಸದ್ಯ 24 ಏರ್‌ ಸ್ಕ್ವಾರ್ಡನ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಅರ್ಧದಷ್ಟು ಸಿಬ್ಬಂದಿಯಿದ್ದರೆ ಶತ್ರುಗಳಿಗೆ ತಕ್ಕ ಶಾಸ್ತಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

3ನೇ ದೇಶದ ಹಸ್ತಕ್ಷೇಪಕ್ಕೆ ಆಕ್ಷೇಪ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಮಾತನಾಡಿ, ಪಾಕಿಸ್ತಾನದ ಮೇಲಿನ ಆಪರೇಷನ್‌ ಸಿಂದೂರದ ಕದನ ವಿರಾಮದ ಬಗ್ಗೆ ಕೇಂದ್ರ ಸರ್ಕಾರಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಹಿತಿ ನೀಡಿದರು. ನಮ್ಮ ದೇಶದ ವಿಚಾರದಲ್ಲಿ 3ನೇ ದೇಶದ ಹಸ್ತಕ್ಷೇಪದ ಬಗ್ಗೆ ಕೇಂದ್ರ ಸರ್ಕಾರ ಈವರೆಗೆ ಉತ್ತರ ನೀಡಿಲ್ಲ. ಅಲ್ಲದೆ, ಯಾವುದೇ ಕದನ ವಿರಾಮಕ್ಕೂ ಮುನ್ನ ಒಪ್ಪಂದಗಳಾಗುತ್ತವೆ. ಆದರೆ, ಈ ಬಾರಿ ಯಾವುದೇ ಒಪ್ಪಂದಗಳು ಆಗದೇ ಕದನ ವಿರಾಮ ಘೋಷಿಸಲಾಯಿತು. ಇವೆಲ್ಲದರ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕು. ನಮ್ಮ ಸೈನಿಕರ ಹೋರಾಟ, ಶ್ರಮ ವ್ಯರ್ಥವಾಗದಂತೆ ಮಾಡಬೇಕಿದೆ ಎಂದರು.-ಬಾಕ್ಸ್‌-ಹುತಾತ್ಮರ ಪೋಷಕರಿಗೆ

ಗೌರವ ಸಮರ್ಪಣೆ

ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೇನಾಧಿಕಾರಿಗಳು, ಸೈನಿಕರು, ಹುತಾತ್ಮ ಯೋಧರ ಪೋಷಕರಿಗೆ ಗೌರವ ಸಲ್ಲಿಸಲಾಯಿತು. ಅಶೋಕ ಚಕ್ರ ಪುರಸ್ಕೃತ ಹುತಾತ್ಮ ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌, ಕರ್ನಲ್‌ ಜೋಜನ್‌ ಥಾಮಸ್‌, ಮೇಜರ್‌ ಎಂ.ಸಿ. ಮುತ್ತಣ್ಣ, ಮೇಜರ್‌ ಗಣೇಶ್‌ ಮದ್ದಪ್ಪ, ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌, ಮೇಜರ್‌ ಮೋಹನ್‌ ಗಂಗಾಧರನ್, ಮೇಜರ್‌ ಶಫೀಕ್‌ ಮೊಹಮದ್‌ ಖಾನ್‌, ಕರ್ನಲ್‌ ರಾಮಮೂರ್ತಿ ಅವರ ಕುಟುಂಬದವರನ್ನು ಗೌರವಿಸಲಾಯಿತು.

 ದೇಶ ವಿಭಜನೆ ನಂತರದಿಂದಲೂ ಭಾರತ-ಪಾಕಿಸ್ತಾನ ನಡುವೆ ತಿಕ್ಕಾಟ ನಿರಂತರವಾಗಿದೆ. ಪಾಕಿಸ್ತಾನ ಕಾಲು ಕೆರೆದು ಜಗಳಕ್ಕೆ ಬರುತ್ತಿದ್ದು, ಉಗ್ರರನ್ನು ಸಾಕುತ್ತಿದೆ. ಅವರನ್ನು ಮಟ್ಟಹಾಕುವುದು ಭಾರತೀಯ ಸೇನೆಯ ಜತೆಗೆ ನಮ್ಮೆಲ್ಲರ ಕರ್ತವ್ಯ. ದೇಶದ ಸಾರ್ವಭೌಮತೆ, ಜನರ ರಕ್ಷಣೆಗೆ ಸೇನೆಯೇ ಕಾರಣ. ದೇಶ ಮತ್ತು ಸೇನೆ ವಿಚಾರ ಬಂದಾಗ 140 ಕೋಟಿ ಜನ ಒಗ್ಗಟ್ಟಾಗಬೇಕು. ಭಾರತೀಯ ಸೇನೆ ಜತೆಗೆ ನಾವಿದ್ದೇವೆ ಎಂಬ ಸಂದೇಶ ಸಾರಬೇಕು. ಅದರ ಭಾಗವಾಗಿಯೇ ಜೈ ಹಿಂದ್‌ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸೈನಿಕರು ತ್ಯಾಗ ಮನೋಭಾವದಿಂದ ನಮ್ಮನ್ನೆಲ್ಲ ರಕ್ಷಣೆ ಮಾಡುತ್ತಿದ್ದಾರೆ. 

ಅವರನ್ನು ಸ್ಮರಿಸಿ, ಗೌರವಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಇತ್ತೀಚೆಗೆ ಪಹಲ್ಗಾಂನಲ್ಲಿನ ಉಗ್ರ ದಾಳಿಗೆ ಬದಲಾಗಿ ಭಾರತೀಯ ಸೇನೆಯು ಉಗ್ರರ ತಾಣಗಳನ್ನು ಪತ್ತೆ ಮಾಡಿ ಅವರನ್ನು ಮತ್ತು ಅವರ ನೆಲೆ ಧ್ವಂಸ ಮಾಡಿತು. ಅದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ. ಶಿಷ್ಟರನ್ನು ರಕ್ಷಿಸಿ-ದುಷ್ಟರನ್ನು ಸಂಹಾರ ಮಾಡಲಾಗಿದೆ. ಸೈನಿಕರನ್ನು ಹೆತ್ತ ಪ್ರತಿಯೊಬ್ಬ ತಂದೆ-ತಾಯಿ ಕೂಡ ವೀರರು ಎಂಬುದು ನನ್ನ ಅಭಿಪ್ರಾಯ. ದೇಶ ಕಾಯುವವರಿಗೆ ಜನ್ಮ ನೀಡಿದ್ದು ಅವರ ಪುಣ್ಯದ ಫಲ ಎಂದು ಹೇಳಿದರು. 

ಸೇನೆಯಲ್ಲಿ ಸೇವೆ ಸಲ್ಲಿಸಿದವರಿಗೆ ಒನ್‌ ರ್‍ಯಾಂಕ್‌ ಒನ್‌ ಪೆನ್ಷನ್‌ ವ್ಯವಸ್ಥೆ ಜಾರಿಗೆ ಆಗ್ರಹಿಸಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಆರ್ಥಿಕ ಪರಿಸ್ಥಿತಿ ಬಗ್ಗೆ ಮಾತನಾಡುತ್ತಿದೆ. ದೇಶ ಕಾಯುವವರಿಗೆ ಸೌಲಭ್ಯ ಕಲ್ಪಿಸುವುದಕ್ಕೆ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳುವುದು ಸರಿಯಲ್ಲ. ಕಾಂಗ್ರೆಸ್‌ ಪಕ್ಷವು ಸದನದ ಒಳಗೆ ಮತ್ತು ಹೊರಗೆ ಸೈನಿಕರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಹೋರಾಟ ಮತ್ತು ಪ್ರಶ್ನೆ ಮಾಡಲಿದೆ ಎಂದು ಹೇಳಿದರು.

 ಸೇನಾ ಜಾಕೆಟ್‌ನಲ್ಲಿ ಮಿಂಚಿದ ಗಣ್ಯರುಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಸೇನಾ ಸಮವಸ್ತ್ರದ ಜಾಕೆಟ್‌ ಮತ್ತು ಟೋಪಿ ಧರಿಸಿ ಗಮನ ಸೆಳೆದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‌ಸಿಂಗ್‌ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್‌ ಸೇರಿ ಇನ್ನಿತರರಿಗೆ ಮಾಜಿ ಸೈನಿಕರು ಸೇನಾ ಸಮವಸ್ತ್ರದ ಜಾಕೆಟ್‌ ಮತ್ತು ಟೋಪಿ ನೀಡಿದರು. 

ರಾಜ್ಯದಲ್ಲಿರುವ ಮಾಜಿ ಯೋಧರ ನೆರವಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವ ಚಿಂತನೆಯಿದ್ದು, ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ನಮ್ಮ ದೇಶ ಕಾಯುವ, ಸೇವೆ ಸಲ್ಲಿಸಿರುವ ಯೋಧರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್‌ ಪಕ್ಷವು ಸದಾ ದೇಶ ಹಾಗೂ ನಮ್ಮ ಸಶಸ್ತ್ರ ಪಡೆಗಳ ಪರವಾಗಿ ನಿಲ್ಲಲಿದೆ.

-ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ.

PREV
Read more Articles on

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ