ನಿವೃತ್ತ ನೌಕರರಿಗೆ ‘ ಆರೋಗ್ಯ ರಕ್ಷಾ ಯೋಜನೆ’ ಜಾರಿಗೆ ಮುಂದಾದ ಪಾಲಿಕೆ

KannadaprabhaNewsNetwork | Updated : May 06 2024, 07:35 AM IST

ಸಾರಾಂಶ

ಪಾಲಿಕೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೌಕರರು ಮತ್ತು ಅವಲಂಬಿತರಿಗೆ ಆರೋಗ್ಯ ಸೌಲಭ್ಯ ಒದಗಿಸಲು ‘ಪಿಂಚಣಿದಾರರ ಆರೋಗ್ಯ ರಕ್ಷಾ ಯೋಜನೆ’ ಆರಂಭಿಸಲು ಬಿಬಿಎಂಪಿ ಮುಂದಾಗಿದೆ.

 ಬೆಂಗಳೂರು :  ಪಾಲಿಕೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೌಕರರು ಮತ್ತು ಅವಲಂಬಿತರಿಗೆ ಆರೋಗ್ಯ ಸೌಲಭ್ಯ ಒದಗಿಸಲು ‘ಪಿಂಚಣಿದಾರರ ಆರೋಗ್ಯ ರಕ್ಷಾ ಯೋಜನೆ’ ಆರಂಭಿಸಲು ಬಿಬಿಎಂಪಿ ಮುಂದಾಗಿದೆ.

ನಿವೃತ್ತ ನೌಕರರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಒದಗಿಸುವಂತೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ. ರಾಜ್ಯ ಸರ್ಕಾರಿ ನಿವೃತ್ತ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಜಾರಿಗೊಳಿಸಲು ಬಿಬಿಎಂಪಿ ತಯಾರಿ ಮಾಡಿಕೊಂಡಿದೆ.

ಈ ಯೋಜನೆ ಆರಂಭಿಸಲು ಬಿಬಿಎಂಪಿ ಬಜೆಟ್‌ನಲ್ಲಿ ಈಗಾಗಲೇ 10 ಕೋಟಿ ರು. ಅನ್ನು ಮೂಲ ನಿಧಿಯಾಗಿ ಮೀಸಲಿಡಲಾಗಿದೆ. ಜತೆಗೆ, ಪಿಂಚಣಿದಾರರಿಂದ ಪ್ರತಿ ತಿಂಗಳು 300 ರು. ಕಡಿತಗೊಳಿಸಿ ಹೊಸ ಬ್ಯಾಂಕ್‌ನಲ್ಲಿ ಖಾತೆ ಆರಂಭಿಸಿ ಠೇವಣಿ ಇಡಲಾಗುತ್ತದೆ. ಈ ಠೇವಣಿ ಹಣದಿಂದ ಬರುವ ಬಡ್ಡಿಯಲ್ಲಿ ಆರೋಗ್ಯ ಸೌಲಭ್ಯ ನೀಡಲು ಯೋಜನೆ ರೂಪಿಸಲಾಗಿದೆ.

ಯೋಜನೆಯಿಂದ ಪಿಂಚಣಿದಾರರು ಗರಿಷ್ಠ 2 ಲಕ್ಷ ರು. ವರೆಗೆ ಸೌಲಭ್ಯ ಪಡೆಯಬಹುದಾಗಿದೆ. ಅವಲಂಬಿತ ಸದಸ್ಯರಾಗಿದ್ದರೆ 1 ಲಕ್ಷ ರು. ವರೆಗೆ ಸೌಲಭ್ಯ ಪಡೆಯಬಹುದಾಗಿದೆ.

ಅನುಷ್ಠಾನಕ್ಕೆ ಸಮಿತಿ ರಚನೆ:

ಯೋಜನೆ ಅನುಷ್ಠಾನಗೊಳಿಸಲು ಅಧಿಕಾರಿಗಳು ಹಾಗೂ ಪಿಂಚಣಿದಾರರ ಸಂಘದ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಸಮಿತಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಆಡಳಿತ, ಹಣಕಾಸು ಹಾಗೂ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು, ಆಡಳಿತ ವಿಭಾಗದ ಉಪ ಆಯುಕ್ತರು ಹಾಗೂ ಸಹಾಯಕ ಆಯುಕ್ತರು, ಕಾನೂನು ಕೋಶದ ಮುಖ್ಯಸ್ಥರು, ಮುಖ್ಯ ಲೆಕ್ಕಾಧಿಕಾರಿ, ಸಾರ್ವಜನಿಕ ಮತ್ತು ಕ್ಲಿನಿಲ್‌ ವಿಭಾಗದ ಮುಖ್ಯ ಆರೋಗ್ಯಾಧಿಕಾರಿಗಳು, ಮ್ಯಾನೇಜ್ಡ್‌ ಹೆಲ್ತ್‌ ಕೇರ್‌ ಯೋಜನೆಯ ನೋಡಲ್‌ ಅಧಿಕಾರಿ ಹಾಗೂ ಪಾಲಿಕೆ ಪಿಂಚಣಿದಾರ ಸಂಘದ ಐದು ಸದಸ್ಯರು ಇರಲಿದ್ದಾರೆ.

Share this article