ಕನ್ನಡಪ್ರಭ ವಾರ್ತೆ ಹಾಸನ
ಒಳ ಮೀಸಲಾತಿ ಸಂಬಂಧ ಎಸ್.ಸಿ. ಪಟ್ಟಿಯಲ್ಲಿಯ ೧೦೧ ಜಾತಿಗಳ ಸಮೀಕ್ಷೆ ಕಾರ್ಯದಲ್ಲಿ ಹಲವು ಲೋಪದೋಷಗಳು ಕಂಡುಬಂದಿದ್ದು, ಕೂಡಲೇ ಅವುಗಳನ್ನು ಸರಿಪಡಿಸಿ, ಸಮೀಕ್ಷೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಪರಿಶಿಷ್ಟ ಜಾತಿಯ ೧೦೧ ಜಾತಿಗಳ ಸಮೀಕ್ಷೆ ಕಾರ್ಯ ಮೇ ೫, ೨೦೨೫ರಿಂದ ಪ್ರಾರಂಭವಾಗಿದೆ. ಮೂರು ಹಂತಗಳಲ್ಲಿ ನಡೆಯುತ್ತಿರುವ ಈ ಸಮೀಕ್ಷೆ ಕಾರ್ಯ ಮೇ ೨೩ರಂದು ಕೊನೆಗೊಳ್ಳುತ್ತದೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಮೀಕ್ಷೆ ಕಾರ್ಯ ಮುಕ್ತಾಯಗೊಳ್ಳಲು ಇನ್ನೂ ೧೩ ದಿವಸ ಮಾತ್ರ ಬಾಕಿ ಇರುತ್ತದೆ. ಆದರೆ ಈ ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರು ಹಾಗೂ ಸಂಬಂಧಿತ ಜಾತಿಗಳ ಜನರ ನಡುವೆ ಸರಿಯಾದ ಹೊಂದಾಣಿಕೆಯಾಗದೆ ಸಮೀಕ್ಷೆ ಕಾರ್ಯ ಅಪೂರ್ಣಗೊಳ್ಳುವ ಆತಂಕ ಎದುರಾಗಿದೆ. ಆದುದರಿಂದ ತಾವು ಈ ಕೂಡಲೇ ಗಮನಹರಿಸಿ ಸಮೀಕ್ಷೆ ಕಾರ್ಯ ಯಶಸ್ವಿಯಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿ ಹಾಸನ ಜಿಲ್ಲೆ ಮನವಿ ಮಾಡುತ್ತಿದ್ದೇವೆ ಎಂದರು.ಗಣತಿದಾರರು ಭೇಟಿ ನೀಡಿಲ್ಲ:ಸಮೀಕ್ಷಾ ಕಾರ್ಯ ಪ್ರಾರಂಭವಾಗಿ ೧೨ ದಿನ ಕಳೆದರೂ ಬಹುತೇಕ ಹಳ್ಳಿ ಮತ್ತು ನಗರ ಪಟ್ಟಣದ ಮನೆಗಳಿಗೆ ಗಣತಿದಾರರು ಭೇಟಿ ನೀಡಿಲ್ಲ. ಈ ಬಗ್ಗೆ ಕೂಡಲೇ ಗಮನಹರಿಸಿ ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿ, ಸಮೀಕ್ಷೆ ಕಾರ್ಯ ಯಶಸ್ವಿಗೊಳಿಸಬೇಕೆಂದು ಮನವಿ ಮಾಡುತ್ತೇವೆ. ತಮ್ಮ ಆಯೋಗದಿಂದ ಸಮೀಕ್ಷೆಗಾಗಿ ರೂಪಿಸಲಾಗಿರುವ ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ದೋಷಗಳಿದ್ದು, ಅದನ್ನು ಸರಿಪಡಿಸಬೇಕು. ಮನೆ ಮನೆಗೆ ಭೇಟಿ ನೀಡುತ್ತಿರುವ ಗಣತಿದಾರರು ಸರ್ವರ್ ಸಮಸ್ಯೆ ಇದೆ, ನಾಳೆ ಬರುತ್ತೇವೆ ಎಂದು ಸಮೀಕ್ಷೆಯನ್ನು ಅರ್ಥದಲ್ಲಿ ನಿಲ್ಲಿಸಿ ಹೋದವರು ಈವರೆಗೆ ಬಂದಿರುವುದಿಲ್ಲ ಎಂದು ದೂರಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಿ ತಾಂತ್ರಿಕ ದೋಷ ಸರಿಪಡಿಸಬೇಕು ಎಂದರು.ಸರಳವಾದ ಪ್ರಶ್ನೆ ಕೇಳಲಿ:
ಸಮೀಕ್ಷೆದಾರರು ಹಳ್ಳಿಗಳಿಗೆ ಮನೆಮನೆಗೆ ಭೇಟಿ ನೀಡುವ ಸಮಯ ಮತ್ತು ದಿನಾಂಕವನ್ನು ಕರಪತ್ರದಲ್ಲಿ ಮುದ್ರಿಸಿ ಹಂಚಬೇಕು. ಸಮೀಕ್ಷೆ ಆ್ಯಪ್‌ನಲ್ಲಿ ಸುಮಾರು ೪೦ಕ್ಕೂ ಹೆಚ್ಚು ಪ್ರಶ್ನಾವಳಿ ಕೇಳಲಾಗಿದ್ದು, ಕೆಲವು ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರಿಸಲು ಅವಿದ್ಯಾವಂತ, ಅನಕ್ಷರಸ್ಥ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ನೀಡಲು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಸೂಕ್ತ ಗಮನಹರಿಸಿ ಪ್ರಶ್ನೆಗಳನ್ನು ಸರಳವಾಗಿ ಕೇಳಲು ಸಮೀಕ್ಷೆದಾರರಿಗೆ ಸೂಚಿಸಬೇಕು. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಒಂದೊಂದೇ ಒಂಟಿ ಮನೆಗಳು ಕಾಡಿನ ಸ್ಥಳಕ್ಕೆ ಗಣತಿದಾರರು ತಲುಪಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಈ ಮನೆಗಳಲ್ಲಿ ವಾಸಿಸುತ್ತಿರುವವರು ಮನೆಗಳಿಗೆ ಬೀಗ ಹಾಕಿಕೊಂಡು ಕೂಲಿ ಕೆಲಸಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗಿರುತ್ತಾರೆ. ಇದರಿಂದಾಗಿ ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ನಿಖರವಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಆಯೋಗ ಗಮನಹರಿಸಬೇಕು.ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಸಮೀಕ್ಷೆ ಕಾರ್ಯವನ್ನು ನಿಖರವಾಗಿ ಹಾಗೂ ವೈಜ್ಞಾನಿಕವಾಗಿ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಉಪಾಧ್ಯಕ್ಷ ಅಂಬೂಗ ಮಲ್ಲೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಪಿ. ಶಂಕರರಾಜು, ಎಸ್.ಸಿ. ಎಸ್.ಟಿ. ಅಧಿಕಾರಿಗಳ ಸಂಘದ ಅಧ್ಯಕ್ಷ ಎಚ್. ಕಾಡಯ್ಯ, ಕಾರ್ಯದರ್ಶಿ ನಾಗರಾಜು ಹೆತ್ತೂರ್, ಕಾಂಗ್ರೆಸ್ ಎಸ್.ಸಿ. ಘಟಕ ಜಿಲ್ಲಾಧ್ಯಕ್ಷ ದ್ಯಾವಪ್ಪ ಮಲ್ಲಿಗೆವಾಳ್, ನಗರಸಭೆ ಸದಸ್ಯ ಮಂಜುನಾಥ್ ಇತರರು ಉಪಸ್ಥಿತರಿದ್ದರು.